ಬಹುಶಃ ‘ಬಿಗ್ ಬಾಸ್’ನ ಯಾವ ಸೀಸನ್ ಬಗ್ಗೆಯೂ ಪ್ರೇಕ್ಷಕರಿಂದ ಇಷ್ಟೊಂದು ಟೀಕೆ-ಟಿಪ್ಪಣಿಗಳು ಕೇಳಿಬಂದಿರಲಿಲ್ಲ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಂತೂ ‘ಬಿಗ್ ಬಾಸ್’ ಬಗ್ಗೆ ಖಂಡಿಸಿ ಮಾತಾಡುತ್ತಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಈ ಕಾರ್ಯಕ್ರಮದಿಂದ ದೂರಾಗಬೇಕು, ಸಾಮಾಜಿಕ ಜವಾಬ್ದಾರಿ ಇರುವವರು ಇಂಥ ಕಾರ್ಯಕ್ರಮ ನಡೆಸಿಕೊಡಬಾರದು ಎಂಬ ಸಲಹೆ ಕೇಳಿಬರುತ್ತಿದೆ.
ಒಂದು ಕಾಲಕ್ಕೆ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಫ್ಯಾಮಿಲಿ ಶೋ, ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಕಾರ್ಯಕ್ರಮ ಎಂದು ಬಿಂಬಿಸಲಾಗಿತ್ತು. ಆದರೆ, ಈಗ ದ್ವೇಷದ ಕಾರ್ಯಕ್ರಮ, ಕ್ರೌರ್ಯದ ಕಾರ್ಯಕ್ರಮವಾಗಿದೆ. ಈ ಬಾರಿಯ ‘ಬಿಗ್ ಬಾಸ್’ನಲ್ಲಿ ಹೆಚ್ಚು ಹೈಲೈಟ್ ಆಗಿದ್ದು ಗಲಾಟೆಗಳು ಮತ್ತು ವಾಗ್ವಾದಗಳು. ಅಶ್ಲೀಲ ಪದ ಬಳಕೆ ಆಗುವುದರ ಜೊತೆಗೆ ಕೆಲವು ಜಗಳಗಳು ಹೊಡೆದಾಟದವರೆಗೂ ಹೋಗಿದ್ದಿದೆ. ಇಂಥದ್ದೊಂದು ಕಾರ್ಯಕ್ರಮ ಬೇಕಾ? ಎಂಬ ಚರ್ಚೆಯಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಲಿ, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಸಹ ನೋಡುವುದು ಕಷ್ಟ ಎಂಬ ಅಭಿಪ್ರಾಯ ಜನ ಸಾಮಾನ್ಯರಿಂದ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಮಧ್ಯೆ ಗುಂಪುಗಳಾಗುವುದು, ಆ ಗುಂಪುಗಳ ಮಧ್ಯೆ ಜಗಳಗಳಾಗುವುದು ಸಹಜ. ಅದು ಈ ಬಾರಿ ಕ್ರೌರ್ಯವಾಗಿ ಮಾರ್ಪಾಟ್ಟಿದೆ. ಅದರಿಂದಾಗಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಕಣ್ಣಿಗೆ ಬಲವಾದ ಪಟ್ಟು ಬಿದ್ದಿದೆ. ಅದು ಸರಿ ಹೋಗುವುದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕು. ಈಗಾಗಲೇ ಸುದೀಪ್ ಬಂದು ಪಂಚಾಯ್ತಿ ಮಾಡಿದ್ದಾರೆ. ತಪ್ಪು ಅರ್ಥ ಮಾಡಿಸಿ, ಹಲವರಿಂದ ಕ್ಷಮೆ ಕೇಳಿಸಿದ್ದಾರೆ. ಬಹುಶಃ ಮುಂದಿನ ವಾರದಿಂದ ಎಲ್ಲವೂ ಸರಿ ಹೋಗಬಹುದು.
ಸುದೀಪ್ ತಮ್ಮ ಕೆಲಸವನ್ನೇನೋ ಮಾಡುತ್ತಾರೆ. ಆದರೆ, ನಿಜವಾಗಲೂ ಇಂಥ ಟಾಸ್ಕ್ಗಳು ಬೇಕಾ? ನೀರಿಗೆ ಖಾರದ ಪುಡಿ ಬೆರಸಿ, ಸೋಪಿನ ಪುಡಿ ಸೇರಿಸಿ ಇನ್ನೊಬ್ಬರ ಮೇಲೆ ಎರಚುವುದು ಆಟವಾ? ಇಂಥದ್ದನ್ನೆಲ್ಲಾ ಆ ಕ್ಷಣಕ್ಕೆ ಸರಿ ಮಾಡುವುದಕ್ಕೆ ಸಾಧ್ಯವಿಲ್ಲವಾ? ಇದೆಲ್ಲ ಮುಗಿದ ಮೇಲೆ ಸುದೀಪ್ ಬಂದು ಇದು ಸರಿ, ಇದು ತಪ್ಪು ಎಂದು ಹೇಳಬೇಕಾ? ಇಂತಹ ಕೃತ್ಯಗಳು ಆಗುವಾಗ ಕಾರ್ಯಕ್ರಮದ ಆಯೋಜಕರು ಏನು ಮಾಡುತ್ತಿರುತ್ತಾರೆ? ಸರಿ, ತಪ್ಪುಗಳನ್ನು ತಿದ್ದುವ ‘ಬಿಗ್ ಬಾಸ್’ ಇವೆಲ್ಲಾ ನಡೆಯುವಾಗ ಯಾಕೆ ಮೌನವಾಗಿರುತ್ತಾರೆ? ಇಂಥದ್ದನ್ನೆಲ್ಲ ಯಾಕೆ ತಕ್ಷಣವೇ ನಿಲ್ಲಿಸುವುದಿಲ್ಲ, ಖಂಡಿಸುವುದಿಲ್ಲ ಅಥವಾ ಬಗೆಹರಿಸುವುದಿಲ್ಲ?
ಪ್ರಶ್ನೆಗಳೇಳುತ್ತವೆ. ಏನು ಬೇಕಾದರೂ ಮಾಡಬಹುದು. ಆದರೆ, ಇದನ್ನೆಲ್ಲಾ ತಡೆದರೆ ಡ್ರಾಮಾ ಎಲ್ಲಿರುತ್ತದೆ? ಜನರಿಗ ಮಜ ಹೇಗೆ ಸಿಗುತ್ತದೆ? TRP ಹೇಗೆ ಹೆಚ್ಚಾಗುತ್ತದೆ? ಕಳೆದ ಹಿಂದಿನ ಸೀಸನ್‍ಗಳಲ್ಲಿ ಎರಡು, ಮೂರು ಬರುತ್ತಿದ್ದ TRP ಈ ಬಾರಿ ಗಣನೀಯವಾಗಿ ಏರಿದೆ. ನೀರಸವಾಗಿದ್ದ ‘ಬಿಗ್ ಬಾಸ್’ ಈಗ ಗರಿಗೆದರಿದೆ. ಈ ಕದನಗಳಿಂದಾಗಿ ಈ ಬಾರಿ ರೋಚಕತೆಯಿಂದ ತುಂಬಿದೆ. ಹಿಂಸೆ ಮತ್ತು ಕ್ರೌರ್ಯ ಎಂದು ನೋಡುಗರು ಅದೆಷ್ಟೇ ಗೊಣಗುತ್ತಿದ್ದರೂ, ನೋಡುವುದನ್ನು ನಿಲ್ಲಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕುಂದುತ್ತಿದ್ದ ಕನ್ನಡದ ‘ಬಿಗ್ ಬಾಸ್’ನ ಜನಪ್ರಿಯತೆ ಈ ಗಲಾಟೆಗಳು, ಗುಂಪುಗಾರಿಕೆ, ಕೂಗಾಟ, ಚೀರಾಟ, ಹಿಂಸೆ, ಪುಂಡಾಟಿಕೆಯಿಂದ ಹೆಚ್ಚಿದೆ. ದಿನಕ್ಕೊಂದು ಗಲಾಟೆ, ಸುದ್ದಿ ಆಗುತ್ತಿರುವುದರಿಂದ ನೋಡುಗರ ಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ ಯಾರು ತಾನೆ ಇದನ್ನು ನಿಲ್ಲಿಸುತ್ತಾರೆ?
ಸದ್ಯಕ್ಕೆ ಒಂದಿಷ್ಟು ಚರ್ಚೆಯಾಗಬಹುದು. ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧಗಳ ಚರ್ಚೆಯಾಗಬಹುದು. ಆದರೆ, ಮುಂದಿನ ದಿನಗಳಲ್ಲಿ ಪುಂಡಾಟಿಕೆ ಮಾಡುವುದು, ಗಲಾಟೆ ಮಾಡುವುದೇ ಮಾನದಂಡವಾಗುವ ಸಾಧ್ಯತೆ ಇದೆ. ‘ಬಿಗ್ ಬಾಸ್’ ಮನೆಗೆ ಬರುವುದೇ ಜನರ ಗಮನಸೆಳೆಯುವುದಕ್ಕೆ, ಜನಪ್ರಿಯರಾಗುವುದಕ್ಕೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾಳೆ ಗಲಾಟೆ, ವಾಗ್ವಾದ, ಪುಂಡಾಟಿಕೆ ಹೆಚ್ಚಾದರೆ? ಪ್ರಶ್ನೆಗಳೇನೋ ಹಲವಿದೆ. ಆದರೆ, ಉತ್ತರಿಸುವವರ್ಯಾರು?
ಮನೆಗೆ ಹಿಂದಿರುಗಿದ ಸಂಗೀತಾ-ಪ್ರತಾಪ್!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/SZhKGUCyxe
— Colors Kannada (@ColorsKannada) December 9, 2023


