‘ಕಾಂತಾರ ಅಧ್ಯಾಯ 2’ ಇಲ್ಲಿಂದ ಶುರು; ಶೆಟ್ಟಿ-ಹೊಂಬಾಳೆ ಮಧ್ಯೆ ಬಿರುಕು?

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಜಾಗತಿಕ ಮಟ್ಟದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ‘ಕಾಂತಾರ – ಚಾಪ್ಟರ್ 1’ ಚಿತ್ರತಂಡದ ಮಧ್ಯೆ ಏನಾದರೂ ಬಿರುಕು ಉಂಟಾಗಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣವಾಗಿದ್ದು, ಯುಗಾದಿ ಹಬ್ಬದಂದು ಸೋಷಿಯಲ್‍ ಮೀಡಿಯಾದಲ್ಲಿ ರಿಷಭ್‍ ಶೆಟ್ಟಿ ಹಾಕಿರುವ ಒಂದು ಪೋಸ್ಟ್.

‘ಕಾಂತಾರ’ ಮತ್ತು ಅದರ ಪ್ರೀಕ್ವೆಲ್‍ ಆಗಿರುವ ‘ಕಾಂತಾರ – ಚಾಪ್ಟರ್‍ 1’ ಚಿತ್ರವನ್ನು ನಿರ್ಮಿಸಿದ್ದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಂಬಾಳೆ ಫಿಲಂಸ್‍. ಈ ಸಂಸ್ಥೆಯಿಂದ ಕಳೆದ ವರ್ಷ ಬಿಡುಗಡೆಯದ ‘ಕಾಂತಾರ – ಚಾಪ್ಟರ್‍ 1’ ಚಿತ್ರಕ್ಕೆ ರಿಷಭ್‍ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಈ ಚಿತ್ರವು ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜೊತೆಗೆ, ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಚಿತ್ರದ ನಂತರ ರಿಷಭ್‍ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್ ಸಂಸ್ಥೆ ಜೊತೆಗೆ ಇನ್ನೊಂದು ಚಿತ್ರ ಮಾಡುವ ಬಗ್ಗೆ ನಿರೀಕ್ಷೆ ಇತ್ತು. ಆದರೆ, ರಿಷಭ್‍ ಬೇರೆ ಚಿತ್ರಗಳನ್ನು ಒಪ್ಪಿಕೊಂಡಿರುವುದರಿಂದ, ಆ ಚಿತ್ರಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಹೀಗಿರುವಾಗಲೇ, ಯುಗಾದಿ ಹಬ್ಬದಂದು ರಿಷಭ್‍, ಸೋಷಿಯಲ್‍ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತಲೇ, ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರಿಷಭ್‍ ಶೆಟ್ಟಿ ಫಿಲಂಸ್‍ ಲೋಗೋ ಸಹ ನೋಡಬಹುದು. ಹಾಗಾದರೆ, ಅವರು ಹೊಂಬಾಳೆ ಫಿಲಂಸ್‍ ಸಂಸ್ಥೆಯನ್ನು ಬಿಟ್ಟು ‘ಕಾಂತಾರ – ಚಾಪ್ಟರ್ 2’ ಚಿತ್ರವನ್ನು ಮಾಡುವುದಕ್ಕೆ ಹೊರಟಿದ್ದಾರಾ? ಎಂಬ ಪ್ರಶ್ನೆ ಪ್ರೇಕ್ಷಕರ ತಲೆಯಲ್ಲಿ ಕೊರೆಯುತ್ತಿದೆ. ಇದರ ಜೊತೆಗೆ ಸೋಷಿಯಲ್‍ ಮೀಡಿಯಾಧಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆಯನ್ನು ಅವರು ಅನ್‍ಫಾಲೋ ಮಾಡಿರುವುದು ತುಪ್ಪ ಸುರಿದಂತಾಗಿದೆ.

ಈ ಎರಡು ವಿಷಯಗಳಿಂದ ರಿಷಭ್‍ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್‍ ನಡುವೆ ಬಿರುಕು ಏರ್ಪಟ್ಟಿದೆಯಾ ಎಂಬ ಚರ್ಚೆಯೊಂದು ಶುರುವಾಗಿದೆ. ಒಂದು ಸಮಾಧಾನದ ವಿಷಯವೆಂದರೆ, ರಿಷಭ್‍, ಹೊಂಬಾಳೆ ಫಿಲಂಸ್‍ ಸಂಸ್ಥೆಯನ್ನು ಅನ್‍ಫಾಲೋ ಮಾಡಿದ್ದರೂ, ವಿಜಯ್‍ ಕಿರಗಂದೂರು ಅವರನ್ನು ಫಾಲೋ ಮಾಡುತ್ತಲೇ ಇದ್ದಾರೆ. ಹಾಗಾಗಿ, ಏನೋ ಗೊಂದಲ ಇರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಜೊತೆಗೆ ಇಬ್ಬರೂ ಮತ್ತೆ ಇನ್ನೊಂದು ಸಿನಿಮಾಗೆ ಒಟ್ಟಾಗಲಿ ಎಂಬ ಹಾರೈಕೆಯೂ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ರಿಷಭ್‍ ಆಗಲೀ, ಹೊಂಬಾಳೆ ಫಿಲಂಸ್‍ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನು, ‘ಕಾಂತಾರ – ಚಾಪ್ಟರ್ 2’ ಇಲ್ಲಿಂದ ಶುರು ಎಂದು ರಿಷಭ್‍ ಪೋಸ್ಟ್ ಹಾಕಿದ್ದಾರಾದರೂ, ಚಿತ್ರ ಯಾವಾಗ ಶುರು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

‘ಕ್ರೇಜಿ ಬ್ರಹ್ಮ’ ಹೆಸರಿನಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ ಹಂಸಲೇಖ ಮತ್ತು ರವಿಚಂದ್ರನ್

Latest Posts

Discover more from KannadaScreens

Subscribe now to keep reading and get access to the full archive.

Continue reading