ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಚಿತ್ರವು ಅಕ್ಟೋಬರ್ 16ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಚಿತ್ರ ಇದೀಗ ನವೆಂಬರ್ 20ರಂದು ಬಿಡುಗಡೆಯಾಗಲಿದೆ. ಇಷ್ಟಕ್ಕೂ ‘ಬೃಂದಾವಿಹಾರಿ’ ಚಿತ್ರ ಮುಂದಕ್ಕೆ ಹೋಗಿದ್ದು ಯಾಕೆ? ಅದಕ್ಕೆ ‘ಪ್ರೇಮದ ಊರಲಿ’ ಕಾರಣವಾ? ಎಂಬ ಪ್ರಶ್ನೆಯೊಂದು ಕೇಳಿಬರುತ್ತಿದೆ.
‘ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿರುವ ನಿರ್ಮಾಪಕ ಸಮೃದ್ದಿ ವಿ. ಮಂಜುನಾಥ್, ‘’ಬೃಂದಾವಿಹಾರಿ’ ಒಂದೊಳ್ಳೆಯ ಚಿತ್ರ. ಉತ್ತರ ಕರ್ನಾಟಕದ ಜನತೆ ಕನ್ನಡ ಚಿತ್ರಗಳನ್ನು ಸದಾ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಅದೇ ರೀತಿ ನಮ್ಮ ಚಿತ್ರವನ್ನೂ ವೀಕ್ಷಿಸಿ,ಆ ಮೂಲಕ ನಮಗೆ ಬೆಂಬಲಿಸಿ ಎಂದು ಆಶೀರ್ವಾದ ಬೇಡಲು ನಿಮ್ಮ ಬಳಿ ಬಂದಿದ್ದೇವೆ. ಸದ್ಯ ‘ಪ್ರೇಮದ ಊರಲಿ’ ಎಲ್ಲಾ ಕಡೆ ಚೆನ್ನಾಗಿ ಹೋಗುತ್ತಿದೆ. ಹಾಗಾಗಿ, ನಮ್ಮ ಚಿತ್ರದ ಬಿಡುಗಡೆಯನ್ನು ಅ.16ರಿಂದ ನ.20ಕ್ಕೆ ಮುಂದಕ್ಕೆ ಹಾಕಿದ್ದೇವೆ. ದಯಮಾಡಿ ನಮ್ಮನ್ನು ಹರಸಿ’ ಎಂದರು.
ಮಂಜುನಾಥ್ ಅವರ ಮಾತುಗಳು ಇದೀಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿವೆ. ‘ಪ್ರೇಮದ ಊರಲಿ’ ಚಿತ್ರವು ಚೆನ್ನಾಗಿ ಪ್ರದರ್ಶನ ಕಾಣುತ್ತಿದೆಯಾದರೂ, ‘ಬೃಂದಾವಿಹಾರಿ’ ಮುಂದಕ್ಕೆ ಹೋಗುವುದಕ್ಕೆ ಅದೊಂದೇ ಕಾರಣವಲ್ಲ. ಬೇರೆ ಕಾರಣಗಳೂ ಇವೆ.
ಪ್ರಮುಖವಾಗಿ, ಈ ವಾರ ರಜನಿಕಾಂತ್ ಅಭಿನಯದ ‘ಜೈಲರ್ 2’ ಮತ್ತು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಚಿತ್ರಗಳು ಸಹ ಬಿಡುಗಡೆಯಾಗುತ್ತಿವೆ. ಪರಭಾಷೆಯ ಎರಡು ದೊಡ್ಡ ಚಿತ್ರಗಳು ದೊಡ್ಡ ಮಟ್ಟದಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತು ಬಹಳಷ್ಟು ಚಿತ್ರಮಂದಿರಗಳಲ್ಲಿ ಈ ಎರಡು ಚಿತ್ರಗಳು ಪ್ರದರ್ಶನ ಕಾಣುತ್ತಿರುವುದರಿಂದ, ಇದರಿಂದ ‘ಬೃಂದಾವಿಹಾರಿ’ ಮೇಲೆ ಪರಿಣಾಮ ಬೀರಬಹುದು ಎಂದು ಕಾರಣಕ್ಕೆ ಚಿತ್ರವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಎರಡನೆಯದಾಗಿ, ಎರಡು ನಿರೀಕ್ಷಿತ ಚಿತ್ರಗಳು ಬಿಡುಗಡೆ ಆಗುತ್ತಿವೆ ಮತ್ತು ಒಂದು ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮೂರು ಚಿತ್ರಗಳು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳುವುದರಿಂದ, ಸಹಜವಾಗಿಯೇ ‘ಬೃಂದಾವಿಹಾರಿ’ ಚಿತ್ರಕ್ಕೆ ಚಿತ್ರಮಂದಿರಗಳ ಅಭಾವ ಎದುರಾಗಬಹುದು. ಹಾಗಾಗಿ, ಚಿತ್ರವನ್ನು ಒಂದು ತಿಂಗಳು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
‘ಬೃಂದಾ ವಹಾರಿ’ ಚಿತ್ರದಲ್ಲಿ ಗಣೇಶ್, ಮಾಳವಿಕಾ ಶರ್ಮ, ದೇವಿಕಾ ಭಟ್, ರಂಗಾಯಣ ರಘು, ಸಾಧು ಕೋಕಿಲ, ಗಿರಿ ಶಿವಣ್ಣ, ರಾಮ್‍ಕುಮಾರ್, ಅಶೋಕ್, ಜಗ್ಗಪ್ಪ, ಮಂಜು ಪಾವಗಡ ಮುಂತಾದವರು ನಟಿಸಿದ್ದು, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ರಚಿಸಿದ್ದಾರೆ.


