‘ಡಾರ್ಲಿಂಗ್’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಬಿಡುಗಡೆ ಮಾಡುವುದಾಗಿ ಮೊದಲು ಹೇಳಲಾಗಿತ್ತು. ಆ ನಂತರ ಚಿತ್ರವು ಪ್ರೇಮಿಗಳ ದಿನದ ಬದಲಾಗಿ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಹಾಗಂತ ಖುದ್ದು ಕೃಷ್ಣ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈಗ ಚಿತ್ರದ ಬಿಡುಗಡೆಯಲ್ಲಿ ಮತ್ತೊಮ್ಮೆ ಬದಲಾವಣೆಯಾಗಿದೆ.
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ, ಆ ದಿನಾಂಕದಂದು ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಬಿಡುಗಡೆಗೊಳಿಸಲು ‘ಡಾರ್ಲಿಂಗ್’ ಕೃಷ್ಣ ಅಣಿಯಾಗಿದ್ದಾರೆ. ಯುಗಾದಿಯ ಪ್ರಯುಕ್ತ ಚಿತ್ರ ಬಿಡುಗಡೆಯಾಗುತ್ತಿದೆ. ‘ಟಾಕ್ಸಿಕ್’ ಬಿಡುಗಡೆಗೊಳ್ಳದಿದ್ದರೂ, ಅದೇ ದಿನ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ತೆರೆಗಾಣಿಸಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ.
‘ಲವ್ ಮಾಕ್ಟೇಲ್’ ಸರಣಿಯ ಮೂರನೆಯ ಚಿತ್ರ ಇದಾಗಿದ್ದು, ‘ಲವ್ ಮಾಕ್ಟೇಲ್ 2’ ಚಿತ್ರದ ಮುಂದುವರೆದ ಭಾಗವಾಗಿದೆ. ಈ ಚಿತ್ರವನ್ನು ಕ್ರಿಸ್‍ಮಿ ಫಿಲಂಸ್ ಬ್ಯಾನರ್ ಅಡಿ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೊತೆಯಾಗಿ ನಿರ್ಮಿಸಿದ್ದಾರೆ.
ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನವಿದೆ. ಚಿತ್ರದಲ್ಲಿ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಭಿಲಾಶ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್ ಮುಂತಾದವರು ನಟಿಸಿದ್ದಾರೆ.
‘ಟಾಕ್ಸಿಕ್’ ಬಿಡುಗಡೆ ಮುಂದಕ್ಕೆ; ಮಾರ್ಚ್ 19ರ ಬದಲು ಜೂನ್ 04ಕ್ಕೆ ಬಿಡುಗಡೆ


