‘ಟಾಕ್ಸಿಕ್’ ಬಿಡುಗಡೆ ಮುಂದಕ್ಕೆ; ಮಾರ್ಚ್ 19ರ ಬದಲು ಜೂನ್‍ 04ಕ್ಕೆ ಬಿಡುಗಡೆ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರವು ಮುಂದಕ್ಕೆ ಹೋಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ಚಿತ್ರ ಬಿಡುಗಡೆಗೆ ಇನ್ನು ಎರಡು ವಾರಗಳಿರುವಾಗ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರವು ಇದೀಗ ಮಾರ್ಚ್ 19ರ ಬದಲು, ಜೂನ್‍ 04ರಂದು ಬಿಡುಗಡೆಯಾಗಲಿದೆ.

ಈ ವಿಷಯವನ್ನು ಚಿತ್ರತಂಡವೇ ಖಚಿತಪಡಿಸಿದೆ. ಚಿತ್ರವನ್ನು ಮುಂದೂಡಲಾಗುತ್ತಿರುವುದಕ್ಕೆ ನೀಡಲಾಗಿರುವ ಕಾರಣ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತತೆ.

ಚಿತ್ರವನ್ನು ಮುಂದೂಡಲಾಗುತ್ತಿರುವ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಚಿತ್ರತಂಡ, ‘ಹಲವು ವರ್ಷಗಳ ಶ್ರಮದ ನಂತರ, ನಮ್ಮ ಚಿತ್ರವನ್ನು ಮಾರ್ಚ್ 19 ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೆವು. ಆದರೆ, ಪ್ರಸ್ತುತ ಜಗತ್ತಿನಲ್ಲಿ (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ) ಉಂಟಾಗಿರುವ ಅನಿಶ್ಚಿತತೆಯು, ಚಿತ್ರವನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ, ನಮ್ಮ ಪಾಲುದಾರರ ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ, ಚಿತ್ರದ ಬಿಡುಗಡೆಯ ದಿನಾಂಕವನ್ನು ಮರುನಿಗದಿಪಡಿಸುವ ಕಠಿಣ ಹಾಗೂ ಎಚ್ಚರಿಕೆಯ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಈಗ ಜಗತ್ತಿನಾದ್ಯಂತ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ 2026ರ ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

‘ಟಾಕ್ಸಿಕ್‍’ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಯಶ್‍ ಅವರ ಮಾನ್‍ಸ್ಟರ್‍ ಮೈಂಡ್‍ ಕ್ರಿಯೇಷನ್ಸ್ ಸಂಸ್ಥೆಗಳಡಿ KVN ಮತ್ತು RSY ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಶ್‍, ಕಿಯಾರಾ ಅಡ್ವಾಣಿ, ನಯನತಾರಾ, ಹಾಲಿವುಡ್‍ ನಟ ಕೈಲ್‍ ಪಾಲ್‍, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್‍, ಅನಿಲ್‍ ಕಪೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

100 ರೂಪಾಯಿ ಟಿಕೆಟ್‍ ಕೊಂಡು ಸಿನಿಮಾ ನೋಡೋಕೇನು? ರವಿಚಂದ್ರನ್‍ ಪ್ರಶ್ನೆ

Latest Posts

Discover more from KannadaScreens

Subscribe now to keep reading and get access to the full archive.

Continue reading