ಇಡೀ ಚಿತ್ರದಲ್ಲಿ ಕಂಡಿದ್ದು ರಣವೀರ್ ಕೂದಲು ಮಾತ್ರ; ‘ದುರಂಧರ್ 2’ ಬಗ್ಗೆ ರಮ್ಯಾ ವಿಮರ್ಶೆ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಣವೀರ್ ಸಿಂಗ್‍ ಅಭಿನಯದ ‘ದುರಂಧರ್ 2’ ಚಿತ್ರವು ಬಿಡುಗಡೆಯಾದ ಮೂರು ದಿನಗಳಲ್ಲಿ ಗಲ್ಲಾಪೆಟ್ಟಿಗೆಯನ್ನು ದೋಚುತ್ತಿದೆ. ಚಿತ್ರವನ್ನು ನೋಡಿರುವ ರಿಷಭ್‍ ಶೆಟ್ಟಿ, ಅಲ್ಲು ಅರ್ಜುನ್‍ ಮುಂತಾದ ಸೆಲೆಬ್ರಿಟಿಗಳು, ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಹೀಗಿರುವಾಗಲೇ, ನಟಿ ರಮ್ಯಾ, ಅದು ಚಿತ್ರವಲ್ಲ ಹಿಂಸೆಯ ಕೈಪಿಡಿ ಎಂದು ಹೇಳಿದ್ದಾರೆ.

‘ದುರಂಧರ್ 2’ ಚಿತ್ರವು ಯುಗಾದಿಯ ಪ್ರಯುಕ್ತ ಗುರುವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಮೊದಲ ಚಿತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಚಿತ್ರದ ಬಗ್ಗೆ ತೀವ್ರ ಕುತೂಹಲ ಮತ್ತು ನಿರೀಕ್ಷೆಗಳಿದ್ದವು. ಅದಕ್ಕೆ ಪೂರಕವಾಗಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಅದರ ಜೊತೆಗೆ ಚಿತ್ರದಲ್ಲಿ ಕ್ರೌರ್ಯ ಮತ್ತು ಹಿಂಸೆಯ ವೈಭವೀಕರಣದ ಬಗ್ಗೆ ಸಾಕಷ್ಟು ಕಟು ಟೀಕೆಗಳು ಸಹ ವ್ಯಕ್ತವಾಗುತ್ತಿವೆ.

ಚಿತ್ರ ನೋಡಿ ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ರಮ್ಯಾ, ‘ಚಿತ್ರ ನೋಡುವುದು ಒಂದು ತರಹ ಬೋರಿಂಗ್‍ ವಿಷಯದ ಕುರಿತು ಎಂದೂ ಮುಗಿಯದ ಅಧ್ಯಾಯಗಳನ್ನು ಓದುತ್ತಿದ್ದಂತೆ ಅನಿಸುತ್ತದೆ. ಒಂದು ಹಂತದಲ್ಲಿ ನಿಮ್ಮ ಮೆದುಳು, ನಿಮ್ಮೆದುರು ನಡೆಯುತ್ತಿರುವ ದೌರ್ಜನ್ಯವನ್ನು ನೋಡಿ ನಗುತ್ತಿರುತ್ತದೆ. ನಿಮಗೆ ನಿಜವಾಗಲೂ ಚಿತ್ರ ನೋಡಬೇಕೆಂಬ ಆಸೆ ಇದ್ದರೆ, ಒಂದು ಕೆಲಸ ಮಾಡಿ. ಚಿತ್ರಮಂದಿರರಗಳಲ್ಲಿ ನಿಮ್ಮ ಸಮಯ ಮತ್ತು ಹಣ ವೇಸ್ಟ್ ಮಾಡುವ ಬದಲು ಓಟಿಟಿಯಲ್ಲಿ ನೋಡಿ. ಚಿತ್ರದ ನಿರ್ದೇಶನ, ಸಂಭಾಷಣೆ, ಸಂಕಲನ, ಹಿನ್ನೆಲೆ ಸಂಗೀತ, ನಟನೆ ಎಲ್ಲವೂ ಸುಮಾರಗಿದೆ. ಮೊದಲ ಭಾಗದಲ್ಲಿ ಜನ ಚಪ್ಪಾಳೆ ಹೊಡೆಯುವುದು, ಕೇಕೆ ಹಾಕುವುದರನ್ನು ನೋಡಬಹುದಿತ್ತು. ಚಿತ್ರದಲ್ಲೊಂದು ಎನರ್ಜಿ ಇತ್ತು. ಪ್ರೇಕ್ಷಕರು ಸಹ ಚಿತ್ರ ನೋಡಿ ಖೂ಼ಇಪಡುತ್ತಿದ್ದರು. ಆದರೆ, ಎರಡನೆಯ ಭಾಗದಲ್ಲಿ ನೀರಸ ವಾತಾವರಣ ನೋಡಬಹುದು’ ಎಂದಿದ್ದಾರೆ.

‘ಎಲ್ಲರೂ ರಣವೀರ್‍ ಈ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ನಿಜಕ್ಕೂ ರಣವೀರ್‍ ತಮ್ಮ ಹೆಗಲ ಮೇಲೆ ಏನು ಒಯ್ಯುತ್ತಿದ್ದಾರೆ ಗೊತ್ತಾಗುವುದಿಲ್ಲ. ಇಡೀ ಚಿತ್ರದಲ್ಲಿ ನನಗೆ ಕಂಡಡಿದ್ದು ರಣವೀರ್‍ ಕೂದಲು, ಬಿಟ್ಟರೆ ಬೇರೇನೂ ಕಾಣಲಿಲ್ಲ. ಮೊದಲ ಭಾಗದಲ್ಲಿ ಆ ಕೂದಲಿಗೊಂದು ವ್ಯಕ್ತಿತ್ವವಿತ್ತು. ಆದರೆ, ಇಲ್ಲಿ ಏನೂ ಇಲ್ಲ. ಇನ್ನು, ಚಿತ್ರದಲ್ಲಿ ಕ್ರೌರ್ಯ ಘೋರವಾಗಿದೆ. ಇದು ಬರೀ ಚಿತ್ರವಲ್ಲ, ಕ್ರೌರ್ಯದ ಬಗ್ಗೆ ಒಂದು ಕೈಪಿಡಿ. ಸಿರಿಂಜ್‍, ಸ್ಪಾನರ್‍, ಚಾಕು, ಮಚ್ಚು, ಚೈನ್, ಗನ್, ಬಾಂಬ್‍ ಹೀಗೆ ಏನೆಲ್ಲಾ ಸಿಗುತ್ತದೋ, ಅದೆಲ್ಲವನ್ನು ಬಳಸಿಕೊಂಡು ಹಿಂಸೆ ಮತ್ತು ಕ್ರೌರ್ಯ ವಿಜೃಂಭೀಸಲಾಗಿದೆ. ನಿರ್ದೇಶಕರು ಪ್ರತೀ ದೃಶ್ಯದಲ್ಲೂ ಸವಾಲಿಗೆ ಬಿದ್ದಂತಿದೆ. ಮುಂದಿನ ದೃಶ್ಯವನ್ನು ಇನ್ನಷ್ಟು ಕ್ರೌರ್ಯ ಮತ್ತು ಹಾಸ್ಯಾಸ್ಪದ ಹೇಗೆ ಮಾಡಬಹುದು ಎಂದು ಯೋಚಿಸಿದಂತಿದೆ’ ಎಂದಿದ್ದಾರೆ.

ಒಟ್ಟಾರೆ, ‘ದುರಂಧರ್ 2’ ಚಿತ್ರವು ದೊಡ್ಡ ನಿರಾಶೆ ಎಂದಿರುವ ರಮ್ಯಾ, ‘ಮೊದಲ ಭಾಗ ನಿಮಗೆ ಖುಷಿಪಡಿಸಿದರೆ, ಎರಡನೆಯ ಭಾಗ ಯಾಕೆ ಮಾಡಿದರು ಎಂದು ಪ್ರಶ್ನಿಸುವಂತಿದೆ. ರಣವೀರ್‍ ಇದಕ್ಕಿಂತ ಉತ್ತಮವಾದುದನ್ನು ಮಾಡಬಲ್ಲರು. ನಿರ್ದೇಶಕ ಆದಿತ್ಯ ಧರ್‍ ಇಂತಹ ಪ್ರಾಪಗಾಂಡಾ ಚಿತ್ರಗಳನ್ನು ಮೀರಿ ಒಳ್ಳೆಯ ಚಿತ್ರಗಳನ್ನು ಮಾಡುವಂತಾಗಲಿ’ ಎಂದು ಹಾರೈಸಿದ್ದಾರೆ.

‘ಕಾಂತಾರ ಅಧ್ಯಾಯ 2’ ಇಲ್ಲಿಂದ ಶುರು; ಶೆಟ್ಟಿ-ಹೊಂಬಾಳೆ ಮಧ್ಯೆ ಬಿರುಕು?

Latest Posts

Discover more from KannadaScreens

Subscribe now to keep reading and get access to the full archive.

Continue reading