‘ಸಿಂಪಲ್’ ಸುನಿ ನಿರ್ದೇಶಿಸುತ್ತಿರುವ ಕೆಲವು ಚಿತ್ರಗಳಲ್ಲಿ ‘ಮೋಡ ಕವಿದ ವಾತಾವರಣ’ ಸಹ ಒಂದು. ತಮ್ಮ ಗರಡಿಯಲ್ಲಿ ಪಳಗಿರುವ ಶೀಲಮ್‍ಗಾಗಿ ಈ ಚಿತ್ರವನ್ನು ನಿರ್ದೇಶಿಸಿರುವ ಸುನಿ, ಆ ಚಿತ್ರವನ್ನು ಮುಗಿಸಿ, ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಇನ್ನೆರಡು ತಿಂಗಳುಗಳಲ್ಲಿ ಚಿತ್ರದ ಬಿಡುಗಡೆ ಆಗಲಿದೆ.
ಅದಕ್ಕೂ ಮೊದಲು, ಚಿತ್ರದ ಬಿಡುಗಡೆಯ ದಿನಾಂಕವನ್ನು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ ಸುನಿ. ಜೂನ್ 26ರಂದು ‘ಮೋಡ ಕವಿದ ವಾತಾವರಣ’ ಚಿತ್ರವು ತೆರೆಗೆ ಬರುತ್ತಿದೆ.
ಶೀಲಮ್ ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ʼಮೋಡ ಕವಿದ ವಾತಾವರಣʼದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಹೊಂದಿರುವ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಶೀಲಮ್‍ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.
ಈ ಹಿಂದೆ ‘ಒಂದು ಸರಳ ಪ್ರೇಮಕಥೆ’ ಚಿತ್ರ ನಿರ್ಮಿಸಿದ್ದ ರಾಮ್ ಮೂವೀಸ್, ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ‘ಮೋಡ ಕವಿದ ವಾತಾವರಣ’ ಸಿನಿಮಾಗೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ.


