ಚಿತ್ರ ವಿಮರ್ಶೆ: ಸುಬ್ಬರಾವ್‍ ದಾಂಪತ್ಯದ ಸರಳ ಚಿತ್ರಣ

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಸರಳಾ ಸುಬ್ಬರಾವ್‍

ನಿರ್ಮಾಣ: ಲೋಹಿತ್‍ ನಂಜುಂಡಯ್ಯ

ನಿರ್ದೇಶನ: ಮಂಜು ಸ್ವರಾಜ್‍

ತಾರಾಗಣ: ಅಜೇಯ್‍ ರಾವ್, ರಂಗಾಯಣ ರಘು, ವೀಣಾ ಸುಂದರ್‍, ಚಿತ್ಕಲಾ ಬಿರಾದಾರ್‍, ವಿಜಯ್‍ ಚೆಂಡೂರ್‍, ರಾಮಕೃಷ್ಣ ಮುಂತಾದವರು

 ಕಥೆ-ಕಾದಂಬರಿಗಳನ್ನಾಧರಿಸಿದ ಚಿತ್ರಗಳು ಕಡಿಮೆಯಾಗುತ್ತಿವೆ ಎನ್ನುವ ಕಾಲದಲ್ಲಿ ತ್ರಿವೇಣಿ ಅವರು 50 ವರ್ಷಗಳ ಹಿಂದೆ ಬರೆದ ‘ವಸಂತ ಗಾನ’ ಕಾದಂಬರಿಯನ್ನು, ಅದೇ ಕಾಲಘಟ್ಟದಲ್ಲಿ ನಿರೂಪಿಸಿದ್ದಾರೆ ನಿರ್ದೇಶಕ ಮಂಜು ಸ್ವರಾಜ್‍.

‘ಸರಳ ಸುಬ್ಬರಾವ್‍’ ಎಂಬ ಹೆಸರೇ ಹೇಳುವಂತೆ ಇದು ಸರಳ ಮತ್ತು ಸುಬ್ಬರಾವ್‍ ಎಂಬ ಎರಡು ಪಾತ್ರಗಳ ಸುತ್ತ ಸುತ್ತುತ್ತದೆ. ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಗ್ಲೀಷ್‍ ಪ್ರೊಫೆಸರ್‍ ಆಗಿ ಕೆಲಸ ಮಾಡುವ ಸುಬ್ಬರಾವ್‍ (ಅಜೇಯ್‍ ರಾವ್‍)ಗೆ ಸರಳ (ಮಿಶಾ ನಾರಂಗ್‍) ಎಂಬ ಸರಳ ಮತ್ತು ಸುಂದರ ಯುವತಿಯೊಂದಿಗೆ ಪ್ರೀತಿಯಾಗುತ್ತದೆ. ಈ ಪ್ರೀತಿ ಮದುವೆಗೆ ತಿರುಗಿ, ಸರಳಾ ಬಸುರಿಯಾಗಿ, ಈ ದಂಪತಿಗೆ ಒಂದು ಮಗುವಾಗುವ ಮೂಲಕ ಚಿತ್ರ ಅಂತ್ಯವಾಗುತ್ತದೆ. ಇದನ್ನು 1971ರ ಭಾರತ ಮತ್ತು ಪಾಕ್‍ ಯುದ್ಧದ ಹಿನ್ನೆಲೆಯಲ್ಲಿ ಹೇಳಲಾಗಿದೆ.

‘ಸರಳ ಸುಬ್ಬರಾವ್‍’ ಹೆಚ್ಚು ಡ್ರಾಮಾ ಇಲ್ಲದ, ತಿರುವುಗಳಿಲ್ಲದ ಒಂದು ಸರಳ ಚಿತ್ರ. ಬಹುಶಃ ಐದು ದಶಕಗಳ ಹಿಂದೆಯೇ ಚಿತ್ರ ಬಂದಿದ್ದರೆ, ಆಗಿನ ವೇಗ ಮತ್ತು ಮನಸ್ಥಿತಿಗೆ ಹೆಚ್ಚು ಒಪ್ಪುತ್ತಿತ್ತು. ಆದರೆ, ಪ್ರೇಕ್ಷಕರ ಈಗಿನ ಬದಲಾದ ಮನಸ್ಥಿತಿಗೆ ಅವರು ಚಿತ್ರವನ್ನು ಹೇಗೆ ಒಪ್ಪುತ್ತಾರೆ ಎಂಬ ಕುತೂಹಲ ಇದೆ. ಚಿತ್ರದಲ್ಲಿ ಇರುವುದು ಒಂದು ತಿರುವು. ಮಿಕ್ಕಂತೆ ಯಾವುದೇ ಡ್ರಾಮಾ ಇಲ್ಲದೆ, ಚಿತ್ರ ಸರಳವಾಗಿ ಆರಂಭದಿಂದ ಕೊನೆಯವರೆಗೂ ನಿಧಾನವಾಗಿ ಸಾಗುತ್ತಾ ಹೋಗುತ್ತದೆ. ಒಂದು ಕಾದಂಬರಿಯನ್ನೇ ಓದಿದ ಅನುಭವ ಚಿತ್ರ ನೀಡುತ್ತದೆ.

ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ, ಮುಖ್ಯವಾಗಿ ಕಾಣುವುದು ಸರಳ ಮತ್ತು ಸುಬ್ಬರಾವ್‍ ಪಾತ್ರಗಳೇ. ಆ ಎರಡು ಪಾತ್ರಗಳ ಒಡನಾಟ ಮತ್ತು ತುಂಟಾಟವನ್ನು ತೆರೆಯ ಮೇಲೆ ಮೂಡಿಸುವ ಪ್ರಯತ್ನವನ್ನು ಮಂಜು ಸ್ವರಾಜ್‍ ಮಾಡಿದ್ದಾರೆ. ಇಲ್ಲಿ ನೃತ್ಯ, ಫೈಟು, ಬಿಲ್ಡಪ್‍ ಯಾವುದೂ ಇಲ್ಲ. ಹಾಸ್ಯವೂ ಮನರಂಜಿಸುವುದು ಕಷ್ಟವೇ. ಹಾಗಂತ ಮಂಜು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಮೂಲ ಆಶಯಕ್ಕೆ ಎಷ್ಟು ಪ್ರಾಮಾಣಿಕವಾಗಿರಬೇಕೋ, ಅಷ್ಟು ಪ್ರಾಮಾಣಿಕವಾಗಿ ಚಿತ್ರವನ್ನು ಕಟ್ಟುತ್ತಾ ಹೋಗಿದ್ದಾರೆ.

ಚಿತ್ರದಲ್ಲಿ ಗಮನಸೆಳೆಯುವುದು ಮಿಶಾ ನಾರಂಗ್‍. ಭಾಷೆ ಗೊತ್ತಿಲ್ಲದಿದ್ದರೂ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಮಿಶಾ. ಈ ಮೂಲಕ ಪ್ರತಿಭೆಗೆ ಭಾಷೆಯ ಹಂಗಿಲ್ಲ ಎಂದು ತೋರಿಸಿದ್ದಾರೆ. ಸರಳ ಪಾತ್ರದ ಆಶಯಕ್ಕೆ ಚ್ಯುತಿ ಬರದಂತೆ, ಭಾವನೆಗಳನ್ನು ಅರ್ಥ ಮಾಡಿಕೊಂಡು ಲವಲವಿಕೆಯಿಂದ ಅವರು ನಟಿಸಿದ್ದಾರೆ. ಮಿಶಾ ಎದುರು ಅಜೇಯ್‍ ರಾವ್‍ ಸ್ವಲ್ಪ ಸಪ್ಪೆ ಎಂದನಿಸಿದರೆ ಆಶ್ಚರ್ಯವಿಲ್ಲ. ಆದರೂ ಅಜೇಯ್‍ ತಮ್ಮ ಕೆಲಸವನ್ನು ಮಾಡಿದ್ದಾರೆ. ರಂಗಾಯಣ ರಘು ಮತ್ತು ವೀಣಾ ಸುಂದರ್‍ ತೆರೆಯ ಮೇಲೆ ಸ್ವಲ್ಪ ಹೊತ್ತು ಕಾಣಿಸಿಕೊಂಡರೂ ಇಷ್ಟವಾಗುತ್ತಾರೆ. ಗರ್ಭದಲ್ಲಿ ಮಗುವಿನ ಬೆಳವಣಿಗೆಯನ್ನು ವಿವರಿಸುವ ಬಯಾಲಜಿ ಪ್ರೊಫೆಸರ್‍ ಆಗಿ ಹಿರಿಯ ನಟ ರಾಮಕೃಷ್ಣ ಆಪ್ತರಾಗುತ್ತಾರೆ. ರಾಘು ರಾಮನಕೊಪ್ಪ ಮತ್ತು ವಿಜಯ್‍ ಚೆಂಡೂರ್‍ ಹಾಸ್ಯ ವರ್ಕೌಟ್‍ ಆಗಿಲ್ಲ ಎಂಬುದನ್ನು ಸತ್ಯ. ಅಜನೀಶ್‍ ಹಾಡುಗಳು, ಪ್ರದೀಪ್‍ ಛಾಯಾಗ್ರಹಣ ಚಿತ್ರದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಹೆಚ್ಚು ಅಬ್ಬರ, ಆಡಂಬರಗಳನ್ನು ಇಷ್ಟಪಡದ, ಸರಳ ಚಿತ್ರಗಳನ್ನು ಇಷ್ಟಪಡುವವರು ‘ಸರಳ ಸುಬ್ಬರಾವ್‍’ ನೋಡಬಹುದು.

‘ಆಲ್ಪಾ’ ಚಿತ್ರ ವಿಮರ್ಶೆ – ಪ್ರತೀಕಾರಕ್ಕೆ ಹಲವು ಮುಖಗಳು

Latest Posts

Discover more from KannadaScreens

Subscribe now to keep reading and get access to the full archive.

Continue reading