ಕನ್ನಡ ಚಿತ್ರರಂಗದ ಕೆಲವು ನಟ-ನಟಿಯರು ಕೆಲವು ಸೋಷಿಯಲ್ ಮೀಡಿಯಾದವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗೆ ಸಪ್ತಮಿ ಗೌಡ, ‘ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ’ ಎಂದು ಕೆಲವು ಸೋಷಿಯಲ್ ಮೀಡಿಯಾದವರ ನಡೆಯನ್ನು ಖಂಡಿಸಿದ್ದರು. ಇದಕ್ಕೆ ರಕ್ಷಿತಾ ಪ್ರೇಮ್, ಶಿವರಾಜಕುಮಾರ್, ರಮ್ಯಾ, ಯುವ ರಾಜಕುಮಾರ್ ಮುಂತಾದವರು ಸಪ್ತಮಿಗೆ ಬೆಂಬಲ ಸೂಚಿಸಿದ್ದರು. #ActorsNotObjects ಎಂಬ ಹ್ಯಾಷ್‌ಟ್ಯಾಗ್ ಮೂಲಕ ಆಂದೋಲಕ್ಕೆ ಚಾಲನೆ ಸಿಕ್ಕಿದ್ದು, ಹಲವು ನಟ-ನಟಿಯರು ಸೋಷಿಯಲ್ ಮೀಡಿಯಾದವರ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕುರಿತು ಸೋಮವಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ಸಹ ನಡೆಯಲಿದೆ. ಇಲ್ಲಿ ಬರೀ ಕಲಾವಿದರ ಹಿತದೃಷ್ಟಿಯಿಂದ ಚರ್ಚೆ ಮಾಡಿದರೆ ಸಾಲದು, ನಿರ್ಮಾಪಕರ ಬಗ್ಗೆಯೂ ಯೋಚಿಸಬೇಕು.
ಈ ಸಂಸ್ಕೃತಿ ಕನ್ನಡ ಚಿತ್ರರಂಗಕ್ಕೆ ಹೊಸದು. ಬಾಲಿವುಡ್ ಮತ್ತು ಬೇರೆ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿದ್ದ ಈ ಪದ್ಧತಿ, ಕಳೆದ ಎರಡ್ಮೂರು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ಈಗ ವಿಪರೀತ ಎನ್ನುವಷ್ಟು ಜಾಸ್ತಿಯಾಗಿದೆ. ಸಿನಿಮಾಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಗಳು ಹಾಗೂ ಇತರ ಕಾರ್ಯಕ್ರಮಗಳಲ್ಲಿ ನಟ-ನಟಿಯರ entryಯಿಂದ exitವರೆಗೂ ಅವರನ್ನು ಚಿತ್ರೀಕರಿಸಿ, ರೀಲ್ಸ್, ಶಾರ್ಟ್ಸ್, ಮೀಮ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಒಂದು ದೊಡ್ಡ ಬಳಗವೇ ಹುಟ್ಟಿಕೊಂಡಿದೆ. ಹೇಳಿಕೊಳ್ಳುವುದಕ್ಕೆ 50ಕ್ಕೂ ಹೆಚ್ಚು ಕ್ಯಾಮೆರಾಗಳಿದ್ದರೂ, ಸಿನಿಮಾದ ಪತ್ರಿಕಾಗೋಷ್ಠಿ ಅಥವಾ ಕಾರ್ಯಕ್ರಮದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಗುವುದೇ ಇಲ್ಲ. ಕಲಾವಿದರು ಬಂದು ನಿಂತಿದ್ದು, ಕೂತಿದ್ದು, ಅಕ್ಕಪಕ್ಕದವರ ಜೊತೆಗೆ ಮಾತಾಡಿದ್ದು, ಏನಾದರೂ ವಿವಾದಾತ್ಮಕ ಮಾತುಗಳನ್ನಾಡಿದ್ದು ಬಿಟ್ಟರೆ, ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಕೇಳಿದರೆ, ಅದರಿಂದ ಯಾವುದೇ views ಬರುವುದಿಲ್ಲ ಎಂಬ ಸಮಜಾಯಿಷಿ ಬರುತ್ತದೆ. ಪ್ರಚಾರದ ಆಸೆಯಿಂದ ಅಷ್ಟೊಂದು ಜನರನ್ನು ಕರೆಸುವ ನಿರ್ಮಾಪಕರ ಗತಿಯೇನು?
ಹಾಗಿದ್ದರೂ ಅವರು ಬೇಕೇ? ಎಂಬ ಪ್ರಶ್ನೆಗೆ, ತಾವು ಭಾಗವಹಿಸುವ ಪ್ರತಿ ಕಾರ್ಯಕ್ರಮದಲ್ಲೂ ಸೋಷಿಯಲ್ ಮೀಡಿಯಾದವರು ಇರಲೇಬೇಕು ಎಂದು ಬಯಸುವ, ಕೇಳಿ ಕರೆಸಿಕೊಳ್ಳುವ ಹಲವು ನಟ-ನಟಿಯರಿದ್ದಾರೆ. ಅದರ ಮೂಲಕ ಗುರುತಿಸಿಕೊಳ್ಳಬೇಕು, ಜನಪ್ರಿಯರಾಗಬೇಕು ಎಂದು ಹಪಾಹಪಿಸುವ ಹಲವರು ಇದ್ದಾರೆ. ಇದರಿಂದ ಅವರು ಗುರುತಿಸಿಕೊಳ್ಳಬಹುದು. ಆದರೆ, ಇದರಿಂದ ನಿರ್ಮಾಪಕರಿಗೆ ನಯಾಪೈಸೆ ಪ್ರಯೋಜನವಾಗುತ್ತಿಲ್ಲ. ಇದರಿಂದ ಕಲಾವಿದರಿಗೆ ಲೈಕ್ ಮತ್ತು ಕಾಮೆಂಟ್‍ಗಳು ಹೆಚ್ಚಬಹುದು. ಹಿಂಬಾಲಕರು ಜಾಸ್ತಿಯಾಗಬಹುದು. ಅವರ ಖ್ಯಾತಿ ಹೆಚ್ಚಬಹುದು. ಆದರೆ, ದುಡ್ಡು ಕೊಟ್ಟು Paparazziಗಳನ್ನು ಕರೆಸುವ ನಿರ್ಮಾಪಕರು ಅಥವಾ ಕಾರ್ಯಕ್ರಮದ ಆಯೋಜಕರಿಗೆ ಯಾವ ಲಾಭವೂ ಇಲ್ಲ.
ಈ ಸೋಷಿಯಲ್ ಮೀಡಿಯಾ ಎನ್ನುವುದು ಆಧುನಿಕ ಪ್ರಚಾರದ ಹೊಸ ತಂತ್ರ. ಮುಂಚೆಲ್ಲಾ ಸಿನಿಮಾಗಳಿಗೆ ಒಬ್ಬ ಪ್ರಚಾರಕರ್ತರಿರುತ್ತಿದ್ದರು. ಅವರು ಮಾಧ್ಯಮದವರನ್ನು ಪತ್ರಿಕಾಗೋಷ್ಠಿಗಳಿಗೆ ಕರೆಯುತ್ತಿದ್ದರು. ಸಿನಿಮಾ ತೋರಿಸುತ್ತಿದ್ದರು. ಆದರೆ, ಇವತ್ತು ಒಂದೊಂದು ಸಿನಿಮಾಗೆ ಪ್ರಚಾರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪತ್ರಿಕಾಗೋಷ್ಠಿಗಳಿಗೆ ಕರೆಯುವುದಕ್ಕೆ ಒಬ್ಬರಾದರೆ, ಸೋಷಿಯಲ್ ಮೀಡಿಯಾ ಪ್ರಮೋಷನ್, ಡಿಜಿಟಲ್ ಮಾರ್ಕೆಟಿಂಗ್, ವೈಯಕ್ತಿಕ ಪ್ರಚಾರ … ಹೆಸರಿನಲ್ಲಿ ಪ್ರಚಾರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ನಿರ್ಮಾಪಕರು ತಲೆ ಒಡ್ಡಬೇಕಾಗುತ್ತಿದೆ.

ಒಂದು ಕಾಲಕ್ಕೆ ಪ್ರಚಾರಕ್ಕೆಂದೇ ಪ್ರತ್ಯೇಕ ಬಜೆಟ್ ಇರುತ್ತಿರಲಿಲ್ಲ. ಆದರೆ, ಇಂದು ಒಂದೊಂದು ಚಿತ್ರದ ಪ್ರಚಾರಕ್ಕೆ ದೊಡ್ಡ ಮಟ್ಟದ ಹಣವನ್ನು ಎತ್ತಿಡಲಾಗುತ್ತಿದೆ. ಚಿತ್ರದ ಪ್ರಚಾರಕ್ಕೆಂದೇ ಎರಡ್ಮೂರು ಕೋಟಿ ಖರ್ಚು ಮಾಡಿ ಕೈಸುಟ್ಟುಕೊಂಡ ನಿರ್ಮಾಪಕರಿದ್ದಾರೆ. ಚಿತ್ರದ ಪ್ರಚಾರಕ್ಕೆ ಖರ್ಚು ಮಾಡುವ ಹಣದಲ್ಲಿ ಕೆಲವು ಕಡಿಮೆ ಬಜೆಟ್‍ನ ಮತ್ತು ಗುಣಮಟ್‍ಟದ ಚಿತ್ರಗಳನ್ನೇ ನಿರ್ಮಿಸಿ ಬಿಡಬಹುದು. ಹಾಗೆ ಖರ್ಚು ಮಾಡುವುದರಿಂದ ಏನಾದರೂ ಪ್ರಯೋಜನವಾಗುತ್ತದಾ? ಎಂದರೆ ಖಂಡಿತಾ ಇಲ್ಲ. ನಿರ್ಮಾಪಕ ರಮೇಶ್ ರೆಡ್ಡಿ ತಮ್ಮ ‘45’ ಚಿತ್ರದ ಪ್ರಚಾರಕ್ಕೆ ಒಂದೂವರೆ ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಮಾತು ಚಿತ್ರರಂಗದ ವಲಯದಲ್ಲಿ ಕೇಳಿ ಬರುತ್ತದೆ. ಅಷ್ಟು ಖರ್ಚು ಮಾಡಿದರೂ, ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮೂವರು ಜನಪ್ರಿಯ ನಟರಿದ್ದರೂ, ಆ ಚಿತ್ರದ ಗಳಿಕೆ 10 ಕೋಟಿ ರೂ. ಮೀರಲಿಲ್ಲ ಎಂಬುದು ದುರಂತ.
ಮುಂಚೆಲ್ಲಾ ಪತ್ರಿಕೆಗಳಿಗೆ, ಟಿವಿ ಚಾನಲ್‍ಗಳಿಗೆ ಜಾಹೀರಾತು ಕೊಡುವುದು, ಪೋಸ್ಟರ್ ಅಂಟಿಸುವುದೇ ಪ್ರಚಾರವಾಗಿತ್ತು. ಕ್ರಮೇಣ ಹೋರ್ಡಿಂಗ್, ಆಟೋ, ಬಸ್ಸಿನ ಮೇಲೆ ಪೋಸ್ಟರ್ ಪ್ರಚಾರ ಪ್ರಾರಂಭವಾಯಿತು. ಅದೆಲ್ಲದರ ಜೊತೆಗೆ ಈಗ ಸೋಷಿಯಲ್ ಮೀಡಿಯಾ ಪ್ರಮೋಷನ್, influencer marketing, ಯೂಟ್ಯೂಬ್ ಸಂದರ್ಶನಗಳು, theater filling … ಹೀಗೆ ಹಲವು ತಂತ್ರಗಳು ಹುಟ್ಟಿಕೊಂಡಿವೆ. ಈ ಪೈಕಿ ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂಗಳಲ್ಲಿ ಸುದ್ದಿ ಹಾಕಿಸುವುದು ಒಂದು ರೀತಿ. ಕೆಲವರು ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಹೆಚ್ಚುಹೆಚ್ಚು ಫಾಲೋವರ್‍ಗಳಿರುವ ಟ್ರೋಲ್ ಪೇಜ್‍ಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವರ ಬಳಿ 15-20 ಪೇಜ್‍ಗಳಿರುವ ಉದಾಹರಣೆ ಸಹ ಇದೆ. ಅವರೆಲ್ಲಾ ತಮ್ಮ ಬಳಿ ಅಷ್ಟು ಹಿಂಬಾಲಕರಿದ್ದಾರೆ, ಇಷ್ಟಿದ್ದಾರೆ, ವಿಷಯ ವೈರಲ್ ಆದರೆ ಚಿತ್ರಕ್ಕೆ ದೊಡ್ಡ ಅನುಕೂಲ ಎಂದು ನಂಬಿಸಿ ಹಣ ಮಾಡುತ್ತಿದ್ದಾರೆ. ಆದರೆ, ಇದರಲ್ಲಿ ಹೆಚ್ಚಿನವು active ಆಗಿರುವುದಿಲ್ಲ. ಆದರೆ, ಒಂದೊಂದು ಪುಟಕ್ಕೂ 10-20 ಸಾವಿರ ಹಣ ಪಡೆಯಲಾಗುತ್ತದೆ. ನಿರ್ಮಾಪಕರು ಹಣವಂತರಾಗಿದ್ದರಂತೂ ಆ ಮೊತ್ತ ಇನ್ನಷ್ಟು ದೊಡ್ಡದಾಗುತ್ತದೆ.
ಇನ್ನು, ಚಿತ್ರಮಂದಿರಗಳಿಗೆ ಜನರನ್ನು ಕರೆಸೋದು ಮತ್ತೊಂದು ರೀತಿ. ಯಾವ ಚಿತ್ರಮಂದಿರಗಳಿಗೆ ಎಷ್ಟು ಜನರನ್ನು ಕರೆಸಬೇಕು ಎಂದು ಮೊದಲೇ ತಿಳಿಸಿಬಿಟ್ಟರೆ, ವ್ಯವಸ್ಥೆ ಮಾಡುವುದಕ್ಕೆಂದೇ ಒಂದು ಜಾಲವಿದೆ. Single Screenಗಾದರೆ ಒಂದು ವರ್ಗ, ಮಲ್ಟಿಪ್ಲೆಕ್ಸ್ಗಳಿಗೆ ಇನ್ನೊಂದು ವರ್ಗವಿದೆ. ಅವರಿಗೆ ಬಿಟ್ಟಿ ಟಿಕೆಟ್ ಕೊಟ್ಟು, 100ರಿಂದ 500 ರೂ. ಕೊಡಲಾಗುತ್ತಿದೆ. ಕಾಲೇಜು ಹುಡುಗ-ಹುಡುಗಿಯರು, ಮಧ್ಯವಯಸ್ಕರು, ಹಿರಿಯರು … ಹೀಗೆ ಯಾವ ವಯೋಮಾನದವರು ಬೇಕೆಂದರೂ, ಅವರಲ್ಲಿ ಹಾಜರಿರುತ್ತಾರೆ. ಯಾವ ಪ್ರದೇಶದ, ಯಾವ ಚಿತ್ರಮಂದಿರಕ್ಕೆ, ಯಾವ ಪ್ರದರ್ಶನಕ್ಕೆ ಎಷ್ಟು ಜನ ಬೇಕು ಎಂದರೂ ವ್ಯವಸ್ಥೆ ಆಗುತ್ತದೆ. ಹೀಗೆ ನಿರ್ಮಾಪಕರ ದುಡ್ಡಿನಲ್ಲಿ ಬಿಟ್ಟಿ ಟಿಕೆಟ್ ಹರಿಸಲಾಗುತ್ತದೆ. ಈ ಮೂಲಕ ಬುಕ್ ಮೈ ಶೋನಲ್ಲಿ ಕೆಲವೇ ನಿಮಿಷಗಳಲ್ಲಿ fast filling ತೋರಿಸಲಾಗುತ್ತದೆ. ನಿಜವಾದ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಿ ನೋಡಿದರೆ, ಅಲ್ಲಿ ಖಾಲಿ ಹೊಡೆಯುತ್ತಿರುತ್ತದೆ.
ಹೀಗೆ ಚಿತ್ರ ನೋಡಲು ಬರುವವರು ಚಿತ್ರವನ್ನಾದರೂ ನೋಡುತ್ತಾರಾ ಎಂದರೆ, ಅವರಿಗೆ ಚಿತ್ರದ ಬಗ್ಗೆ ಕಿಂಚಿತ್ತೂ ಆಸಕ್ತಿ ಇರುವುದಿಲ್ಲ. ಪರದೆಯ ಮೇಲೆ ಏನಾಗುತ್ತಿದೆ ಎಂಬುದರ ಅರಿವಿರುವುದಿಲ್ಲ. ಮೊಬೈಲ್‍ನಲ್ಲಿ ಗೇಮ್ ಆಡುತ್ತಲೋ, ಓಟಿಟಿಯಲ್ಲಿ ಇನ್ನೊಂದು ಚಿತ್ರ ನೋಡುತ್ತಲೋ, ಕ್ರಿಕೆಟ್ ಎಂಜಾಯ್ ಮಾಡುತ್ತಲೋ ಕಾಲ ಕಳೆದಿರುತ್ತಾರೆ. ಗಾಂಧಿನಗರವೂ ಸೇರಿದಂತೆ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಇನ್ನೊಂದು ಸಮಸ್ಯೆ. ಅಲ್ಲಿ ಮೊದಲ ದಿನ ಚಿತ್ರಮಂದಿರಗಳಿಗೆ ಕಾಲಿಡುವುದೇ ದೊಡ್ಡ ಹಿಂಸೆ. ದೊಡ್ಡ ಸಂಖ್ಯೆಯಲ್ಲಿ ಜನ ತೋರಿಸುವುದಕ್ಕೆಂದು, ಟಿಕೆಟ್ ಹರಿಸದೆ, ಎಲ್ಲರನ್ನೂ ಒಳಗೆ ಬಿಡಲಾಗುತ್ತದೆ. ಕೆಲವರು ಕುಡಿದು ತೂರಾಡುತ್ತಾ ಚಿತ್ರಮಂದಿರಗಳಿಗೆ ಬಂದಿರುತ್ತಾರೆ. ಪ್ರದರ್ಶನ ಪ್ರಾರಂಭವಾಗುವುದಕ್ಕೆ ಮೊದಲೇ ನಿದ್ದೆಗೆ ಜಾರಿರುತ್ತಾರೆ. ಇಡೀ ಚಿತ್ರಮಂದಿರ ಗಬ್ಬು ನಾರುತ್ತಿರುತ್ತದೆ. ಇನ್ನು, ಚಿತ್ರ ನೋಡಿ ಮೈಕಿನ ಮುಂದೆ ವಿಮರ್ಶೆ ಕೊಡುವುದಕ್ಕೂ ಒಂದು ವರ್ಗವಿದೆ. ನವಾಜ್, ಅಮ್ಕು ಡಮ್ಕು ತರಹದವರು ಪ್ರಾಸಬದ್ಧವಾಗಿ ಮಾತನಾಡಿ, punch dialogueಗಳನ್ನು ಹೊಡೆದು ಜನಪ್ರಿಯರಾಗಿದ್ದೂ ಇದೆ. ಇತ್ತೀಚೆಗೆ, ಚಿತ್ರದ ಪ್ರಚಾರ ಮಾಡುವುದಕ್ಕೆ ಹೋಗಿ ಅಮ್ಕು ಡಮ್ಕು, ಪೆಟ್ರೋಲ್ ಹೆಸರಿನ ಜೇನಿನ ನೀರು ಕುಡಿದು ಏನೆಲ್ಲಾ ಅವಾಂತರ ಮಾಡಿಕೊಂಡ, ಕೆಟ್ಟ ಪ್ರಚಾರ ಮಾಡುವುದಕ್ಕೆ ಹೋಗಿ ಚಿತ್ರತಂಡಕ್ಕೆ ಜನ ಹೇಗೆಲ್ಲಾ ಛೀಮಾರಿ ಹಾಕಿದರು ಎಂದು ಗೊತ್ತೇ ಇದೆ. ಆದರೂ ಕೆಲವು ನಿರ್ಮಾಪಕರು ಬದಲಾಗುತ್ತಿಲ್ಲ.
ಇಲ್ಲಿ ಪ್ರತಿಯೊಂದಕ್ಕೂ ದುಡ್ಡು. ನಿರ್ಮಾಪಕರು ಬರೀ ಚಿತ್ರ ಮಾಡುವುದಷ್ಟೇ ಅಲ್ಲ, ತಾವೇ ಕಮಿಷನ್ ಕೊಟ್ಟು ಬಿಡುಗಡೆ ಮಾಡಿಸಬೇಕು, ತಾವೇ ಹಣ ಸುರಿದು ನಟ-ನಟಿಯರನ್ನು ಮೆರೆಸಬೇಕು, ತಾವೇ ಖರ್ಚು ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆಸಿಕೊಳ್ಳಬೇಕು. ತಾವೇ ಪುಕ್ಕಟ್ಟೆ ಚಿತ್ರ ತೋರಿಸಿ, ಜೈಕಾರ ಹಾಕಿಸಿಕೊಳ್ಳಬೇಕು. ಹೋಗಲಿ ಇಷ್ಟೆಲ್ಲ ಮಾಡಿ, ಯಾರಾದರೂ ಖುಷಿಯಾಗಿದ್ದಾರಾ? ಹಾಕಿದ ಬಂಡವಾಳವನ್ನು ವಾಪಸ್ಸು ಪಡೆದಿದ್ದರಾ? ದೊಡ್ಡದಲ್ಲದಿದ್ದರೂ ಸಣ್ಣ ಲಾಭವನ್ನಾದರೂ ನೋಡಿದ್ದಾರಾ? ಖಂಡಿತಾ ಇಲ್ಲ. ಕಳೆದ ಕೆಲವು ತಿಂಗಳಲ್ಲಿ ಬಿಡುಗಡೆಯಾದ ಕೆಲವು ಜನಪ್ರಿಯ ನಟರ ಚಿತ್ರಗಳ್ಯಾವುವೂ ಹಣ ಮಾಡುವುದಿರಲಿ, ಹಾಕಿದ ಬಂಡವಾಳವನ್ನೂ ವಾಪಸ್ಸು ಪಡೆದಿಲ್ಲ. ಕೆಲವರು 10 ಕೋಟಿ ರೂ.ಗಳಿಂದ 30 ಕೋಟಿ ರೂ.ವರೆಗೂ ನಷ್ಟ ಅನುಭವಿಸಿದ್ದಾರೆ. ಇಲ್ಲಿ ದುಡ್ಡು ನೋಡಿದವರೆಂದರೆ, ಜನಪ್ರಿಯ ನಟರು ಮತ್ತು ಪ್ರಚಾರದ ಹೆಸರಿನಲ್ಲಿ ನಿರ್ಮಾಪಕರ ಗಂಟು ಕರಗಿಸುತ್ತಿರುವ ಮಧ್ಯವರ್ತಿಗಳು.
ಮಧ್ಯವರ್ತಿಗಳ ಕಾಟ ಚಿತ್ರರಂಗಕ್ಕೆ ಹೊಸದೇನೂ ಅಲ್ಲ. ಇವತ್ತು ಆ ಸಂಖ್ಯೆ ಎಷ್ಟು ಹೆಚ್ಚಿದೆ ಎಂದರೆ, ಅದರಲ್ಲೂ ಪ್ರಚಾರದ ವಿಷಯದಲ್ಲಿ ಪ್ರತಿಯೊಂದು ವಿಭಾಗಕ್ಕೂ ಮಧ್ಯವರ್ತಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಕೆಲವರು ಟ್ರೋಲ್ ಪೇಜ್‍ಗಳ ಹೆಸರಿನಲ್ಲಿ ದುಡ್ಡು ಮಾಡಿದರೆ, ಇನ್ನೂ ಕೆಲವರು ಚಿತ್ರದ ಬಿಡುಗಡೆಯ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಮತ್ತೂ ಕೆಲವರು ವಿಮರ್ಶೆಗಳ ಹೆಸರಿನಲ್ಲಿ ಹಣ ಬಾಚುತ್ತಿದ್ದಾರೆ. ಮಾಡಿದ ಕೆಲಸಕ್ಕೆ ಸಂಭಾವನೆ ಪಡೆಯುವುದರ ಜೊತೆಗೆ, ಕಮಿಷನ್, ಸರ್ವೀಸ್ ಚಾರ್ಚ್ ಹೆಸರಿನಲ್ಲಿ ಲಕ್ಷಲಕ್ಷ ಬಾಚುತ್ತಿದ್ದಾರೆ. ಚಿತ್ರ ಮಾಡುವವರ ಗಂಟು ಕರಗುತ್ತಿದ್ದರೆ, ಇವರ ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿದೆ. ಈ ದಂಧೆ ಸದ್ಯಕ್ಕೆ ಎಷ್ಟು ಜೋರಾಗಿದೆ ಎಂದರೆ, ನಿರ್ದೇಶಕರಾಗಿ, ತಂತ್ರಜ್ಞರಾಗಿ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ಗುರುತಿಸಿಕೊಂಡವರೆಲ್ಲಾ ತಮ್ಮ ಮೂಲ ಕೆಲಸಗಳನ್ನು ಬಿಟ್ಟು ಇದೀಗ ಮಧ್ಯವರ್ತಿಗಳಾಗುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಗುರುತಿಸಿಕೊಂಡರೆ, ಕೆಲವರು ತೆರೆಮರೆಯಲ್ಲೇ ಆಟ ಆಡುತ್ತಿದ್ದಾರೆ.
ಹಾಗಾದರೆ, ಈ ವಿಷಯ ನಿರ್ಮಾಪಕರಿಗೆ ಗೊತ್ತಿಲ್ಲವಾ? ಖಂಡಿತಾ ಗೊತ್ತಿದೆ. ಆದರೆ, ಅದು ಗೊತ್ತಾಗುವಷ್ಟರಲ್ಲಿ ಕಾಲ ಮೀರಿ ಹೋಗಿರುತ್ತದೆ. ಮಧ್ಯವರ್ತಿಗಳ ಬಣ್ಣದ ಮಾತಿಗೆ ಮರುಳಾಗಿ, ಅಷ್ಟು ಪ್ರಚಾರ ಪಡೆಯಬಹುದು, ‘ಕೆಜಿಎಫ್’, ‘ಕಾಂತಾರ’ ಚಿತ್ರದ ರೇಂಜಿಗೆ ಹಣ ಮಾಡಬಹುದು ಎಂದು ಆಸೆಪಟ್ಟವರೆಲ್ಲಾ, ಚಿತ್ರ ಬಿಡುಗಡೆಯಾದ ಮೊದಲ ದಿನವೇ ಯಾವುದು ನಿಜ, ಯಾವುದು ಸುಳ್ಳು ಎಂದು ಗೊತ್ತಾಗುತ್ತದೆ. ಎರಡನೆಯ ದಿನವಂತೂ ಆ ಕಡೆ ಪ್ರೇಕ್ಷಕರೂ ಇಲ್ಲದೆ, ಈ ಕಡೆ ಪ್ರದರ್ಶನಗಳು ರದ್ದಾದಾಗ ತಾವೆಂಥಾ ತಪ್ಪು ಮಾಡಿದೆವು ಎಂಬುದು ಗೊತ್ತಾಗುತ್ತದೆ. ಆದರೆ, ಅಷ್ಟರಲ್ಲಿ ಸಾಕಷ್ಟು ತಡವಾಗಿರುತ್ತದೆ. ಈ ನೋವನ್ನು ಸಾಕಷ್ಟು ನಿರ್ಮಾಪಕರು ಇತ್ತೀಚಿನ ವರ್ಷಗಳಲ್ಲಿ ಅನುಭವಿಸಿದ್ದಾರೆ. ಸತ್ಯ ಗೊತ್ತಿದ್ದರೂ, ಇನ್ನಷ್ಟು ಹೊಸ ಕುರಿಗಳು ಹಳ್ಳಕ್ಕೆ ಬೀಳುವುದಕ್ಕೆ ತಯಾರಾಗುತ್ತಿವೆ. ಅವರನ್ನು ತಳ್ಳುವುದಕ್ಕೆ ಮಧ್ಯವರ್ತಿಗಳು ತಯಾರಾಗುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿರುವ ಹಿಂಬಾಲಕರು ಬೇರೆ. ಚಿತ್ರ ನೋಡುವ ಪ್ರೇಕ್ಷಕರು ಬೇರೆ. ಒಬ್ಬ ನಟನಿಗೋ, ನಟಿಗೋ ದೊಡ್ಡ ಹಿಂಬಾಲಕರ ಪಡೆ ಇದೆ ಎಂದ ಮಾತ್ರಕ್ಕೆ ಅವರೆಲ್ಲರೂ ಚಿತ್ರ ನೋಡುವುದಕ್ಕೆ ಬರುತ್ತಾರೆ, ಚಿತ್ರ ಗೆಲ್ಲಿಸುತ್ತಾರೆ ಎಂಬುದು ಮೂರ್ಖತನ. ಇನ್ನು, ಮೊದಲ ದಿನ ಮೈಕ್ ಮುಂದೆ ಚಿತ್ರದ ಬಗ್ಗೆ ಮಾತನಾಡುವ ಅಥವಾ ಪ್ರೀಮಿಯರ್ ಶೋಗಳಲ್ಲಿ ಅಭಿಪ್ರಾಯಗಳನ್ನು ತಿಳಿಸುವುದು ಸುಳ್ಳು ಎಂಬುದು ಇಷ್ಟರಲ್ಲಿ ಎಲ್ಲರಿಗೂ ಸ್ಪಷ್ಟವಾಗಿದೆ. ಕನ್ನಡದ ಜನಪ್ರಿಯ ನಟರ ಸೋಷಿಯಲ್ ಮೀಡಿಯಾ ಹಿಂಬಲಕರಿಗೂ, ಅವರ ಚಿತ್ರಗಳನ್ನು ನೋಡುವುದಕ್ಕೆ ಚಿತ್ರಮಂದಿರಗಳಿಗೆ ಪ್ರೇಕ್ಷಕರಿಗೂ ತಾಳೆ ಮಾಡುವ ಹಾಗೇ ಇಲ್ಲ. ಇಲ್ಲೊಂದು ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿ ಲಕ್ಷಲಕ್ಷ ಹಿಂಬಾಲಕರಿದ್ದರೆ, ಚಿತ್ರಮಂದಿರಗಳಲ್ಲಿ ಕೆಲವು ಸಾವಿರ ಲೆಕ್ಕದಲ್ಲೂ ಜನ ಚಿತ್ರ ನೋಡಿರುವುದಿಲ್ಲ.
ಇದೆಲ್ಲಾ ಒಂದು ದೊಡ್ಡ ಭ್ರಮೆ ಎಂದು ನಟಿ ಪೂಜಾ ಹೆಗ್ಡೆ ಕೆಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದಾರೆ. ‘ನನಗೆ ಸೋಷಿಯಲ್ ಮೀಡಿಯಾದಲ್ಲಿ 2.70 ಕೋಟಿ ಹಿಂಬಾಲಕರು ಇರಬಹುದು. ಅದೊಂದು ಸಂಖ್ಯೆ ಅಷ್ಟೇ. ಅದೇ ಯಶಸ್ಸಿನ ಸೂತ್ರವಲ್ಲ. ಹಿಂಬಾಲಕರೆಲ್ಲಾ ಚಿತ್ರ ನೋಡುವುದಕ್ಕೆ ಬರುವುದಿಲ್ಲ. ಸೋಷಿಯಲ್ ಮೀಡಿಯಾ ಎನ್ನುವುದು ನಿಜವಾದ ಪ್ರಪಂಚವಲ್ಲ’ ಎಂದು ಹೇಳಿಕೊಂಡಿದ್ದಾರೆ. ಇನ್ನಾದರೂ ಈ ವಿಷಯವನ್ನು ನಿರ್ಮಾಪಕರು ಅರಿತುಕೊಳ್ಳಬೇಕು.
ಇತ್ತೀಚೆಗೆ ಕನ್ನಡ ವಾಕ್ಚಿತ್ರ ಆರಂಭವಾಗಿ 92 ವರ್ಷಗಳು ಪೂರೈಸಿ 93ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘವು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿದವು. ನಿರ್ಮಾಪಕರ ಸಂಘದ ಸಮಾರಂಭದಲ್ಲಂತೂ ನಿರ್ಮಾಪಕರೇ ವೇದಿಕೆ ಹತ್ತಿ ಹಾಡಿ, ಕುಣಿದು ಮಾಡಿದರು. ಸಂಭ್ರಮ ಪಡುವುದಕ್ಕೆ ಅಭ್ಯಂತರವಿಲ್ಲ. ಅದಕ್ಕೂ ಮಿಗಿಲಾಗಿ ಎರಡೂ ಸಂಘಗಳಿರುವ ಜವಾಬ್ದಾರಿಯನ್ನು ಅವು ಅರಿತುಕೊಳ್ಳಬೇಕು. ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವ ನಿರ್ಮಾಪಕರಿಗೆ ಜಾಗೃತಿಯ ಅವಶ್ಯಕತೆ ಇದೆ. ಮೊದಲಿಗೆ ಪ್ರಚಾರದ ಹೆಸರಿನಲ್ಲಿ ದುಡ್ಡು ಕೀಳುತ್ತಿರುವ ಮಧ್ಯವರ್ತಿಗಳನ್ನು, ಬೇಡದ್ದನ್ನು ಬಿಂಬಿಸುತ್ತಿರುವ ಸೋಷಿಯಲ್ ಮೀಡಿಯಾದವರನ್ನು ಗುರುತಿಸಿ ದೂರ ಇಡುವುದರ ಜೊತೆಗೆ, ಪ್ರಚಾರದ ಹೆಸರಿನಲ್ಲಿ ದೊಡ್ಡ ನಷ್ಟ ಮಾಡಿಕೊಳ‍್ಳುತ್ತಿರುವ ನಿರ್ಮಾಪಕರಿಗೆ ನಿಜಸ್ಥಿತಿಯನ್ನು ಅರ್ಥ ಮಾಡಿಸುವ ಅವಶ್ಯಕತೆ ಇದೆ. ಮಾತಿಗೆ ಮೊದಲು ‘ನಿರ್ಮಾಪಕರು ಅನ್ನದಾತರು …’ ಎಂದು ಹೇಳುವ, ಅವರನ್ನು ಉದ್ಧರಿಸಬೇಕೆನ್ನುವ ಮಂಡಳಿ ಮತ್ತು ಸಂಘ, ನಿರ್ಮಾಪಕರನ್ನು ಉಳಿಸುವ ಕೆಲಸ ಮಾಡಿದರೆ, ಬೇರೇನಲ್ಲದಿದ್ದರೂ ನಿರ್ಮಾಪಕರಿಗೆ ಆಗುತ್ತಿರುವ ನಷ್ಟದ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು.
‘ಟಾಕ್ಸಿಕ್’ ಬಿಡುಗಡೆ ಮುಂದಕ್ಕೆ; ಮಾರ್ಚ್ 19ರ ಬದಲು ಜೂನ್ 04ಕ್ಕೆ ಬಿಡುಗಡೆ


