ಚಿತ್ರ ವಿಮರ್ಶೆ: ಹಲವು ತಿರುವುಗಳೊಂದಿಗೆ ಕಾಡುವ ‘ಸೀತಾರಾಮ್‍’

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಸೆಕೆಂಡ್‍ ಕೇಸ್‍ ಆಫ್‍ ಸೀತಾರಾಮ್‍

ನಿರ್ಮಾಣ: ದೇವಿಪ್ರಸಾದ್‍ ಶೆಟ್ಟಿ ಮತ್ತು ಸಾತ್ವಿಕ್‍ ಹೆಬ್ಬಾರ್

ನಿರ್ದೇಶನ: ದೇವಿಪ್ರಸಾದ್‍ ಶೆಟ್ಟಿ

ತಾರಾಗಣ: ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಸಾಗರ ಪುರಾಣಿಕ್‍ ಮುಂತಾದವರು

‘ಈ ಕಥೆಗೆ ಇನ್ನೂ ಒಂದು ಮುಖವಿದೆ …’

ಅಂತ ಚಿತ್ರ ಮುಗಿಯುವ 20 ನಿಮಿಷಗಳ ಮುಂಚೆ ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತದೆ. ಅಲ್ಲಿಗೆ ಇದುವರೆಗೂ ಆಗಿದ್ದು ಒಂದು ಹಂತವಾದರೆ, ಮುಂದೆ ಆಗೋದು ಇನ್ನೊಂದು ಹಂತ ಎಂಬುದು ಅರಿವಿಗೆ ಬರುತ್ತದೆ. ಕೊಲೆಗಾರರೆಂದುಕೊಂಡು ಇಬ್ಬರನ್ನು ಸೀತಾರಾಮ್‍ ಅರೆಸ್ಟ್ ಮಾಡಿದರೂ, ನಿಜವಾದ ಕೊಲೆಗಾರ ಹೊರಗೆ ಓಡಾಡಿಕೊಂಡಿದ್ದಾನೆ ಎಂಬುದು ಬೆಳಕಿಗೆ ಬರುತ್ತದೆ. ಹಾಗಾದರೆ, ಕೊಲೆ ಮಾಡಿದ್ದು ಯಾರು ಮತ್ತು ಯಾತಕ್ಕೆ?

ಇಂಥದ್ದೊಂದು ಹೊಸ ತಿರುವಿನೊಂದಿಗೆ ಮತ್ತೆ ಪ್ರೇಕ್ಷಕರನ್ನು ಬಡಿದೆಬ್ಬಿಸುತ್ತಾರೆ ನಿರ್ದೇಶಕ ದೇವಿಪ್ರಸಾದ್‍ ಶೆಟ್ಟಿ. ಇದಕ್ಕೂ ಮೊದಲು ‘ಸೀತಾರಾಮ್‍ ಬಿನಾಯ್‍’ ಮತ್ತು ‘ಕೇಸ್‍ ಆಫ್‍ ಕೊಂಡಾನ’ ಎಂಬ ತನಿಖಾ ಥ್ರಿಲ್ಲರ್‍ಗಳ ಮೂಲಕ ಪತ್ತೇದಾರಿ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದಿದ್ದ ಶೆಟ್ಟಿ, ‘ಸೆಕೆಂಡ್‍ ಕೇಸ್‍ ಆಫ್‍ ಸೀತಾರಾಮ್‍’ ಮೂಲಕ ಅದನ್ನು ಇನ್ನಷ್ಟು ಮುಂದುವರೆಸಿದ್ದಾರೆ. ಚಿತ್ರವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ.

ಆನೆಗದ್ದೆ ಪೊಲೀಸ್‍ ಠಾಣೆಯ ಸುತ್ತ ಜನ ನಿಗೂಢವಾಗಿ ಕಣ್ಮರೆಯಾಗುತ್ತಿರುತ್ತಾರೆ. ಎರಡ್ಮೂರು ದಿನಗಳ ನಂತರ ಕಾಡಿನಲ್ಲಿ ಅವರು ಹೆಣವಾಗಿ ಪತ್ತೆಯಾಗುತ್ತಿರುತ್ತಾರೆ. ಅದು ಸಾಮಾನ್ಯ ಸಾವಲ್ಲ. ಚಿತ್ರಹಿಂಸೆ ಅನುಭವಿಸಿ ಸತ್ತಿರುತ್ತಾರೆ. ಕೊಲೆ ಮಾಡಿದವನು ಸಾಮಾನ್ಯ ಮನುಷ್ಯ ಅಲ್ಲ, ಅವನೊಬ್ಬ ಸೈಕೋಪಾತ್‍ ಎಂದು ಪೋಸ್ಟ್ ಮಾರ್ಟಮ್‍ ಮಾಡಿದ ವೈದ್ಯರು ಹೇಳುತ್ತಾರೆ. ಆ ಕೊಲೆಗಳನ್ನು ಮಾಡುತ್ತಿರುವುದು ಯಾರು ಮತ್ತು ಯಾಕೆ? ಈ ಪ್ರಶ್ನೆ ಸೀತಾರಾಮ್‍ ಮತ್ತು ಪೊಲೀಸ್‍ ಇಲಾಖೆಗೆ ತಲೆ ನೋವಾಗಿ ಪರಿಣಮಿಸುತ್ತದೆ. ಕೊಲೆ ಮಾಡುತ್ತಿರುವವನು ಜನರ ಮಧ್ಯೆಯೇ ಯಾರಿಗೂ ಗೊತ್ತಾಗದಂತೆ ಬದುಕುತ್ತಿದ್ದಾನೆ. ಅವನು ಯಾರು? ಅವನನ್ನು ಹುಡುಕುವುದು ಹೇಗೆ? ಅದೇ ‘ಸೆಕೆಂಡ್‍ ಕೇಸ್‍ ಆಫ್‍ ಸೀತಾರಾಮ್‍’.

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಕ್ರೈಮ್‍ ಮತ್ತು ತನಿಖಾ ಥ್ರಿಲ್ಲರ್‍ಗಳು ಬರುತ್ತಿವೆ. ನಿರ್ದೇಶಕರದ್ದೂ ಇದು ಅದೇ ಶೈಲಿಯಲ್ಲಿ ಮೂರನೆಯ ಚಿತ್ರ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ‘ಸೆಕೆಂಡ್‍ ಕೇಸ್‍ ಆಫ್‍ ಸೀತಾರಾಮ್‍’ ಇನ್ನಷ್ಟು ಥ್ರಿಲ್ಲಿಂಗ್‍ ಆಗಿದೆ. ಕೊಲೆಗಾರ ಸಿಕ್ಕ ಎಂದು ಸೀತಾರಾಮ್‍ ಸೇರಿದಂತೆ ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಿದ್ದಂತೆ. ಅದು ಇನ್ನೊಂದು ಘಟನೆಗೆ ತಿರುವು ನೀಡುತ್ತ ಹೋಗುತ್ತದೆ. ಹೀಗೆ ಹಲವು ತಿರುವುಗಳೊಂದಿಗೆ ಚಿತ್ರವನ್ನು ಇನ್ನಷ್ಟು ಇಂಟೆನ್ಸ್ ಆಗಿ ಮಾಡಿದ್ದಾರೆ ದೇವಿಪ್ರಸಾದ್‍ ಶೆಟ್ಟಿ. ಒಂದು ತನಿಖಾ ಥ್ರಿಲ್ಲರ್‍ಗೆ ಬೇಕಾದ ಬಿಲ್ಡಪ್‍ಗಳ ಬಗ್ಗೆ ಅವರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ಮಾಸ್‍ ಅಂಶಗಳಿಲ್ಲದೆ, ಅಬ್ಬರವಿಲ್ಲದೆಯೇ, ತಣ್ಣಗೆ ಇಡೀ ಚಿತ್ರವನ್ನು ಅವರು ನಿರೂಪಿಸುತ್ತಾ ಹೋಗುತ್ತಾರೆ.

ಬರೀ ನಿರೂಪಣೆಯಷ್ಟೇ ಅಲ್ಲ, ಹಿನ್ನೆಲೆ ಸಂಗೀತ, ಸಂಕಲನ ಮತ್ತು ಎಲ್ಲರ ಅಭಿನಯವೂ ಅದಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಇಲ್ಲಿ ಬರೀ ಕೊಲೆಗಳಷ್ಟೇ ಅಲ್ಲ, ಚಿತ್ರದಲ್ಲಿ ಭಾವನಾತ್ಮಕ ವಿಷಯವೂ ಇದೆ. ಹಲವು ಪದರಗಳಿವೆ. ಕೆಲವು ಫ್ಲಾಶ್‍ಬ್ಯಾಕ್‍ಗಳಿವೆ. ಅವೆಲ್ಲವನ್ನೂ ಒಟ್ಟಿಗೇ ಸೇರಿಸುತ್ತಾ, ಸೀಟಿನ ಅಂಚಿಗೆ ತಂದು ಚಿತ್ರ ನೋಡಿಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಇದರಲ್ಲಿ ದೇವಿಪ್ರಸಾದ್‍ ಗೆದ್ದಿದ್ದಾರೆ. ಆದರೆ, ಕ್ಲೈಮ್ಯಾಕ್ಸ್ ಬರವಣಿಗೆಯಲ್ಲಿ ಅವರು ಇನ್ನಷ್ಟು ತಾಳ್ಮೆಯಿಂದ ಕೆಲಸ ಮಾಡಬಹುದಿತ್ತು ಎಂದನಿಸುವುದೂ ಇದೆ. ಚಿತ್ರವನ್ನು ಇನ್ನಷ್ಟು ತಾರ್ಕಿಕವಾಗಿ ಗಟ್ಟಿಗೊಳಿಸುವ ಪ್ರಯತ್ನ ಮಾಡಬಹುದಿತ್ತು. ಇಷ್ಟೆಲ್ಲಾ ಆಗಿದ್ದು ಇದಕ್ಕೋಸ್ಕರವಾ? ಎಂಬ ಪ್ರಶ್ನೆ ಮೂಡುವುದು ಸಹಜ. ಆ ನಿಟ್ಟಿನಲ್ಲಿ ಅವರು ಸಮಂಜಸ ಉತ್ತರ ಹುಡುಕಬಹುದಿತ್ತು. ಆದರೆ, ಅಲ್ಲಿಯವರೆಗೂ ಅವರು ಪ್ರೇಕ್ಷಕರನ್ನು ಆ ಪರಿ ಹಲವು ತಿರುವುಗಳೊಂದಿಗೆ ಮತ್ತು ರೋಚಕ ವಿಷಯಗಳೊಂದಿಗೆ ಹಿಡಿದಿಟ್ಟಿರುವುದಕ್ಕೆ ಸಾಕು.

ಚಿತ್ರದ ಹೈಲೈಟ್‍ ಎಂದರೆ ಅದು ವಿಜಯ್‍ ರಾಘವೇಂದ್ರ. ಇಡೀ ಚಿತ್ರವನ್ನು ಅವರು ಆವರಿಸಿಕೊಂಡಿದ್ದಾರೆ. ಹಲವು ಸಮಸ್ಯೆ ಮತ್ತು ಒತ್ತಡಗಳ ನಡುವೆ ಸರಣಿ ಕೊಲೆಗಳನ್ನು ಅವರು ಬಿಡಿಸುವ ರೀತಿ ಖುಷಿಕೊಡುತ್ತದೆ. ಇಲ್ಲಿ ಅವರು ಅಭಿನಯ ಎನ್ನುವುದಕ್ಕಿಂತ ಪಾತ್ರವನ್ನು ಜೀವಿಸಿದ್ದಾರೆ. ಇಡೀ ಪ್ರಕರಣವನ್ನು ಅವರು ತಲೆಯಲ್ಲೇ ಬಿಡಿಸುತ್ತಾ ಹೋಗುವುದನ್ನು ನೋಡುವುದು ಖುಷಿಕೊಡುತ್ತದೆ. ಅವರ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಅವರಂತಹ ನುರಿತ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೊತೆಗೆ ಸಾಕಷ್ಟು ಹೊಸಬರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯರನ್ನೇ ಬಳಸಿಕೊಳ್ಳಲಾಗಿದೆ. ಒಟ್ಟಾರೆ, ಅವರೆಲ್ಲಾ ಕಥೆಗೆ ಪೂರಕವಾಗಿ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ವೀಣೆ ಪ್ರಮುಖ ಪಾತ್ರವಹಿಸುತ್ತದೆ. ಅದನ್ನೇ ಹಿನ್ನೆಲೆ ಸಂಗೀತಕ್ಕೆ ನವನೀತ್‍ ಶ್ಯಾಮ್‍ ಬಳಸಿಕೊಂಡಿದ್ದಾರೆ. ಕ್ರೈಮ್‍ ಥ್ರಿಲ್ಲರ್‍ ಒಂದಕ್ಕೆ ಹಿನ್ನೆಲೆಯಾಗಿ ವೀಣೆ ಬಳಸಿಕೊಂಡಿರುವುದು ವಿಶೇಷ. ಯಾವುದೇ ಆರ್ಭಟವಿಲ್ಲದೆ, ತಣ್ಣಗೆ ಚಿತ್ರದ ಗಂಭೀರತೆಯನ್ನು ಹಿನ್ನೆಲೆ ಸಂಗೀತ ಹಿಗ್ಗಿಸಿದೆ. ಹೇಮಂತ್‍ ಆಚಾರ್ಯ ಇಡೀ ಪರಿಸರವರನ್ನು ಕಾಡುವಂತೆ ಬಳಸಿಕೊಂಡಿದ್ದಾರೆ.

ಕ್ರೈಮ್‍ ಮತ್ತು ತನಿಖಾ ಥ್ರಿಲ್ಲರ್‍ಗಳನ್ನು ನೋಡುವವರಿಗೆ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್‍’ ನಿರಾಸೆಗೊಳಿಸುವುದಿಲ್ಲ.

 

‘ಲೂಸ್‍ ಮಾದ’ನ 50ನೇ ಚಿತ್ರದ ಶೀರ್ಷಿಕೆ ಅನಾವರಣ; ಯೋಗಿ ಈಗ ‘ಕಿಂಗ್’

Latest Posts

Discover more from KannadaScreens

Subscribe now to keep reading and get access to the full archive.

Continue reading