‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ಡೆವಿಲ್’ ಚಿತ್ರದ ‘ಸರಸೆ ನಿನ್ನ ಸೆರಗು ಸರಸೆ …’ ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ವಿವಾದವಾಗಿದ್ದು, ಅದನ್ನು ಕಿತ್ತು ಹಾಕಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಈಗಾಗಲೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಮುಂತಾದವರು ಹಾಡಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಿಂದಿ ಹಾಡನ್ನು ಕಿತ್ತುಹಾಕಲಾಗಿದೆ. ಈಗ ಕನ್ನಡ ಹಾಡನ್ನೂ ಡಿಲೀಟ್ ಮಾಡಬೇಕೆಂದು ಕನ್ನಡ ಲೇಖಕಿಯರ ಸಂಘ ಮತ್ತು ರಾಜ್ಯ ಮಹಿಳಾ ಆಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗ್ರಹಿಸಿದೆ.
ಈ ಸಂಬಂಧ ಪತ್ರ ಬರೆದಿರುವ ಲೇಖಕಿಯರ ಸಂಘ, ‘ಧ್ರುವ ಸರ್ಜಾ ನಟನೆಯ ‘ಕೆ.ಡಿ: ದಿ ಡೆವಿಲ್’ ಎಂಬ ಸಿನಿಮಾದಲ್ಲಿ ‘ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ …’ ಎಂದು ಆರಂಭವಾಗುವ ಹೀನ ಅಭಿರುಚಿಯ ಈ ಹಾಡು ಬಿಡುಗಡೆಯಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರ ಮೇಲೂ ಇದು ಕೆಟ್ಟ ಪರಿಣಾಮ ಬೀರಲಿದೆ. ಇದು ಒಳಗೊಂಡಿರುವ ಸಾಹಿತ್ಯವು ಅತ್ಯಂತ ಕೀಳು ಮಟ್ಟದಲ್ಲಿದೆ. ಶೃಂಗಾರಕ್ಕೂ ಅಶ್ಲೀಲಕ್ಕೂ ತುಂಬ ವ್ಯತ್ಯಾಸವಿದೆ. ಈ ಹಾಡು ಅಶ್ಲೀಲತೆಯಿಂದ ಕೂಡಿದೆ. ಈಗಾಗಲೇ ಹಲವು ರೀತಿಯಲ್ಲಿ ಹೆಣ್ಣುಮಕ್ಕಳ ಮೇಲೆ ಆಕ್ರಮಣ ಆಗುತ್ತಿದೆ. ಇಂತಹ ಹಾಡುಗಳು ಹೆಣ್ಣನ್ನು ಕಾಮದ ಗೊಂಬೆ ಎಂಬಂತೆ ಬಿಂಬಿಸಿ, ಹೆಂಗಸರನ್ನು ಆ ರೀತಿ ನೋಡಲು ಪ್ರಚೋದಿಸುತ್ತದೆ. ಕರ್ನಾಟಕ ಸರಕಾರವು 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ಅನ್ನು ನಿಷೇಧಿಸುವಲ್ಲಿ ತೋರಿದ ಕಾಳಜಿಯನ್ನು ಈಗಲೂ ತೋರಿಸಬೇಕಾಗಿದೆ. ಇಂತಹ ಹಾಡುಗಳು ನಮ್ಮ ಯುವಜನತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕು. ಸೆನ್ಸಾರ್ ಮಂಡಳಿಯು ತೋರಿರುವ ನಿರ್ಲಕ್ಷ್ಯ, ಬೇಜವಾಬ್ದಾರಿಗಳಿಂದಾಗಿ ಇಂತಹ ಹಾಡುಗಳು ಎಗ್ಗಿಲ್ಲದೆ ಬಿಡುಗಡೆಯಾಗುತ್ತಿವೆ. ಸೆನ್ಸಾರ್ ಮಂಡಳಿ ಈ ಹಾಡನ್ನು ಹೇಗೆ ಒಪ್ಪಿತು ಎಂಬುದೇ ಆಶ್ಚರ್ಯವಾಗುತ್ತಿದೆ. ಮಹಿಳೆಯನ್ನು ಅವಮಾನಿಸುವ ಇಂಥ ಹಾಡುಗಳನ್ನು ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಈ ಹಾಡನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಲೇಖಕಿಯರು, ಮಹಿಳಾ ಪರ ಮನಸ್ಸುಗಳಿರುವ ಎಲ್ಲರೂ ಆಗ್ರಹಿಸುತ್ತಿದ್ದೇವೆ’ ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಬಿ. ಟಿ. ಲಲಿತಾ ನಾಯಕ್, ಹೇಮಲತಾ ಮಹಿಷಿ, ಶಾಂತಾ ನಾಗರಾಜ್, ಪ್ರೊ. ಆರ್. ಸುನಂದಮ್ಮ, ಎಂ. ಎಸ್. ಆಶಾದೇವಿ, ಪ್ರತಿಭಾ ನಂದಕುಮಾರ್, ಡಾ. ವಸುಂಧರಾ ಭೂಪತಿ, ಆರ್. ಪೂರ್ಣಿಮಾ, ಸುಮಿತ್ರಾ ಬಾಯಿ, ಭಾರತಿ ಹೆಗಡೆ, ಹೇಮಾ ಪಟ್ಟಣಶೆಟ್ಟಿ ಪತ್ರ ಬರೆದಿದ್ದು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ಜನವಾದಿ ಮಹಿಳಾ ಸಂಘಟನೆ ಸಹ ಅನುಮೋದಿಸಿದೆ.
ಇನ್ನು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸಹ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಅವರಿಗೆ ಪತ್ರ ಬರೆದಿದ್ದು, ಮಹಿಳಾ ಗೌರವಕ್ಕೆ ಧಕ್ಕೆ ತರದಂತಹ ಸಾಹಿತ್ಯ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆತ ಇಂತಹ ಹಾಡುಗಳ ವಿರುದ್ಧ ನಿರ್ಬಂಧ ಹೇರಳು ಕ್ರಮವಹಿಸಬೇಕು ಎಂದು ಹೇಳಿದ್ದಾರೆ.
‘ಕೆಡಿ – ದಿ ಡೆವಿಲ್’ ಚಿತ್ರವು ಏಪ್ರಿಲ್ 30ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದ್ದು, ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
‘ಕೆಡಿ’ ಹಾಡಿನ ಬಗ್ಗೆ ಅರ್ಮಾನ್ ಮಲ್ಲಿಕ್ ಬೇಸರ; ಯೂಟ್ಯೂಬ್‍ನಿಂದ ಹಿಂದಿ ಹಾಡು ಡಿಲೀಟ್


