ಚಿತ್ರ: ಸಿಟಿ ಲೈಟ್ಸ್
ನಿರ್ಮಾಣ: ‘ದುನಿಯಾ’ ವಿಜಯ್ ಮತ್ತು ವಿಕ್ರಮ್ ಆರ್ಯ
ನಿರ್ದೇಶನ: ‘ದುನಿಯಾ’ ವಿಜಯ್
ತಾರಾಗಣ: ವಿನಯ್ ರಾಜಕುಮಾರ್, ಮೊನಿಷಾ ವಿಜಯ್, ಪುನೀತ್, ಉಮಾಶ್ರೀ ಮುಂತಾದವರು
ಅವನು ಯಾವುದೋ ಕಾರಣಕ್ಕೆ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದಿರುತ್ತಾನೆ. ಅವಳು ಇನ್ನೊಂದು ಕಾರಣಕ್ಕೆ ಬೆಂಗಳೂರಿಗೆ ಬಂದು ಸೇರುತ್ತಾಳೆ. ಹೀಗೆ ಗೊತ್ತು-ಗುರಿ ಇಲ್ಲದೆ ಈ ಮಾಯಾನಗರಿಗೆ ಬರುವವರು ಏನೆಲ್ಲಾ ಅನುಭವಿಸುತ್ತಾರೆ, ಇಲ್ಲಿನ ಜಾಲಗಳು ಅವರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತವೆ ಎಂಬುದು ಗೊತ್ತಾಗಬೇಕಿದ್ದರೆ ‘ಸಿಟಿ ಲೈಟ್ಸ್’ ನೋಡಬೇಕು.
‘ದುನಿಯಾ’ ವಿಜಯ್’ ತಮ್ಮ ನಿರ್ದೇಶನದ ಪ್ರತೀ ಚಿತ್ರದಲ್ಲೂ ಬೆಂಗಳೂರಿನ ಒಂದಲ್ಲ ಒಂದು ಕರಾಳ ಮುಖವನ್ನು ತೋರಿಸುತ್ತಲೇ ಬಂದಿದ್ದಾರೆ. ‘ಸಲಗ’ ಚಿತ್ರದಲ್ಲಿ ಬೆಂಗಳೂರಿನ ಬದಲಾದ ರೌಡಿಸಂ ಬಗ್ಗೆ ತೋರಿಸಿದ್ದರು. ‘ಭೀಮ’ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ್ದರು. ಈಗ ‘ಸಿಟಿ ಲೈಟ್ಸ್’ ಚಿತ್ರದಲ್ಲಿ ವೇಶ್ಯಾವಟಿಕೆಯ ಕರಾಳ ಮುಖವನ್ನು ಅವರು ತೋರಿಸಿದ್ದಾರೆ. ಅಮಾಯಕ ಹೆಣ್ಣು ಮಕ್ಕಳನ್ನು ಈ ಜಾಲ ಹೇಗೆ ಬಳಸಿಕೊಳ್ಳುತ್ತದೆ, ಅದನ್ನು ಬಿಟ್ಟು ಬರಲಾರದೆ ಎಷ್ಟೆಲ್ಲಾ ಕಷ್ಟಪಡುತ್ತಾರೆ ಎಂದು ವಿಜಯ್ ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ.
ವೇಶ್ಯಾವಾಟಿಕೆ ಜೊತೆಗೆ ಇದುವರೆಗೂ ಸಿನಿಮಾಗಳಲ್ಲಿ ಚರ್ಚೆ ಆಗದ ಅಥವಾ ತೋರಿಸಲಾಗದ ಕೆಲವು ಹೊಸ ದಂಧೆಗಳನ್ನು ವಿಜಯ್ ಈ ಚಿತ್ರದಲ್ಲಿ ತೋರಿಸಿದ್ದಾರೆ. ಬೆಂಗಳೂರಿಗೆ ಹೊಟ್ಟೆಪಾಡಿಗಾಗಿ ಬಂದವರು ಅಥವಾ ಏನೂ ಗೊತ್ತಿಲ್ಲದ ಮುಗ್ಧ ಮಂದಿಯನ್ನು ಕೆಲವರು ಬಳಸಿಕೊಂಡು ಹೇಗೆ ತಾವು ಮೆರೆಯುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಮಾಯಾನಗರಿ ಬೆಂಗಳೂರಿಗೆ ಬದುಕನ್ನು ಅರಸಿ ಬಂದವರ ಸ್ಥಿತಿ ಹೇಗಿರುತ್ತದೆ, ಇಲ್ಲಿನ ರಾಜಕೀಯ, ಪೊಲೀಸ್ ಮತ್ತು ಮಾಫಿಯಾ ಅವರನ್ನು ಹೇಗೆ ಬಳಸಿಕೊಳ್ಳುತ್ತದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯ ಜನರ ನೋವು, ಹೋರಾಟ, ಸಂಘರ್ಷ, ಯಾತನೆ, ಜೀವನವನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ ನಮಾಡಲಾಗಿದೆ.
ಇಲ್ಲೊಂದು ಗಟ್ಟಿ ಕಥೆ ಎನ್ನುವುದಕ್ಕಿಂತ ಹಲವು ಸಮಸ್ಯೆ ಮತ್ತು ಸನ್ನಿವೇಶಗಳ ಮೂಲಕ ಚಿತ್ರವನ್ನು ವಿಜಯ್ ಬೆಳೆಸಿದ್ದಾರೆ. ಇಡೀ ಚಿತ್ರ ನಡೆಯುವುದು ಬೆಂಗಳೂರಿನ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಪ್ರದೇಶದಲ್ಲಿ. ಆ ಪ್ರದೇಶಕ್ಕೆ ಗೊತ್ತಿಲ್ಲದೆ ಬರುವ ಅಮಾಯಕರು, ಅವರನ್ನು ಭಕ್ಷಿಸುವವರು ಮತ್ತು ರಕ್ಷಿಸುವವರ ಸುತ್ತ ಕಥೆ ಸಾಗುತ್ತದೆ. ಚಿತ್ರದಲ್ಲಿ ವಿನಯ್ ರಾಜಕುಮಾರ್ ಮತ್ತು ಮೊನಿಷಾ ನಾಯಕ-ನಾಯಕಿಯರಾದರೂ, ಹಲವು ಪಾತ್ರಗಳಿವೆ. ಆ ಎಲ್ಲಾ ಪಾತ್ರಗಳೂ ಸಹ ಮುಖ್ಯ. ಯಾವುದೋ ಒಂದು ಪಾತ್ರಕ್ಕಷ್ಟೇ ಚಿತ್ರ ಸೀಮಿತವಾಗದ್ದರಿಂದ, ಚಿತ್ರಕ್ಕೊಂದು ಫೋಕಸ್ ಇಲ್ಲ. ಚಿತ್ರದ ಮೊದಲಾರ್ಧ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಆ ಗುಣ ಕಡಿಮೆ. ಜೊತೆಗೆ, ಮುಂದೇನಾಗುತ್ತದೆ ಎಂದು ಸುಲಭವಾಗಿ ಊಹಿಸಬಹುದು. ಗಂಭೀರವಾಗಿರುವ ಚಿತ್ರಕ್ಕೆ ಒಂದಿಷ್ಟು ಹಾಸ್ಯವನ್ನೂ ತುರುಕಲಾಗಿದೆ. ಹಾಗಾಗಿ, ಚಿತ್ರದಲ್ಲಿ ಏನೇ ನೋವು, ಹತಾಶೆ, ಪ್ರೀತಿ ಇದ್ದರೂ ಗಾಢವಾಗಿ ತಟ್ಟುವುದಿಲ್ಲ.
ವಿನಯ್ ತಮಗೆ ಸಿಕ್ಕ ಅವಕಾಶಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮೊನೀಷಾ ಭರವಸೆ ಮೂಡಿಸಿದರೂ, ಆ ಪಾತ್ರಕ್ಕೆ ಹೆಚ್ಚು ಕೆಲಸವಿಲ್ಲ. ಉಮಾಶ್ರೀ ತಮ್ಮ ಖಡಕ್ ಪಾತ್ರದಿಂದ ಗಮನಸೆಳೆಯುತ್ತಾರೆ. ವಿಜಯ್ ತಮ್ಮ ಹಿಂದಿನ ಚಿತ್ರಗಳಂತೆ ಇಲ್ಲೂ ಒಂದಿಷ್ಟು ಹೊಸಬರನ್ನು ಪರಿಚಯಿಸಿದ್ದಾರೆ. ಪುನೀತ್, ಫೈಟ್ ಮಾಸ್ಟರ್ ವಿನೋದ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಸಂಪತ್ ಮೈತ್ರೇಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ‘ಯುಗ’ ಚಂದ್ರು ಪಾತ್ರ ‘ದುನಿಯಾ’ದ ರಂಗಾಯಣ ರಘು ಪಾತ್ರವನ್ನು ನೆನಪಿಸುತ್ತದೆ. ಮಿಕ್ಕಂತೆ ಒಂದಿಷ್ಟು ಹೊಸ ಪ್ರತಿಭೆಗಳು ಗಮನಸೆಳೆಯುತ್ತವೆ.
ಚಿತ್ರದ ಬಹುತೇಕ ಭಾಗ ನಡೆಯುವುದು ರಾತ್ರಿಗಳಲ್ಲಿ. ಬೆಂಗಳೂರಿನ ರಾತ್ರಿಗಳನ್ನು ಬಹಳ ಚೆನ್ನಾಗಿ ಸೆರೆಹಿಡಿದಿದ್ದಾರೆ ಶಿವಸೇನಾ. ಅದರಲ್ಲೂ ಮೆಜೆಸ್ಟಿಕ್ ಗಲ್ಲಿಗಳಲ್ಲಿನ ಚೇಸಿಂಗ್ ದೃಶ್ಯಗಳು ಚಿತ್ರದ ಹೈಲೈಟ್. ಚರಣ್ ರಾಜ್ ಒಂದೆರಡು ಹಾಡುಗಳಿಂದ ಇಷ್ಟವಾಗುತ್ತಾರೆ.


