ಕೆಲವು ತಿಂಗಳುಗಳ ಹಿಂದೆ ರಾಜ್ಯ ಸರ್ಕಾರವು 2021ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಪೈಕಿ, ಸಿನಿಮಾಗೆ ಸಂಬಂಧಿಸಿದ ಅತ್ಯುತ್ತಮ ಕೃತಿ ಪ್ರಶಸ್ತಿಯನ್ನು ಡಾ ರಾಜಕುಮಾರ್ ಕುರಿತು ಪ್ರಕಾಶ್‍ರಾಜ್ ಮೇಹು ಬರೆದಿರುವ ‘ಅಂತರಂಗದ ಅಣ್ಣ’ ಪುಸ್ತಕಕ್ಕೆ ಅತ್ಯುತ್ತಮ ಕೃತಿ ಪ್ರಶಸ್ತಿಯನ್ನು ಘೋಷಿಸಿತ್ತು. ಇದೀಗ ಹಿರಿಯ ಪತ್ರಕರ್ತ ಮತ್ತು ‘ಡಾ. ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿಯ ಲೇಖಕರಾದ ಎಸ್. ರುಕ್ಕೋಜಿ ರಾವ್ ಅವರು ಪ್ರಕಾಶ್‍ರಾಜ್ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿ, ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಹಲವು ವರ್ಷಗಳ ಅಧ್ಯಯನದೊಂದಿಗೆ ಕೆಲವು ವರ್ಷಗಳ ಹಿಂದೆ ರುಕ್ಕೋಜಿ ಅವರು ‘ಡಾ. ರಾಜಕುಮಾರ್ ಸಮಗ್ರ ಚರಿತ್ರೆ’ ಎಂಬ ಎರಡು ಸಂಪುಟಗಳ ಬೃಹತ್ ಗ್ರಂಥವನ್ನು ಪ್ರಕಟಿಸಿದ್ದರು. ಈ ಗ್ರಂಥವು 2015ರ ಅಕ್ಟೋಬರ್ 28ರಂದು ಬಿಡುಗಡೆಯಾಗಿ, ರಾಷ್ಟ್ರದ ಅತ್ಯುನ್ನತ ಸಿನಿಮಾ ಪುರಸ್ಕಾರವಾದ ಸ್ವರ್ಣಕಮಲ ಲಭಿಸಿತ್ತು. ಜೊತೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಈ ಪುಸ್ತಕಗಳಿಗೆ ಸಿಕ್ಕಿದ್ದವು. ಈ ಗ್ರಂಥದ ಕೆಲವು ಭಾಗಗಳನ್ನು (ವಿವರಗಳು ಮತ್ತು ಫೋಟೋಗಳು) ತಮ್ಮ ಅನುಮತಿ ಇಲ್ಲದೆ ನೇರವಾಗಿ ‘ಅಂತರಂಗದ ಅಣ್ಣ’ ಕೃತಿಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಪ್ರಕಾಶ್ ರಾಜ್ ಮೇಹು ಅವರಿಗೆ ಘೋಷಿಸಲಾಗಿರುವ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಪತ್ರ ಬರೆದಿದ್ದಾರೆ.

ರುಕ್ಕೋಜಿ ಅವರು ಬರೆದಿರುವ ಪತ್ರದ ಆಯ್ದ ಭಾಗ ಇಲ್ಲಿದೆ. ‘ಈ ಪುಸ್ತಕದ 200 ಪುಟಗಳ ಪೈಕಿ, 60 ಚಿತ್ರಗಳನ್ನು ನಾನು 2015ರಲ್ಲಿ ಹೊರತಂದ ‘ಡಾ. ರಾಜಕುಮಾರ್ ಸಮಗ್ರ ಚರಿತ್ರೆ’ ಪುಸ್ತಕದಿಂದ ಕದ್ದು ಪ್ರಕಟಿಸಲಾಗಿದೆ. ನನ್ನ ಬದುಕಿನ 15 ವರ್ಷಗಳನ್ನು ತೆತ್ತು ಅತ್ಯಂತ ಶ್ರಮಪಟ್ಟು ರೂಪಿಸಿದ್ದೆ. ಪ್ರಕಾಶ್ ರಾಜ್ ನನ್ನ ಕೃತಿಯಿಂದ 60ಕ್ಕೂ ಹೆಚ್ಚು ಚಿತ್ರಗಳನ್ನು ಅನಾಮತ್ತಾಗಿ ಕದ್ದಿರುವುದಲ್ಲದೆ ನನ್ನ ಬರಹವನ್ನು ಕೂಡಾ ಒಂದು ಅಕ್ಷರವನ್ನೂ ಬದಲಾಯಿಸದೆ, ತಾನೇ ಬರೆದಂತೆ ಯಥಾವತ್ತು ತಮ್ಮ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ತಮ್ಮ ಇಡೀ ಪುಸ್ತಕದಲ್ಲಿ ಮೂಲ ಕೃತಿಯನ್ನಾಗಲೀ, ನನ್ನ ಹೆಸರನ್ನಾಗಲೀ ಪ್ರಸ್ತಾಪಿಸಿಲ್ಲ ಅಥವಾ ಸ್ಮರಿಸಿಕೊಂಡಿಲ್ಲ. ಈ ವ್ಯಕ್ತಿ ಕೃತಿಚೌರ್ಯ ಮಾಡಿ ತಮಗೆ ಮಾತ್ರ ಅವಮಾನ ಮಾಡಿಕೊಂಡಿಲ್ಲ. ಡಾ. ರಾಜಕುಮಾರ್ ಅವರಂತಹ ಮೇರು ಶಕ್ತಿಗೆ ಅಪಮಾನ ಮಾಡಿದ್ದಾರೆ. ಭಾರತದ ಹಕ್ಕುಸ್ವಾಮ್ಯ ಕಾಯ್ದೆಯಡಿ ನನ್ನ ಕೃತಿ ನೊಂದಯಿತವಾಗಿದೆ. ನಾನು ನ್ಯಾಯಾಲಯದಲ್ಲಿ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇನೆ. ತಾವು ದಯಮಾಡಿ ಪೀತ ದೃಷ್ಟಿಯ ಪುಸ್ತಕಕ್ಕೆ ಪ್ರಕಟಿಸಿರುವ ರಾಜ್ಯ ಪ್ರಶಸ್ತಿಯನ್ನು ರದ್ದು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡುತ್ತಿದ್ದೇನೆ’ ಎಂದು ರುಕ್ಕೋಜಿ ರಾವ್ ಪತ್ರ ಬರೆದಿದ್ದಾರೆ. ಜೊತೆಗೆ ಕದ್ದ ಮಾಹಿತಿ ಮತ್ತು ಫೋಟೋಗಳ ದಾಖಲೆಯನ್ನು ಲಗ್ಗತಿಸಿದ್ದಾರೆ.
ಈ ಕುರಿತು ಫೇಸ್‍ಬುಕ್‍ನಲ್ಲಿ ಸ್ಪಷ್ಟೀಕರಣ ನೀಡಿರುವ ಪ್ರಕಾಶ್‍ರಾಜ್, ‘ನಾನು ರುಕ್ಕೋಜಿಯವರ ಮಹಾಗ್ರಂಥಗಳನ್ನು ಓದಿಲ್ಲ. ಒಮ್ಮೆ ಓದಲು ಪ್ರಯತ್ನಿಸಿದೆ. ಮುಂದೆ ಓದಬೇಕು ಅಂತ ಅನಿಸಲಿಲ್ಲ. ಆದರೂ ಅವರ ಶ್ರಮಕ್ಕೆ, ಅವರ ಬಗ್ಗೆ ಗೌರವವಿದೆ. ಅಣ್ಣಾವ್ರ ಸಿನಿಮಾಗಳ ಫೋಟೋಗಳು ಸಾರ್ವಜನಿಕ ಸ್‍ವತ್ತು. ಅವುಗಳ ಹಕ್ಕುಗಳು ಆಯಾ ಸಿನಿಮಗಳ ನಿರ್ಮಾಪಕರುಗಳದ್ದಾಗಿರುತ್ತದೆಯೇ ಹೊರತು ರುಕ್ಕೋಜಿಯವರದ್ದಾಗಿರಲು ಸಾಧ್ಯವೇ ಇಲ್ಲ. ಆದರೂ ಕೋರ್ಟಿಗೆ ಹೋಗುತ್ತೇನೆ ಎಂದು ಬರೆದಿದ್ದಾರೆ. ಧಾರಾಳವಾಗಿ ಹೋಗಲಿ, ನನಗೇನು ಭಯವಿಲ್ಲ’ ಎಂದು ಹೇಳಿದ್ದಾರೆ.


