ಕನ್ನಡದ ಅತ್ಯಂತ ಜನಪ್ರಿಯ ಗೀತೆಯಾದ ಗೋಪಾಲಕೃಷ್ಣ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು …’ ಇದೀಗ ಚಿತ್ರದ ಶೀರ್ಷಿಕೆಯಾಗಿದೆ. ಈ ಹೆಸರಿನ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಮಾರ್ಚ್ 27ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಪ್ರಕೃತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶರಣಪ್ಪ ಗೌರಮ್ಮ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಚಿತ್ರದಲ್ಲಿ ರಾಣಾ ಹಾಗೂ ರಾಕಿ ಎಂಬ ನಾಯಿಗಳು ಅಭಿನಯ ಮಾಡಿದ್ದು, ರಾಣಾ ಟ್ರೇಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.
ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ಪಡೆದಿರುವ ಶರಣಪ್ಪ ವೃತ್ತಿಯಲ್ಲಿ ವಕೀಲರಾಗಿದ್ದರೂ, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ‘ಮಗಳಿಗಾಗಿ ಈ ಸಿನಿಮಾ ಮಾಡಿದೆ. ಚಿತ್ರದ ಕಥೆ ಚನ್ನಾಗಿ ಇತ್ತು. ಹಾಗಾಗಿ, ನಾನೇ ನಿರ್ಮಾಣ ಮಾಡಿದೆ. 10 ದಿನ ಶೂಟಿಂಗ್ ಬಾಕಿ ಇರುವಾಗ ಚಿತ್ರದಲ್ಲಿ ನಟಿಸಿರುವ ರಾಕಿ ಎಂಬ ನಾಯಿ ಆಕಸ್ಮಿಕವಾಗಿ ನಡೆದ ಆಕ್ಸಿಡೆಂಟ್ ನಲ್ಲಿ ನಿಧನವಾಯಿತು. ಚಿಕ್ಕವನಾಗಿದ್ದ ಅದರ ಮಗ ರಾಣಾ ದೊಡ್ಡದು ಆಗುವವರೆಗೂ ಕಾದು ಕ್ಲೈಮ್ಯಾಕ್ಸ್ ಶೂಟ್ ಮಾಡಿದೆವು. ಹಾಗಾಗಿ ಸಿನಿಮಾ ನಿಧಾನವಾಗಿದೆ. ಶ್ವಾನ ಪ್ರೇಮಿಗಳಿಗೆ ಈ ಸಿನಿಮಾ ತುಂಬಾ ಇಷ್ಟ ಆಗುತ್ತದೆ. ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಫ್ಯಾಮಿಲಿ ಕಥೆಯ ಸಿನಿಮಾವಿದು. ಮುಂದಿನ ದಿನಗಳಲ್ಲಿ ಕಿಕ್ ಬಾಕ್ಸಿಂಗ್ ಕುರಿತಾದ ಸಿನಿಮಾ ಮಾಡುವ ಪ್ಲ್ಯಾನ್ ಇದ್ದು, ಹೊಸಬರಿಗೆ ಸಿನಿಮಾ ಮಾಡಲು ಯೋಚನೆ ಇದೆ’ ಎಂದರು.

ನಂತರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ವಿಶ್ವಾಸ್ ಕೃಷ್ಣ ಮಾತನಾಡಿ, ‘ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಇದರಲ್ಲಿ ಭಾವನಾತ್ಮಕ ಪ್ರಯಾಣವಿದೆ. ಪ್ರಾಣಿ ಪ್ರಿಯರಿಗೆ ತುಂಬಾ ಇಷ್ಟ ಆಗುತ್ತದೆ. ಫ್ಯಾಮಿಲಿ ಸಮೇತ ನೋಡಬೇಕಾದ ಸಿನಿಮಾ’ ಎಂದರು.
ಚಿತ್ರದ ಮುಖ್ಯ ಪಾತ್ರದಲ್ಲಿ ನಿರ್ಮಾಪಕರ ಮಗಳು ಕುಮಾರಿ ಪ್ರಕೃತಿ ಅಭಿನಯಿಸಿದ್ದಾರೆ. ಬಾಲಕಿಯ ತಂದೆಯಾಗಿ ಮಾಧವ, ತಾಯಿಯಾಗಿ ಸ್ವಪ್ನ ಶೆಟ್ಟಿಗಾರ್ ಬಣ್ಣ ಹಚ್ಚಿದ್ದಾರೆ. ಪಟೇಲ್ ವರುಣ್ ರಾಜ್ ಅವರು ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.
ವಿಶ್ವದ ಸಮಸ್ಯೆಯನ್ನು ಹೊತ್ತು ಬರುತ್ತಿದೆ ‘ಕ್ಯಾಲೆಂಡರ್’; ಟ್ರೇಲರ್ ಬಿಡುಗಡೆ


