‘ಎಕ್ಕ’ ನಂತರ ಯುವ ರಾಜಕುಮಾರ್ ಯಾವುದೇ ಚಿತ್ರ ಒಪ್ಪಿರಲಿಲ್ಲ. ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ನಿರ್ಮಾಣದಲ್ಲಿ, ಜಡೇಶ್ ಕೆ. ಹಂಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿರುವ ವಿಷಯ ಇತ್ತೀಚೆಗೆ ತಿಳಿದು ಬಂದಿತ್ತು. ಈ ಚಿತ್ರದ ಶೀರ್ಷಿಕೆ ಏನಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಗಣೇಶ ಚತುರ್ಥಿಯ ಶುಭದಿನದಂದು ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ ‘ಪವರ್ ಮ್ಯಾನ್’ ಎಂಬ ಹೆಸರು ಇಡಲಾಗಿದೆ.
ಸದಾಶಿವನಗರದ ಡಾ. ರಾಜಕುಮಾರ್ ಅವರು ವಾಸವಿದ್ದ ಜಾಗದಲ್ಲೇ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿರುವುದು ವಿಶೇಷ. ರಾಘವೇಂದ್ರ ರಾಜಕುಮಾರ್ ಅವರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಮಂಗಳ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಚಿತ್ರಕ್ಕೆ ‘ಪವರ್ ಮ್ಯಾನ್’ ಎಂದು ಹೆಸರಿಡಲಾಗಿದೆ. ‘The Greatest Power in a Good Heart’ ಎಂಬ ಅಡಿಬರಹ ಈ ಚಿತ್ರಕ್ಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತರುಣ್ ಸುಧೀರ್, ‘ನಿನ್ನೆ ತನಕ ನಾವು ಈ ಚಿತ್ರದ ಶೀರ್ಷಿಕೆಯನ್ನು ಡಿಜಿಟಲ್ ಅನಾವರಣ ಮಾಡೋಣ ಅಂದುಕೊಂಡಿದ್ದೆವು. ಆದರೆ, ಅನಿರೀಕ್ಷಿತವಾಗಿ ನಮ್ಮ ‘ಪವರ್ ಮ್ಯಾನ್’ ಚಿತ್ರದ ಶೀರ್ಷಿಕೆ ರಾಘವೇಂದ್ರ ರಾಜಕುಮಾರ್ ಅವರಿಂದ ಅನಾವರಣವಾಗಿದ್ದು ಬಹಳ ಖುಷಿಯಾಗಿದೆ. ಈ ಚಿತ್ರವನ್ನು ನಾನು ಹಾಗೂ ಜಗದೀಶ್ ಗೌಡ ಅವರು ಸೇರಿ ನಿರ್ಮಾಣ ಮಾಡುತ್ತಿದ್ದೇವೆ. ಅಟ್ಲಾಂಟ ನಾಗೇಂದ್ರ ಸಹ ನಿರ್ಮಾಪಕರಾಗಿದ್ದಾರೆ. ಜಡೇಶ್ ಕೆ. ಹಂಪಿ ನಿರ್ದೇಶಿಸುತ್ತಿದ್ದಾರೆ. ಇದೊಂದು ಎಲ್ಲರಿಗೂ ಆಪ್ತವಾಗುವ ಕಥೆ. ವಿಶೇಷವಾಗಿ ಮಕ್ಕಳಿಗೆ. ಹಾಗಾಗಿ ‘ಪವರ್ ಮ್ಯಾನ್’ ಎಂದು ಹೆಸರಿಡಲಾಗಿದೆ’ ಎಂದರು.

ಚಿತ್ರದ ಹೆಸರು ‘ಪವರ್ ಮ್ಯಾನ್’. ಆದರೆ, ಇದು ಪುನೀತ್ ರಾಜಕುಮಾರ್ ಅವರ ಕುರತಾದ ಚಿತ್ರವಲ್ಲ ಎನ್ನುವ ಜಡೇಶ್, ‘The Greatest Power in a Good Heart’ ಎಂಬ ಅಡಿಬರಹದ ಸಾಲೇ ಚಿತ್ರದ ಪ್ರಮುಖ ಕಥಾಹಂದರ ಎನ್ನಬಹುದು. ಇದು ಕೂಡ ಈ ನೆಲದ ಕಥೆ. ಈ ಹಿಂದಿನ ಚಿತ್ರಗಳಲ್ಲಿ ಈ ನೆಲದ ಕಥೆಯನ್ನು ಬೇರೆಬೇರೆ ರೀತಿ ಹೇಳಿದ್ದೆ. ಇದರಲ್ಲಿ ಬೇರೆಯೇ ರೀತಿ ಹೇಳಲು ಹೊರಟಿದ್ದೇನೆ. ಇನ್ನೂ, ಹಾಡುಗಳು ಹಾಗೂ ಸಾಹಸ ಸನ್ನಿವೇಶಗಳಂತೂ ಈ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಯುವ ಅವರು ನೃತ್ಯ ಹಾಗೂ ಫೈಟ್ ಎರಡರಲ್ಲೂ ಪರಿಣಿತರು’ ಎಂದರು.
‘ಎಕ್ಕಾ’ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ ಎಂದು ಮಾತು ಶುರು ಮಾಡಿದ ಯುವ, ‘ಆ ಚಿತ್ರದ ನಂತರ ನಾನು ನಟಿಸುತ್ತಿರುವ ಚಿತ್ರ ಯಾವುದು ಎಂದು ಎಲ್ಲರೂ ಕೇಳುತ್ತಿದ್ದರು. ಈಗ ಆ ಸಮಯ ಬಂದಿದೆ. ಅದು ಗಣೇಶನ ಹಬ್ಬದ ದಿನ ನನ್ನ ಹೊಸ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಜಡೇಶ್ ಹಾಗೂ ನಾನು ಸುಮಾರು ತಿಂಗಳಿಂದ ಕಥೆಯ ಬಗ್ಗೆ ಚರ್ಚಿಸುತ್ತಿದ್ದೆವು. ಈಗ ಅದು ಪೂರ್ಣವಾಗಿದೆ. ಕಥೆ ಸಿದ್ದವಾಗಿದೆ. ಚಿತ್ರೀಕರಣಕ್ಕೆ ಹೊರಡಲು ಸಿದ್ದತೆ ನಡೆಯುತ್ತಿದೆ. ‘ಪವರ್ ಮ್ಯಾನ್’ ಹೆಸರಿನಲ್ಲೇ ಪವರ್ ಇದೆ. ಎಲ್ಲರಿಗೂ ಇಷ್ಟವಾಗುವ ಹಾಗೂ ನಾನು ಈ ಹಿಂದೆ ಮಾಡಿರದ ಪಾತ್ರವಿದು’ ಎಂದರು.
‘ಪವರ್ ಮ್ಯಾನ್’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.


