ಕಳೆದ ವರ್ಷದ ಮಧ್ಯಭಾಗದಲ್ಲಿ ಘೋಷಣೆಯಾದ ಚಿತ್ರ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’. ಕೋಮಲ್ ಅಭಿನಯದ ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದ್ದು, ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಕೋಮಲ್ ಕುಮಾರ್, ಮೇಘನಾ ರಾಜ್, ಅನುಷಾ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಚಿತ್ರವನ್ನು ಸಂದೇಶ್ ಶೆಟ್ಟಿ ಆಜ್ರಿ ಕಥೆ ಬರೆದು ನಿರ್ದೇಶಿಸಿದ್ದು, ವಿಕಾಸ್ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಎರಡು ಹಂತಗಳಲ್ಲಿ 75 ದಿನಗಳ ಕಾಲ ʼಸಂಗೀತಾ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮಲೆನಾಡು ಭಾಗದಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.
ಇನ್ನು ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರದ ಚಿತ್ರೀಕರಣಕ್ಕಾಗಿ ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಏಳು ವಿಭಿನ್ನ ವಿನ್ಯಾಸದ ಸೆಟ್‌ಗಳನ್ನು ನಿರ್ಮಿಸಿ, ಅದರಲ್ಲಿ ಚಿತ್ರದ ಬಹುಭಾಗದ ಚಿತ್ರೀಕರಣವನ್ನು ನಡೆಸಲಾಗಿರುವುದು ವಿಶೇಷ. ಕಥೆಯ ಬೇಡಿಕೆಗೆ ತಕ್ಕಂತೆ, ಸುಮಾರು ಎರಡು ಎಕರೆ ವಿಸ್ತೀರ್ಣದ ವಿಶಾಲವಾದ ಜಾಗದಲ್ಲಿ ಏಳು ವೈವಿಧ್ಯಮಯ ಸೆಟ್‌ಗಳನ್ನು ಹಾಕಿ, ಆ ಸೆಟ್‌ನಲ್ಲಿಯೇ ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರದ ಶೇ.90ರಷ್ಟು ಚಿತ್ರೀಕರಣವನ್ನು ಈ ಸೆಟ್‌ಗಳಲ್ಲಿಯೇ ಚಿತ್ರೀಕರಿಸಲಾಗಿದೆಯಂತೆ.

ಚಿತ್ರದ ಕುರಿತು ಮಾತನಾಡುವ ಸಂದೇಶ್, ʼಒಬ್ಬ ನಿರ್ದೇಶಕನಾಗಿ ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ನನಗೆ ಒಂದು ವಿಭಿನ್ನ ಅನುಭವ ನೀಡಿರುವ ಸಿನಿಮಾ. ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳು ಒಂದು ತರಹದ ಅನುಭವ ನೀಡಿದರೆ, ಈ ಸಿನಿಮಾ ಅವೆಲ್ಲಕ್ಕಿಂತ ಮಿಗಿಲಾದ ಬೇರೊಂದು ಅನುಭವ ನೀಡಿದೆ. ಕನ್ನಡದ ಚಿತ್ರರಂಗದ ಮಟ್ಟಿಗೆ ಇದೊಂದು ವಿಭಿನ್ನ ಚಿತ್ರವಾಗಿ ನಿಲ್ಲುತ್ತದೆ ಎಂಬ ಅಚಲ ವಿಶ್ವಾಸ ನಮ್ಮ ಇಡೀ ಚಿತ್ರತಂಡಕ್ಕಿದೆ’ ಎನ್ನುತ್ತಾರೆ.
ಚಿತ್ರದ ಮೊದಲಾರ್ಧ ಬಾರ್‌ನಲ್ಲಿ ಶುರುವಾಗಿ, ಬಾರ್ ಸುತ್ತ ಸಾಗಿದರೆ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗಿ ಅಲ್ಲೇ ಮುಗಿಯುತ್ತದೆ. ಹಾಗಾಗಿ, ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಎಂಬ ಶೀರ್ಷಿಕೆಯ ಜೊತೆಗೆ ದೇವರ ತಾಣ ಎಂಬ ಟ್ಯಾಗ್‍ಲೈನ್ ಇದೆ. ‘ಈ ಎರಡೂ ಹೆಸರುಗಳು ನಮ್ಮ ಸಿನಿಮಾದ ಟೈಟಲ್ಗಳು. ಆದರೆ, ಸೆನ್ಸಾರ್ ನಿಯಮದಂತೆ, ಒಂದು ಸಿನಿಮಾಕ್ಕೆ ಒಂದೇ ಹೆಸರು ಇಡಬೇಕಾಗಿರುವುದರಿಂದ, ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದೇವೆʼ ಎನ್ನುತ್ತಾರೆ ಸಂದೇಶ್ ಶೆಟ್ಟಿ ಅಜ್ರಿ.

ಕೋಮಲ್ ಎರಡು ಶೇಡ್‍ಗಳಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕೋಮಲ್ ದ್ವಿಪಾತ್ರ ಮಾಡುತ್ತಿದ್ದಾರೆ. ಇನ್ನು ಮೇಘನಾ ರಾಜ್ ʼದೇವರ ತಾಣʼದಲ್ಲಿ ರಾಣಿಯಾಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ವಜ್ರಧೀರ್ ಜೈನ್, ರಾಘು ರಾಮನಕೊಪ್ಪ, ಎಂ. ಕೆ. ಮಠ, ಪ್ರಶಾಂತ್ ಸಿದ್ದಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಕೂಡ ಚಿತ್ರದ ಪಾತ್ರವೊಂದಕ್ಕೆ ತೆರೆಮೇಲೆ ಬಣ್ಣ ಹಚ್ಚಿದ್ದಾರೆ.
ಡಾ. ರಾಜ್ ಕುರಿತಾದ ‘ಅಂತರಂಗದ ಅಣ್ಣ’ ಪುಸ್ತಕದ ವಿರುದ್ಧ ಕೃತಿಚೌರ್ಯ ಆರೋಪ


