‘ಲೂಸ್ ಮಾದ’ ಯೋಗಿ ಚಿತ್ರರಂಗಕ್ಕೆ ಬಂದು 19 ವರ್ಷಗಳಾಗಿವೆ. 2007ರಲ್ಲಿ ಬಿಡುಗಡೆಯಾದ ‘ದುನಿಯಾ’ ಚಿತ್ರದ ‘ಲೂಸ್ ಮಾದ’ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯೋಗಿ, ಇದೀಗ 49 ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಅವರ 50ನೇ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಅಂದಹಾಗೆ, ಈ ಚಿತ್ರದ ಹೆಸರು ‘ಕಿಂಗ್’.
ಇತ್ತೀಚೆಗೆ ಎ.ಎಂ.ಬಿ ಕಪಲಿ ಸಿನಿಮಾಸ್‍ನಲ್ಲಿ ನಡೆದ ಸಮಾರಂಭದಲ್ಲಿ ಯೋಗಿ ನಟನೆಯ 50ನೇ ಚಿತ್ರ ‘ಕಿಂಗ್’ ಶೀರ್ಷಿಕೆಯನ್ನು ಶಿವರಾಜಕುಮಾರ್ ಅನಾವರಣ ಮಾಡಿದರು. ಚಿತ್ರವನ್ನು ಜಾಕ್ ನಿರ್ದೇಶನ ಮಾಡುತ್ತಿದ್ದು, ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್, ವಿಶಾಲ್ ಪ್ರಸಾದ್, ಮಲ್ಲಿಕಾರ್ಜುನ ಸ್ವಾಮಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
‘ಕಿಂಗ್’ ಚಿತ್ರದ ಟೀಸರ್ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿದ್ದು. ಮುಂದಿನ ಒಂದು ತಿಂಗಳಲ್ಲಿ ಚಿತ್ರೀಕರಣಕ್ಕೆ ತೆರಳಲು ಚಿತ್ರತಂಡ ಸಜ್ಜಾಗಿದೆ. ಯೋಗಿ ಹಿಂದೆಂದೂ ಕಾಣದ ರೀತಿಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಶೀರ್ಷಿಕೆ ಅನಾವರಣ ಮಾಡಿ ಮಾತನಾಡಿದ ಶಿವಣ್ಣ, ‘ಕಪಾಲಿ ಚಿತ್ರಮಂದಿರದಲ್ಲಿ ‘ಓಂ’ ಚಿತ್ರ ಹೊಸ ದಾಖಲೆ ಬರೆದಿತ್ತು. ಇಲ್ಲಿ ಬಿಡುಗಡೆಯಾದ ‘ಜೋಗಿ’ ಸೇರಿದಂತೆ ಹಲವು ಚಿತ್ರಗಳು ಯಶಸ್ಸು ಕಂಡಿವೆ. ಯೋಗಿಯ ‘ನಂದ ಲವ್ಸ್ ನಂದಿತಾ’ ಚಿತ್ರ ಇದೇ ಚಿತ್ರಮಂದಿರದಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಹಾಗಾಗಿ, ಕಪಾಲಿ ಚಿತ್ರಮಂದಿರದ ಬಗ್ಗೆ ಅವರಿಗೆ ವಿಶೇಷ ಅಭಿಮಾನವಿದೆ. ಈಗ ಹೊಸ ರೂಪದಲ್ಲಿ ಸಜ್ಜುಗೊಂಡಿರುವುದು ಸಂತಸದ ಸಂಗತಿ. ಯೋಗಿ ನಟನೆಗೆ ನಾನು ದೊಡ್ಡ ಅಭಿಮಾನಿ. ಅಪ್ಪು ಜೊತೆ ‘ಹುಡುಗರು’ ಚಿತ್ರದಲ್ಲಿ ನಟಿಸಿದ್ದರು. ಜೊತೆಗೆ ನನ್ನ ಜೊತೆಯೂ ನಟಿಸುತ್ತಿದ್ದಾರೆ. ಅವರೊಬ್ಬ ಒಳ್ಳೆಯ ನಟ. ಅವರಿಗೆ ಒಳ್ಳೆಯದಾಗಬೇಕು’ ಎಂದು ಮನದುಂಬಿ ಹಾರೈಸಿದರು.
ಯೋಗಿ ಮಾತನಾಡಿ, ‘ಇದುವರೆಗೂ ಒಂದು ಲೆಕ್ಕ. ಇನ್ಮುಂದೆ ಮತ್ತೊಂದು ಲೆಕ್ಕ. ತಪ್ಪುಗಳನ್ನು ಸರಿ ಪಡಿಸಿಕೊಂಡಿದ್ದೇನೆ. ‘ಕಿಂಗ್‘ ನನ್ನ ವೃತ್ತಿ ಜೀವನದ 50ನೇ ಚಿತ್ರ. ಸಿನಿಮಾದಲ್ಲಿ ಬೇರೆ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಿರ್ದೇಶಕ ಜಾಕ್ ಕಥೆ ಹೇಳಿದಾಗ ಥ್ರಿಲ್ ಆದೆ. ಬಜೆಟ್ ಕೇಳಿ ಒಂದು ಕ್ಷಣ ಹೌರಾರಿದೆ. ಎಲ್ಲರಿಗೂ ಇಷ್ಟವಾಗುವ ಸಿನಿಮಾ ನೀಡುತ್ತೇವೆ’ ಎಂಬ ಭರವಸೆ ಇದೆ’ ಎಂದರು.
ಚಿಕ್ಕ ವಯಸ್ಸಿನಲ್ಲಿಯೇ ನಾಯಕನಾದೆ ಎಂದು ನೆನಪಿಸಿಕೊಂಡ ಯೋಗಿ, ‘ಸೋಲು-ಗೆಲುವು ಎಲ್ಲವನ್ನೂ ಕಂಡೆ. ಮತ್ತೆ ಪುಟಿದೇಳಲು ಸಿದ್ದನಾಗಿದ್ದೇನೆ. ಅದಕ್ಕೆ ‘ಕಿಂಗ್’ ಚಿತ್ರ ಪೂರಕವಾಗಲಿದೆ. ಮೊದಲು ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡೋಣ ಅಂತ ನಿರ್ಧರಿಸಿದ್ದೆವು. ಆನಂತರ ತೆಲುಗು, ತಮಿಳಿನಲ್ಲಿಯೂ ಚಿತ್ರ ಮೂಡಿಬರಲಿದೆ. ಇನ್ನು ಮುಂದೆ ಹೊಸ ಹೊಸ ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಜಾಕ್ ಮಾತನಾಡಿ, ‘ಕಥೆ ಮಾಡಿಕೊಳ್ಳುವಾಗಲೇ ನಟ ಯೋಗಿ ನಟಿಸಿದ್ದರೆ ಚೆನ್ನ ಎಂದು ಅವರಿಗೆ ಕಥೆ ಹೇಳಿ ಸಿನಿಮಾ ಮಾಡುತ್ತಿದ್ದೇನೆ. ದೊಡ್ಡ ಬಜೆಟ್ ಸಿನಿಮಾ ಇದು. ಕನ್ನಡ, ತಮಿಳು ನೇಟೀವಿಟಿ ಅನ್ನುವುದಕ್ಕಿಂತ ಇಂಡಿಯನ್ ಸಿನಿಮಾ ಮಾಡುತ್ತೇವೆ. ಚಿತ್ರದಲ್ಲಿ ಬಾಲಿವುಡ್ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಯ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ’ ಎಂದರು.
‘ಕಿಂಗ್’ ಚಿತ್ರಕ್ಕೆ ಮಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಪ್ರತಾಪ್ ನಾರಾಯಣ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸುತ್ತಿದ್ದಾರೆ.


