‘ಆಲ್ಪಾ’ ಚಿತ್ರ ವಿಮರ್ಶೆ – ಪ್ರತೀಕಾರಕ್ಕೆ ಹಲವು ಮುಖಗಳು

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಆಲ್ಫಾ

ನಿರ್ಮಾಣ: ಆನಂದ್ ಕುಮಾರ್

ನಿರ್ದೇಶನ: ವಿಜಯ್‍ ನಾಗೇಂದ್ರ

ತಾರಾಗಣ: ಹೇಮಂತ್‍ ಕುಮಾರ್, ಆಯನ, ಅಚ್ಯುತ್‍ ಕುಮಾರ್‍, ಅವಿನಾಶ್‍, ರಮೇಶ್‍ ಇಂದಿರಾ, ಬಾಲು ನಾಗೇಂದ್ರ, ಕಾರ್ತಿಕ್‍ ಮಹೇಶ್‍ ಮುಂತಾದವರು

ಅಪ್ಪನಿಗೆ ಮಗ ಸಹ ತನ್ನಂತೆಯೇ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ. ಮಗನಿಗೆ ತನ್ನ ಸ್ವಂತದ್ದೊಂದು ಸ್ಟಾರ್ಟ್‍ಅಪ್ ಶುರು ಮಾಡಬೇಕೆಂಬ ಆಸೆ. ಒಂದು ಕಡೆ ಅಪ್ಪ, ಮಗನನ್ನು ಪೊಲೀಸ್‍ ಮಾಡುವುದಕ್ಕೆ ತಯಾರಿ ನಡೆಸಿದ್ದರೆ, ಇನ್ನೊಂದು ಕಡೆ ಮಗ ಪ್ರೀತಿ ಮಾಡುತ್ತಾ, ದೊಡ್ಡ ಕನಸುಗಳನ್ನು ಕಾಣುತ್ತಾ ಓಡಾಡಿಕೊಂಡಿರುತ್ತಾನೆ. ಹೀಗಿರುವಾಗಲೇ, ಬೆಂಗಳೂರಿಗೆ ‘ಖಲೀಫಾ’ ಬರುತ್ತದೆ …

‘ಆಲ್ಫಾ’ ಚಿತ್ರದ ಟ್ರೇಲರ್‍ ನೋಡಿದರೆ, ಇದೊಂದು ಪಕ್ಕಾ ಮಾಸ್‍ ಚಿತ್ರ ಎಂದನಿಸಬಹುದು. ಆದರೆ, ಆಂತರ್ಯದಲ್ಲಿ ಇದೊಂದು ತಂದೆ-ಮಗನ ಬಾಂಧವ್ಯದ ಕಥೆ. ಹಾಗಂತ ಇದು ಮಗ ಅರ್ಜುನ್‍ (ಹೇಮಂತ್‍ ಕುಮಾರ್) ಪೊಲೀಸ್‍ ಅಧಿಕಾರಿಯಾಗಲಿ ಎಂದು ಆಸೆಪಡುವ ಶಕ್ತಿಪ್ರಸಾದ್ (ಅಚ್ಯುತ್‍ ಕುಮಾರ್) ಅವರ ಕಥೆ ಮಾತ್ರವಲ್ಲ, ಇಲ್ಲಿ ಇನ್ನೂ ಇಬ್ಬರು ತಂದೆ-ಮಕ್ಕಳ ಕಥೆ ಇದೆ. ಮಕ್ಕಳು ಪ್ರತೀಕಾರಕ್ಕೆ ನಿಂತರೆ, ಏನೆಲ್ಲಾ ಆಗುತ್ತದೆ ಎಂಬುದನ್ನು ವಿಜಯ್‍ ನಾಗೇಂದ್ರ ತಮ್ಮ ಮೂರನೆಯ ಚಿತ್ರದಲ್ಲಿ ವಿವರಿಸುತ್ತಾ ಹೋಗುತ್ತಾರೆ.

‘ಆಲ್ಫಾ’ ಚಿತ್ರಕ್ಕೆ ‘Men Love Vengeance’ ಎಂಬ ಟ್ಯಾಗ್‍ಲೈನ್‍ ಇದೆ. ಅಂದರೆ ಗಂಡಸರು ಪ್ರತೀಕಾರವನ್ನು ಇಷ್ಟಪಡುತ್ತಾರೆ ಎಂದರ್ಥ. ಇಡೀ ಕಥೆಯ ಹೂರಣ ಇರುವುದೇ ಇಲ್ಲಿ. ಅರ್ಜುನ್‍ ತನ್ನ ತಂದೆಗಾಗಿ ಪ್ರತೀಕಾರಕ್ಕೆ ಇಳಿದರೆ, ಇನ್ನುಳಿದ ಎರಡು ಕೇಸ್‍ಗಳಲ್ಲೂ ಪ್ರತೀಕಾರ ಪ್ರಮುಖ ಪಾತ್ರವಹಿಸುತ್ತದೆ. ಯಾರು, ಯಾತಕ್ಕಾಗಿ ಪ್ರತೀಕಾರಕ್ಕೆ ಇಳಿಯುತ್ತಾರೆ ಎಂದು ವಿವರಿಸಿದರೆ, ಮಜ ಇರುವುದಿಲ್ಲ. ಅದನ್ನು ಚಿತ್ರದಲ್ಲಿಯೇ ನೋಡಬೇಕು.

ಇಲ್ಲಿ ಪ್ರತೀಕಾರ ಎನ್ನುವುದು ಮೂರು ಕೇಸ್‍ಗಳಲ್ಲಿ ಬೇರೆಯದೇ ರೀತಿ ಪ್ರತಿಧ್ವನಿಸುತ್ತದೆ. ಒಂದು ಕಡೆ ನ್ಯಾಯ ಮತ್ತು ಪ್ರಾಮಾಣಿಕತೆಗಾಗಿ ಪ್ರತೀಕಾರ ಶುರುವಾದರೆ, ಇನ್ನೊಂದು ಕಡೆ ನೋವಿಗಾಗಿ, ಮತ್ತೊಂದು ಕಡೆ ಅಹಂಕಾರಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಹಾಗಾಗಿ, ಮೂರು ವಿಭಿನ್ನ ದೃಷ್ಟಿಕೋನದಲ್ಲಿ ಪ್ರತೀಕಾರವನ್ನು ಬಳಸಿಕೊಳ್ಳಲಾಗಿದೆ. ಮೂರು ವಿಭಿನ್ನ ಕಥೆ ಮತ್ತು ದೃಷ್ಟಿಕೋನವನ್ನು ಒಂದು ಚಿತ್ರದಲ್ಲಿ ತರುವುದು ಸುಲಭದ ವಿಷಯವಲ್ಲ. ಆ ನಿಟ್ಟಿನಲ್ಲಿ ವಿಜಯ್ ಬರವಣಿಗೆ ಗಮನಸೆಳೆಯುತ್ತದೆ. ಆದರೆ, ಅದನ್ನು ನಿರೂಪಿಸುವ ವಿಷಯದಲ್ಲಿ ಇನ್ನಷ್ಟು ಶ್ರಮ ಬೇಕಿತ್ತು.

ವಿಜಯ್‍ ನಾಗೇಂದ್ರ ಇಲ್ಲಿ ಹಲವು ಚುಕ್ಕಿಗಳನ್ನು ಜೋಡಿಸುತ್ತಾ ಹೋಗುತ್ತಾರೆ. ಕೊನೆಯಲ್ಲಿ ಚಿತ್ರ ಒಂದು ಸ್ಪಷ್ಟ ಆಕಾರ ಪಡೆಯುತ್ತದಾದರೂ, ಜೋಡಿಸುವ ಪ್ರಕ್ರಿಯೆಯಲ್ಲಿ ಅಲ್ಲಲ್ಲಿ ತಪ್ಪುಗಳಾಗಿವೆ. ಚಿತ್ರ ಆರಂಭದಲ್ಲಿ ಒಂದು ಒಳ್ಳೆಯ ಓಪನಿಂಗ್‍ ಪಡೆಯುತ್ತದೆ. ಹೀಗೆ ಶುರುವಾಗುವ ಚಿತ್ರ, ಕ್ರಮೇಣ ನಿಧಾನವಾಗುತ್ತಾ ಹೋಗುತ್ತದೆ. ಅದರಲ್ಲೂ ಅರ್ಜುನ್‍ ಮತ್ತು ಆಕಾಂಕ್ಷಾಳ ಪ್ರೇಮಕಥೆ ಚಿತ್ರವನ್ನು ಸಾಕಷ್ಟು ನಿಧಾನ ಮಾಡುತ್ತದೆ. ಮಧ್ಯದಲ್ಲಿ ಒಂದಿಷ್ಟು ತಿರುವುಗಳಿವೆಯಾದರೂ, ಚಿತ್ರಕ್ಕೊಂದು ವೇಗ ಸಿಗುವುದು ಕೊನೆಯ ಅರ್ಧ ಗಂಟೆಯಲ್ಲೇ. ಈ ನಿಟ್ಟಿನಲ್ಲಿ ಬರವಣಿಗೆ ವಿಷಯದಲ್ಲಿ ಇನ್ನಷ್ಟು ಗಟ್ಟಿಯಾಗಬಹುದಿತ್ತು. ಚಿತ್ರವನ್ನು ಇನ್ನಷ್ಟು ಚುರುಕಾಗಿಸಬಹುದಾಗಿತ್ತು.

ಈ ಚಿತ್ರದ ಮೂಲಕ ಹೇಮಂತ್‍ ಕುಮಾರ್‍ ಎಂಬ ಹೊಸ ನಾಯಕನನ್ನು ಪರಿಚಯಿಸಲಾಗಿದೆ. ನೃತ್ಯ, ಹೊಡೆದಾಟ ಎಲ್ಲದರಲ್ಲೂ ಗಮನಸೆಳೆಯುವ ಹೇಮಂತ್‍, ನಟನೆಯಲ್ಲಿ ಇನ್ನಷ್ಟು ಮಾಗಬೇಕು. ತೆರೆಯ ಮೇಲೆ ಕಟ್ಟುಮಸ್ತಾಗಿ ಕಾಣುವ ಅವರು ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. ಕಾರ್ತಿಕ್‍ ಮಹೇಶ್‍ ಇಲ್ಲಿ ಖಳನಾಯಕನಾಗುವ ಪ್ರಯತ್ನ ಮಾಡಿದ್ದಾರೆ. ಮಿಕ್ಕಂತೆ ಅಚ್ಯುತ್‍ ಕುಮಾರ್‍, ಅವಿನಾಶ್‍, ರಮೇಶ್‍ ಇಂದಿರಾ, ಬಾಲು ನಾಗೇಂದ್ರ, ರಾಘು ಶಿವಮೊಗ್ಗ, ಮಾನಸಿ ಸುಧೀರ್ ತಮ್ಮ ಪಾತ್ರಗಳನ್ನು ಹೆಚ್ಚು ಕಷ್ಟಗಳಿಲ್ಲದೆ ಸಲೀಸಾಗಿ ನಿರ್ವಹಿಸಿದ್ದಾರೆ. ಮಹಾಂತೇಶ್‍ ಅವರ ಪಾತ್ರ ಮತ್ತು ಕಾಮಿಡಿ ಚಿತ್ರವನ್ನು ಇನ್ನಷ್ಟು ಹಿಂದಕ್ಕೆ ಎಳೆಯುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ ಎಂಬುದನ್ನು ಬಿಟ್ಟರೆ, ಅವರ ಬಗ್ಗೆ ಹೆಚ್ಚೇನೂ ಹೇಳುವುದು ಕಷ್ಟ.

ತಾಂತ್ರಿಕವಾಗಿ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಕಾರ್ತಿಕ್‍ ಛಾಯಾಗ್ರಹಣ, ಅನೂಪ್‍ ಸೀಳಿನ್‍ ಸಂಗೀತ ಗಮನಸೆಳೆಯುತ್ತದೆ. ಹೊಡೆದಾಟದ ದೃಶ್ಯಗಳಿಗೆ ಪಿಟೀಲನ್ನು ಹಿನ್ನೆಲೆ ಸಂಗೀತವಾಗಿ ಬಳಸಿರುವ ಪ್ರಯೋಗ ಖುಷಿಕೊಡುತ್ತದೆ. ‘ದೇವರ ನೋಟಿಫಿಕೇಷನ್‍ ಎದುರು ನಮ್ಮ ಕ್ವಾಲಿಫಿಕೇಶನ್‍ ಏನೂ ಇಲ್ಲ …’, ‘ಜನವಿಲ್ಲದಿರೋ ಜಾಗ ಯಾವುದಾದರೂ ಇದ್ದರೆ ಅದು ಚಿತ್ರಮಂದಿರಗಳು …’, ‘ಲವ್‍ ಅಂದ್ರೆ ಟೈಮ್‍ ಇರಬೇಕು, ಲೈಫ್‍ ಅಂದ್ರೆ ದುಡ್ಡು ಇರಬೇಕು …’ ಎಂಬ ಮಾಸ್ತಿ ಉಪ್ಪಾರಳ್ಳಿ ಅವರ ಸಂಭಾಷಣೆಗಳು ಮೆಚ್ಚುಗೆ ಪಡೆಯುತ್ತವೆ.

ಚಿತ್ರ ವಿಮರ್ಶೆ: ಹಲವು ತಿರುವುಗಳೊಂದಿಗೆ ಕಾಡುವ ‘ಸೀತಾರಾಮ್‍’

Latest Posts

Discover more from KannadaScreens

Subscribe now to keep reading and get access to the full archive.

Continue reading