- ಚೇತನ್ ನಾಡಿಗೇರ್
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ವಿಚಿತ್ರ ಟ್ರೆಂಡ್ ಪ್ರಾರಂಭವಾಗಿದೆ. ಅದನ್ನು ಟ್ರೆಂಡ್ ಎನ್ನಬೇಕೋ, ಧಂಧೆ ಎನ್ನಬೇಕೋ, ತಿಕ್ಕಲುತನವೆನ್ನಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ‘ಕೆಜಿಎಫ್’ ನಂತರ ಸೀಕ್ವೆಲ್ ಅಥವಾ ಮುಂದುವರೆದ ಭಾಗಗಳ ಭರಾಟೆ ಹೆಚ್ಚಿದೆ.
ಕನ್ನಡ ಚಿತ್ರರಂಗಕ್ಕೆ ಈ ಸೀಕ್ವೆಲ್‍ಗಳು ಹೊಸದಲ್ಲ. ಆದರೆ, ‘ಕೆಜಿಎಫ್’ ನಂತರ ಈ ಚಾಳಿ ಹೆಚ್ಚಾಗುತ್ತಿದೆ. ‘ಕೆಜಿಎಫ್’ ಆದರೂ ‘ಬಾಹುಬಲಿ’ ತರಹ ಮೊದಲು ಎರಡು ಭಾಗಗಳಲ್ಲಿ ಬರಬಹುದು ಎಂದು ಚಿತ್ರತಂಡದವರಿಗೂ ನಿರೀಕ್ಷೆ ಇರಲಿಲ್ಲ. ಆ ಎರಡೂ ಚಿತ್ರಗಳು ಮೊದಲು ಶುರುವಾಗಿದ್ದು ಒಂದೇ ಚಿತ್ರವಾಗಿ. ಆದರೆ, ಚಿತ್ರೀಕರಣ ಮಾಡುತ್ತಾ ಮಾಡುತ್ತಾ ಚಿತ್ರ ದೊಡ್ಡದಾಗಿ, ಅವಧಿ ಹೆಚ್ಚಾಗಿ ಅದನ್ನು ಒಂದೇ ಭಾಗದಲ್ಲಿ ಹೇಳಿದರೆ ಚೆನ್ನಾಗಿರುವುದಿಲ್ಲ ಎಂದನಿಸಿ ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಯಿತು. ಅದೂ ಎರಡು ಭಾಗಗಳನ್ನು ಸುಮ್ಮನೆ ಮಾಡಿದ್ದಲ್ಲ. ಅದಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು, ಮೊದಲ ಚಿತ್ರದಲ್ಲಿ ಏನಿರಬೇಕು, ಎರಡನೆಯ ಭಾಗದಲ್ಲಿ ಕಥೆ ಹೇಗೆ ಮುಂದುವರೆಯಬೇಕು ಎಂಬುದನ್ನು ಚರ್ಚಿಸಿ, ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡು, ಎರಡು ಭಾಗಗಳಿಗೆ ಬೇಕಾದ ಕಥೆ ಮತ್ತು ಡ್ರಾಮಾ ಸೃಷ್ಟಿ ಮಾಡಿಕೊಂಡು, ಅದಕ್ಕೆ ತಕ್ಕ ಹಾಗೆ ಚಿತ್ರೀಕರಣ ಮಾಡಿ, ಸಾಕಷ್ಟು ಪ್ರಚಾರ ಮಾಡಿಯೇ ಬಿಡುಗಡೆ ಮಾಡಲಾಯಿತು. ಅದಕ್ಕೆ ಸರಿಯಾಗಿ ಚಿತ್ರಗಳು ಸಹ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದವು.
‘ಕೆಜಿಎಫ್ 2’ ಚಿತ್ರ ಎಷ್ಟು ಜನರಿಗೆ ಇಷ್ಟವಾಯಿತು ಎಂಬ ಮಾತು ಪಕ್ಕಕ್ಕೆ ಇರಲಿ. ಆದರೆ, ಆ ಚಿತ್ರಕ್ಕೆ ಒಂದಿಷ್ಟು ಪೂರ್ವ ಸಿದ್ಧತೆಗಳು ಮತ್ತು ಪರಿಶ್ರಮ ಖಂಡಿತಾ ಇತ್ತು. ಆದರೆ, ಆ ನಂತರ ಬಂದ ಚಿತ್ರಗಳ ಬಗ್ಗೆ ಅದೇ ಮಾತು ಹೇಳುವ ಹಾಗಿಲ್ಲ. ಎಷ್ಟೋ ಕಥೆಗಳನ್ನು ಇನ್ನೊಂದು ಭಾಗದಲ್ಲಿ ಹೇಳುವ ಅವಶ್ಯಕತೆಯೂ ಇರುವುದಿಲ್ಲ ಮತ್ತು ಆ ಕಥೆಗಳಿಗೆ ಆ ಸಾಮರ್ಥ್ಯವೂ ಇರುವುದಿಲ್ಲ. ಆದರೆ, ಅನಾವಶ್ಯಕವಾಗಿ ಹಿಗ್ಗಿಸಲಾಗುತ್ತಿದೆ.
ಈ ವಿಷಯದಲ್ಲಿ ಪ್ರಮುಖವಾಗಿ ಸಿಗುವ ಉದಾಹರಣೆಯೆಂದರೆ, ಉಪೇಂದ್ರ ಅಭಿನಯದ ಮತ್ತು ಆರ್. ಚಂದ್ರು ನಿರ್ದೇಶನದ ‘ಕಬ್ಜ’. ಚಿತ್ರ ನೋಡಿದವರಿಗೆ ಅದು ವಿಚಿತ್ರವಾಗಿ ಅಂತ್ಯವಾಗಿರುವುದು ಗೊತ್ತಾಗುತ್ತದೆ. ಕ್ಲೈಮ್ಯಾಕ್ಸ್ನಲ್ಲಿ ಆ ಕಡೆ ಉಪೇಂದ್ರ, ಈ ಕಡೆ ಸುದೀಪ್ ಇರುತ್ತಾರೆ. ಶಿವರಾಜಕುಮಾರ್ ಮಧ್ಯೆ ಬಂದು ಆ ಕಡೆ ಶಿಕಾರಿ, ಈ ಕಡೆ ಟೈಗರ್, ನಾನು ಕಬ್ಜ ಮಾಡಲು ಬಂದ ಫೈಟರ್ ಎಂದು ಅಡ್ಡಗೋಡೆ ಮೇಲೆ ದೀಪ ಇಡುತ್ತಾರೆ. ಮುಂದಿನದನ್ನು ಎರಡನೆಯ ಭಾಗದಲ್ಲಿ ನೋಡಿ ಎನ್ನುತ್ತಾರೆ. ಚಂದ್ರು ಇಂಥದ್ದೊಂದು ಗಿಮಿಕ್ ಯಾಕೆ ಮಾಡಿದರೋ ಗೊತ್ತಿಲ್ಲ. ನಿಜಕ್ಕೂ ಅವರಿಗೆ ಈ ಕಥೆಯನ್ನು ವಿಸ್ತರಿಸಿ ಇನ್ನಷ್ಟು ಪ್ರಚಾರ ಮತ್ತು ದುಡ್ಡು ಮಾಡುವ ಆಸೆಯೋ ಅಥವಾ ಈ ಕಥೆಗೆ ಅಂತ್ಯವೇ ಸಿಗಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲ ಕುತೂಹಲದಿಂದ ಕಾದ ಪ್ರೇಕ್ಷಕರು ಮಾತ್ರ ಚಿತ್ರ ಅರ್ಥವಾಗದೆ, ಶಪಿಸುತ್ತಾ ಚಿತ್ರಮಂದಿರದಿಂದ ಹೊರಬಂದರು.
ಆ ನಂತರ ‘ಕಬ್ಜ 2’ ಮಾಡುವುದಾಗಿ ಚಂದ್ರು ಅಧಿಕೃತ ಘೋಷಣೆಯನ್ನೇನೋ ಮಾಡಿದ್ದಾರೆ. ಆದರೆ, ಆ ಚಿತ್ರ ಮುಂದುವರೆಯುವ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಈಗಾಗಲೇ ಚಂದ್ರು, ಸುದೀಪ್ ಅಭಿನಯದ ಇನ್ನೊಂದು ಚಿತ್ರ ಘೋಷಿಸಿ ಅದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ‘ಕಬ್ಜ’ ಚಿತ್ರದಲ್ಲಿ ನಟಿಸಿದ್ದ ಉಪೇಂದ್ರ, ಸುದೀಪ್ ಮತ್ತು ಶಿವರಾಜಕುಮಾರ್ ಎಲ್ಲರೂ ಬ್ಯುಸಿಯಾಗಿದ್ದಾರೆ. ಅವರೆಲ್ಲರ ಡೇಟ್ಸ್ ಹೊಂದಿಸಿ ನಿಜಕ್ಕೂ ಚಿತ್ರ ಆಗುತ್ತದಾ? ಅಥವಾ ಅದೊಂದು ಗಿಮಿಕ್ ಆಗಿ ಉಳೀಯುತ್ತದಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.
ಬರೀ ‘ಕಬ್ಜ’ ಮಾತ್ರವಲ್ಲ, ಇದೇ ವರ್ಷ ಇನ್ನೊಂದಿಷ್ಟು ಉದಾಹರಣೆಗಳು ಸಿಗುತ್ತವೆ. ಹೇಮಂತ್ ಹೆಗಡೆ ಅಭಿನಯದ ‘ನಮ್ ನಾಣಿ ಮದ್ವೆ ಪ್ರಸಂಗ’, ರಾಘವೇಂದ್ರ ರಾಜಕುಮಾರ್ ಅಭಿನಯದ ಮತ್ತು ನರೇಂದ್ರ ಬಾಬು ನಿರ್ದೇಶನದ ‘13’, ಇತ್ತೀಚೆಗೆ ಬಿಡುಗಡೆಯಾದ ವಿನೋದ್ ಪ್ರಭಾಕರ್ ಅಭಿನಯದ ಮತ್ತು ನೂತನ್ ಉಮೇಶ್ ನಿರ್ದೇಶನದ ‘ಫೈಟರ್’ ಇದ್ಯಾವ ಚಿತ್ರವೂ ಪೂರ್ಣವಾಗಿಲ್ಲ. ಅಂತ್ಯಕ್ಕೊಂದು ಕಾಮ ಹಾಕಿ, ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿ, ಮಿಕ್ಕಿದ್ದೆಲ್ಲವನ್ನೂ ಮುಂದಿನ ಭಾಗದಲ್ಲಿ ನೋಡಿ ಎಂದು ಕ್ಯಾರಿ ಫಾರ್ವರ್ಡ್ ಮಾಡಲಾಗಿದೆ. ನಿಜಕ್ಕೂ ಈ ಚಿತ್ರಗಳು ಮುಂದುವರೆಯುತ್ತವೋ, ಬಿಡುಗಡೆಯಾಗುತ್ತವೋ ಎಂಬುದು ಯಾರಿಗೂ ಗೊತ್ತಿಲ್ಲ. ಆ ಕಡೆ ಚಿತ್ರಕ್ಕೊಂದು ಸಮಂಜಸ ಅಂತ್ಯವೂ ಇಲ್ಲ, ಆ ಚಿತ್ರದಲ್ಲಿ ಹುಟ್ಟುಹಾಕಲಾದ ಪ್ರಶ್ನೆಗಳೀಗೂ ಸರಿಯಾದದ ಉತ್ತರಗಳು ಇಲ್ಲ, ಒಂದು ಚಿತ್ರ ನೋಡಿದ ಸಂತೃಪ್ತಿಯೂ ಇಲ್ಲ, ಮುಂದೊಂದು ದಿನ ಚಿತ್ರದ ಮುಂದುವರೆದ ಭಾಗ ಮಾಡಿದರೆ ಅದನ್ನು ನೋಡುವ ಆಸಕ್ತಿಯೂ ಇಲ್ಲ. ಒಟ್ಟಿನಲ್ಲಿ ಪ್ರೇಕ್ಷಕರ ಪ್ರಾಣಸಂಕಟ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ.
ಜಗ್ಗೇಶ್ ಅಭಿನಯದ ಮತ್ತ ವಿಜಯಪ್ರಸಾದ್ ನಿರ್ದೇಶನದ ‘ತೋತಾಪುರಿ’ ಸಹ ಇದಕ್ಕಿಂತ ವಿಭಿನ್ನವಾಗಿರಲಿಲ್ಲ. ಮೊದಲಿಗೆ, ಈ ಚಿತ್ರವನ್ನು ಎರಡು ಭಾಗಗಳಿಗೆ ಹಿಗ್ಗಿಸುವ ಅವಶ್ಯಕತೆಯೇ ಇರಲಿಲ್ಲ. ಅಷ್ಟೇ ಅಲ್ಲ, ಚಿತ್ರದಲ್ಲಿ ಆ ಸರಕೂ ಇರಲಿಲ್ಲ. ಸುಮ್ಮನೆ ಬೇಡದ ವಿಷಯಗಳನ್ನು, ಡಬ್ಬಲ್ ಮೀನಿಂಗ್ ಸಂಭಾಷಣೆಗಳನ್ನು ಸೇರಿಸಿ ಹಿಗ್ಗಿಸಲಾಯಿತು. ಮೊದಲ ಭಾಗ ನೋಡಿದ ಪ್ರೇಕ್ಷಕರು ಗಾಬರಿಯಾದರು. ಎರಡನೆಯ ಭಾಗದಲ್ಲಾದರೂ ಏನಾದರೂ ಕಥೆ ಇರಬಹುದು ಎಂದರೆ ಅಲ್ಲೂ ನಿರಾಶೆಯೇ.
ರಕ್ಷಿತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಗ್ಗೆಯೂ ಪ್ರೇಕ್ಷಕರಲ್ಲಿ ಒಂದು ಆತಂಕ ಇದೆ. ಒಂದು ಚಿತ್ರವೆಂದು ಶುರುವಾದ ‘ಸಪ್ತ ಸಾಗರದಾಚೆ ಎಲ್ಲೋ’ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಈಗಾಗಲೇ ಮೊದಲ ಭಾಗ ಬಿಡುಗಡೆಯಾಗಿ, ಸದ್ಯದಲ್ಲೇ ಎರಡನೆಯ ಭಾಗ ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ. ಮೊದಲ ಭಾಗದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಸ್ವಲ್ಪ ಹಿಗ್ಗಿಸಿದಂತಾಗಿದೆ ಎಂಬ ದೂರುಗಳು ಇದ್ದೇ ಇದೆ. ಅಷ್ಟೇ ಅಲ್ಲ, ಚಿತ್ರಕ್ಕೆ ಇದೇ ಸೂಕ್ತ ಕ್ಲೈಮ್ಯಾಕ್ಸ್ ಎಂಬ ಅಭಿಪ್ರಾಯ ಹಲವರಲ್ಲಿದ್ದು, ಮುಂದುವರೆದ ಭಾಗ ಹೇಗಿರುತ್ತದೋ? ನಿರೀಕ್ಷೆಗೆ ನಿಲುಕುತ್ತದೋ, ಇಲ್ಲವೋ? ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕು.
ಈ ಸೀಕ್ವೆಲ್ ಟ್ರೆಂಡ್‍ನ ಹಿಂದೆ, ಗೊಂದಲ ಅಥವಾ ಗಿಮಿಕ್ ಅಷ್ಟೇ ಅಲ್ಲ, ವ್ಯಾಪಾರದ ಆ್ಯಂಗಲ್ ಸಹ ಇದೆ. ಒಂದು ಚಿತ್ರ ಅಂದುಕೊಂಡಿದ್ದಕ್ಕಿಂತ ಹಿಗ್ಗಿದರೆ, ಆಗ ಚಿತ್ರಕ್ಕೆ ಇನ್ನಷ್ಟು ಪೂರಕವಾದ ದೃಶ್ಯಗಳನ್ನು ಸೇರಿಸಿ ಎರಡು ಭಾಗಗಳನ್ನಾಗಿ ಮಾಡಲಾಗುತ್ತದೆ. ಇದರಿಂದ ಬಜೆಟ್‍ನಲ್ಲಿ ಸ್ವಲ್ಪ ಏರಿಕೆಯಾದರೂ, ಎರಡು ಚಿತ್ರಗಳ ಬಿಡುಗಡೆ, ಸ್ಯಾಟಿಲೈಟ್, ಡಬ್ಬಿಂಗ್ ಮತ್ತು ಡಿಜಿಟಲ್ ಹಕ್ಕುಗಳಿಂದ ಬರುವ ಲಾಭವೂ ಚೆನ್ನಾಗಿರುತ್ತದೆ. ಮುಖ್ಯವಾಗಿ ಅದನ್ನು ಗಮನದಲ್ಲಿಟ್ಟುಕೊಂಡೇ ಇತ್ತೀಚಿನ ವರ್ಷಗಳಲ್ಲಿ ಈ ಮುಂದುವರೆದ ‘ಭಾಗ’ಗಳು ಹೆಚ್ಚಾಗುತ್ತಿವೆ.
ಹೀಗಿರುವಾಗಲೇ, ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರೇಕ್ಷಕರ ನಿರಾಸಕ್ತಿಯ ನಡುವೆಯೂ ಈ ‘To be Continued …’ ಟ್ರೆಂಡ್ ಮುಂದುವರೆಯುತ್ತಿದೆ. ಇಂಥದ್ದೊಂದು ಹಾವಳಿ ಯಾವಾಗ ನಿಲ್ಲುತ್ತದೋ?
https://indiascreens.in/parul-yadav-returns-back-to-sandalwood-with-lohiths-new-film/


