ದುನಿಯಾ’ ವಿಜಯ್’ ತಮ್ಮ ನಿರ್ದೇಶನದ ಪ್ರತೀ ಚಿತ್ರದಲ್ಲೂ ಬೆಂಗಳೂರಿನ ಒಂದಲ್ಲ ಒಂದು ಕರಾಳ ಮುಖವನ್ನು ತೋರಿಸುತ್ತಲೇ ಬಂದಿದ್ದರು. ‘ಸಲಗ’ ಚಿತ್ರದಲ್ಲಿ ಬೆಂಗಳೂರಿನ ರೌಡಿಸಂ ಮತ್ತು ‘ಭೀಮ’ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ್ದ ಅವರು, ‘ಸಿಟಿ ಲೈಟ್ಸ್’ ಚಿತ್ರದಲ್ಲಿ ವೇಶ್ಯಾವಟಿಕೆಯ ಕರಾಳ ಮುಖವನ್ನು ತೋರಿಸುವುದಕ್ಕೆ ಹೊರಟಿದ್ದಾರೆ.
ವಿನಯ್ ರಾಜಕುಮಾರ್ ಮತ್ತು ಮೊನಿಷಾ ವಿಜಯ್ ಅಭಿನಯದ ‘ಸಿಟಿ ಲೈಟ್ಸ್’ ಚಿತ್ರವು ಸೆ. 18ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್, ‘ಭೂಗತ ಜಗತ್ತಿನ ಸಿನಿಮಾ ಎಂದರೆ ಶಿವಣ್ಣ ನೆನಪಾಗ್ತಾರೆ ಅಂತ ಎಲ್ಲರೂ ಹೇಳುತ್ತಾರೆ. ಇನ್ಮೇಲೆ ಶಿವಣ್ಣ ಜೊತೆಗೆ ವಿನಯ್ ಕೂಡ ನೆನಪಾಗುತ್ತಾನೆ. ನನ್ನ ತಮ್ಮನ ಮಗ ಎಂಬ ಕಾರಣಕ್ಕೆ ನಾನು ಈ ಚಿತ್ರಕ್ಕೆ ಬೆಂಬಲ ನೀಡುತ್ತಿಲ್ಲ. ಅವನಲ್ಲಿ ಪ್ರತಿಭೆ ಇದೆ. ನಾನು ಈ ಸಿನಿಮಾಗಾಗಿ ಕಾಯುತ್ತಿದ್ದೇನೆ. ಖಂಡಿತವಾಗಿಯೂ ಈ ಚಿತ್ರ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ವಿಜಯ್ ಅವರು ತಾಂತ್ರಿಕವಾಗಿ ತುಂಬ ಚೆನ್ನಾಗಿ ಸಿನಿಮಾ ಮಾಡುತ್ತಾ ಬಂದಿದ್ದಾರೆ. ತಮ್ಮ ಪ್ರತಿ ಚಿತ್ರದಲ್ಲೂ ಹೊಸಬರಿಗೆ ಅವಕಾಶ ಕೊಡುತ್ತಿರುವುದು ನನಗೆ ಹೆಚ್ಚು ಖುಷಿ ನೀಡುತ್ತಿದೆ’ ಎಂದರು.

ಈ ಟ್ರೇಲರ್ ನೋಡುತ್ತಿದ್ದರೆ ‘ಓಂ’ ಚಿತ್ರ ನೆನಪಾಗುತ್ತದೆ ಎಂದ ಗೀತಾ ಶಿವರಾಜಕುಮಾರ್, ‘ವಿನಯ್‍ನನ್ನು ಈ ಚಿತ್ರದಲ್ಲಿ ಬೇರೆ ರೀತಿ ತೋರಿಸಿದ್ದಾರೆ’ ಎಂದರು.
ಈ ಸಿನಿಮಾ ಮಾಡಿದ ಮೇಲೆ ಬೆಂಗಳೂರಿನಲ್ಲಿ ಕಷ್ಟಪಟ್ಟು ಜೀವನ ಮಾಡುತ್ತಿರುವ ಪ್ರತಿಯೊಬ್ಬರ ಮೇಲೂ ನನಗೆ ಗೌರವ ಹೆಚ್ಚಾಗಿದೆ ಎಂದು ವಿನಯ್ ಹೇಳಿದರೆ, ನನ್ನನ್ನು ನಂಬಿ ಇಷ್ಟು ದೊಡ್ಡ ಪಾತ್ರ ಕೊಟ್ಟಿದ್ದಕ್ಕೆ ನನ್ನ ತಂದೆಗೆ, ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ತಂದೆಗೆ ಪ್ರೀತಿ ನೀಡಿದ ರೀತಿಯಲ್ಲೇ ನನಗೂ ಪ್ರೀತಿ ನೀಡಿ ಎಂದು ಕೇಳಿಕೊಂಡರು.
ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಹಿರಿಯ ನಟಿ ಉಮಾಶ್ರೀ, ‘’ದುನಿಯಾ’ ವಿಜಯ್ ಅವರಿಗೆ ನಾನೇ ಈ ಪಾತ್ರ ಮಾಡಬೇಕು ಎನ್ನುವ ಆಸೆ. ಹಾಗಾಗಿ ನಟಿಸಿದ್ದೇನೆ. ವಿನಯ್ ತುಂಬಾ ಮಾತಾನಡಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಅಂತ ಇರ್ತಾರೆ. ಎಂಥ ದೊಡ್ಡ ಕುಟುಂಬದಿಂದ ಬಂದ ಮಗು ಹೀಗಾ ಅಂತ ಅನಿಸುತ್ತೆ. ಯಾಕೆಂದ್ರೆ ಸ್ವಲ್ಪ ಇದ್ದರೆ ಸಾಕು ತಲೆ ನಿಲ್ಲಲ್ಲ ಎನ್ನುವ ಈ ಕಾಲದಲ್ಲಿ ಇಂಥ ಹುಡುಗರನ್ನು ನೋಡಿ ಖುಷಿ ಆಗುತ್ತದೆ. ವಿನಯ್ ಬಹುದೊಡ್ಡ ಕಲಾವಿದನಾಗಿ ಮೂಡಿ ಬರುತ್ತಾನೆ. ಮೋನಿಷಾ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ವಿಜಯ್ ಕಥೆಗಳ ಆಯ್ಕೆ ಶೈಲಿ ಚೆನ್ನಾಗಿದೆ. ಮಾಯಾನಗರಿ ಬೆಂಗಳೂರಿಗೆ ಬದುಕನ್ನು ಅರಸಿ ಬಂದ ಮಕ್ಕಳ ಸ್ಥಿತಿ ಹೇಗಿರುತ್ತೆ ಎನ್ನುವುದನ್ನು ಈ ಸಿನಿಮಾದಲ್ಲಿ ಕಟ್ಟಿ ಕೊಟ್ಟಿದ್ದಾರೆ’ ಎಂದು ಹೇಳಿದರು.
‘ಅಮೇರಿಕಾ ಅಮೇರಿಕಾ 2’ Review: ಬಂಧನ, ಬಿಡುಗಡೆ ಮತ್ತು ಕ್ಷಮೆಯ ಸುತ್ತ


