‘ಜೈಲರ್ 2’ ಚಿತ್ರದ ಮೊದಲ ದಿನದ ಟಿಕೆಟ್‍ ಬೆಲೆ ಸಾವಿರ ರೂಪಾಯಿ!

ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಜನಿಕಾಂತ್‍ ಅಭಿನಯದ ‘ಜೈಲರ್ 2’ ಚಿತ್ರವು, ಅಕ್ಟೋಬರ್ 15ರಂದು ಜಗತ್ತಿನಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಚಿತ್ರವು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಏಕಪರದೆಯ ಚಿತ್ರಮಂದಿರಗಳಲ್ಲೇ ಮೊದಲ ದಿನದ ಟಿಕೆಟ್‍ಗೆ ಸಾವಿರ ರೂಪಾಯಿ ಟಿಕೆಟ್‍ ನಿಗದಿಪಡಿಸಲಾಗಿದೆ.

ಸಾಮಾನ್ಯವಾಗಿ ಪರಭಾಷೆಯ ಜನಪ್ರಿಯ ನಟರ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆದರೆ, ಕರ್ನಾಟಕದಲ್ಲಿ ಟಿಕೆಟ್‍ ದರ ಗಗನಕ್ಕೇರುವುದು ಸಹಜ. ಅದರಲ್ಲೂ ಮಲ್ಟಿಪ್ಲೆಕ್ಸ್ ದರಗಳು ಎರಡೂವರೆ ಸಾವಿರ ರೂಪಾಯಿವರೆಗೂ ಹೋಗುವುದಿದೆ. ಆದರೆ, ‘ಜೈಲರ್ 2’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ಗಳಲ್ಲಿ ದರ ಏರುವುದು ಬಿಡಿ, ಏಕಪರದೆಯ (Single Screens) ಚಿತ್ರಮಂದಿರಗಳಲ್ಲೂ ಟಿಕೆಟ್‍ ಬೆಲೆಯನ್ನು ಸಾವಿರ ರೂಪಾಯಿಗೆ ಏರಿಸಲಾಗಿದೆ.

ಅಕ್ಟೋಬರ್ 15ರ ಗುರುವಾರ ಬೆಳಿಗ್ಗೆ ಆರು ಗಂಟೆಯಿಂದಲೇ ‘ಜೈಲರ್‍ 2’ ಚಿತ್ರದ ಪ್ರದರ್ಶನಗಳು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಅಡ್ವಾನ್ಸ್ ಬುಕ್ಕಿಂಗ್‍ ಪ್ರಾರಂಭವಾಗಿದೆ. ಬೊಮ್ಮನಹಳ್ಳಿಯ ಕೃಷ್ಣ, ಹೊಂಗಸಂದ್ರದ ಬೃಂದಾ, ಅಗರದ ಶ್ರೀ ತಿರುಮಲ, ತಾವರೆಕೆರೆಯ ಲಕ್ಷ್ಮೀ, ಕಾಡುಗೋಡಿಯ ಕೀನೋ, ಸಂಜಯ್‍ ನಗರದ ವೈಭವ್, ಉತ್ತರಹಳ್ಳಿಯ ವೈಷ್ಣವಿ ಮತ್ತು ವೈಭವಿ, ಕೋಣನಕುಂಟೆಯ ಮಾನಸ, ಜೆ.ಪಿ. ನಗರದ ಸಿದ್ದೇಶ್ವರ, ಕತ್ತರಿಗುಪ್ಪೆಯ ಕಾಮಾಕ್ಯ, ಕದಿರೇನಹಳ್ಳಿಯ ಮಹದೇಶ್ವರ ಮುಂತಾದ ಚಿತ್ರಮಂದಿರಗಳಲ್ಲಿ ಟಿಕೆಟ್‍ ಬೆಲೆ ಸಾವಿರ ರೂಪಾಯಿನಷ್ಟಿದೆ.

2023ರಲ್ಲಿ ಬಿಡುಗಡೆಯಾದ ‘ಜೈಲರ್’ ಚಿತ್ರದ ಮುಂದುವರೆದ ಭಾಗವಾದ ‘ಜೈಲರ್‍ 2’ ಚಿತ್ರದಲ್ಲಿ ರಜನಿಕಾಂತ್‍, ರಮ್ಯಾ ಕೃಷ್ಣನ್‍, ಎಸ್‍.ಜೆ. ಸೂರ್ಯ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದು, ಅತಿಥಿ ಪಾತ್ರಗಳಲ್ಲಿ ಮಿಥುನ್‍ ಚಕ್ರವರ್ತಿ, ಮೋಹನ್‍ ಲಾಲ್‍, ಶಿವರಾಜಕುಮಾರ್‍, ವಿದ್ಯಾ ಬಾಲನನ್‍, ಹೃತಿಕ್‍ ರೋಶನ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ನೆಲ್ಸನ್‍ ದಿಲೀಪ್‍ ಕುಮಾರ್ ನಿರ್ದೇಶನ ಮಾಡಿದ್ದು, ಸನ್‍ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್‍ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್‍ ಸಂಗೀತ ಚಿತ್ರಕ್ಕಿದೆ.

ಅಂದಹಾಗೆ, ‘ಜೈಲರ್ 2’ ಚಿತ್ರವನ್ನು ಕರ್ನಾಟಕಕ್ಕೆ ಬೆಂಗಳೂರು ಕುಮಾರ್‍ ಫಿಲಮ್ಸ್ ಮೂಲಕ ಕೆ. ಮಂಜು ವಿತರಿಸುತ್ತಿದ್ದಾರೆ.

ಮುಂದಕ್ಕೆ ಹೋದ ‘ಬೃಂದಾವಿಹಾರಿ’; ನ. 20ಕ್ಕೆ ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading