ಕನ್ನಡದ ಜನಪ್ರಿಯ ಕಥೆಗಾರರಲ್ಲಿ ಕೆ. ಸದಾಶಿವ ಸಹ ಒಬ್ಬರು. ‘ನಲ್ಲಿಯಲ್ಲಿ ನೀರು ಬಂತು’, ‘ರಾಮನ ಸವಾರಿ ಸಂತೆಗೆ ಹೋದದ್ದು’ ಮುಂತಾದ ಜನಪ್ರಿಯ ಕಥೆಗಳನ್ನು ಬರೆದ ಕೆ. ಸದಾಶಿವ ಅವರ ಕಥೆಯೊಂದು, ಇದೀಗ ಸಿನಿಮಾ ಆಗಿ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ. ಚಿತ್ರದ ಹೆಸರು ‘ಮತ್ತೆ ಮಳೆ ಹೊಯ್ಯುತ್ತಿದೆ’.
’ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರದ ಎರಡು ಹಾಡುಗಳ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಹಿರಿಯ ನಿರ್ದೇಶಕ ನಾಗಣ್ಣ ಹಾಡುಗಳನ್ನು ಬಿಡುಗಡೆ ಮಾಡಿದರು.
ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿರುವ ಗಂಗಾಧರ್, ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪತ್ನಿ ಸುಮ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೃತಿ ಅನಿಲ್‌ಕುಮಾರ್ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಪ್ರಾಧ್ಯಾಪಕರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪರಮ್ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದು, ‘ಕಬಡ್ಡಿ’ ನರೇಂದ್ರ ಬಾಬು ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ.
’ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರದಲ್ಲಿ ನಿರ್ಮಾಪಕರ ಮಗ ಜಿ. ಲಿಖಿತ್ ರಂಗಭೂಮಿ ಕಲಾವಿದ ಜಯವರ್ಧನ್ ನಾಯಕರಾಗಿ ಅಭಿನಯಿಸಿದರೆ, ನಾಯಕಿಯರಾಗಿ ಸುಲಕ್ಷ ಖೈರ, ಭೂಮಿಕಾ ಗೌಡ ನಟಿಸಿದ್ದಾರೆ. ಇವರೊಂದಿಗೆ ಚಂದ್ರಶೇಖರ ರೆಡ್ಡಿ, ಎ.ಎಂ. ಪ್ರಕಾಶ್‌ಮೂರ್ತಿ, ಕುಮಾರಿ ಸ್ವರ್ಣ, ಶೃತಿ, ದಿನಮಣಿ, ಕಾವ್ಯ ಕುಮಾರಿ ಮುಂತಾದವರು ಅಭಿನಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪರಮ್ ಗುಬ್ಬಿ, ‘ಸಾಹಿತಿ ಕೆ. ಸದಾಶಿವ ವಿರಚಿತ ಜನಪ್ರಿಯ ಸಣ್ಣಕತೆಗಳಲ್ಲಿ ಒಂದಾದ ’ಮತ್ತೆ ಮಳೆ ಹೂಯ್ಯುತಿದೆ’ ಕಥೆ ಈ ಚಿತ್ರದಲ್ಲಿದೆ. ಕೆ. ಸದಾಶಿವ ನಿಧನರಾಗಿಯೇ 50 ವರ್ಷಗಳಾಗಿವೆ. ಅವರಿಗೆ ನೀಡ ಬಹುದಾದ ಸಂಭಾವನೆ ಮೊತ್ತವನ್ನು ಸಾಹಿತ್ಯ ಪರಿಷತ್‌ನಲ್ಲಿ ದತ್ತಿಯಾಗಿ ನೀಡಿ, ಪ್ರತಿ ವರ್ಷ ಸದಾಶಿವ ಅವರ ಹೆಸರಿನಲ್ಲಿ ಯುವ ಬರಹಗಾರರಿಗೆ ಪ್ರಶಸ್ತಿ ನೀಡುವ ಯೋಜನೆ ಬಗ್ಗೆ ನಿರ್ಮಾಪಕರಿಗೆ ತಿಳಿಸಿದಾಗ ಖುಷಿಯಿಂದ ಒಪ್ಪಿಕೊಂಡರು. ಈ ಸಿನಿಮಾ ಆಗಲು ಕಬಡ್ಡಿ ನರೇಂದ್ರಬಾಬು ಮುಖ್ಯ ಕಾರಣ’ ಎಂದರು.
ಚಿತ್ರದಲ್ಲಿ 1980 ಮತ್ತು 2000 ಕಾಲಘಟ್ಟದಲ್ಲಿ ನಡೆಯುವ ಕಥೆ ಇದೆ. ಮೊದಲನೇ ಜೋಡಿಯ ಪ್ರೇಮ ಕತೆ ವಿಫಲವಾಗುತ್ತದೆ. ಎರಡನೇ ಜೋಡಿಯ ಪ್ರೇಮಕಥೆ ಯಶಸ್ಸು ಕಾಣುತ್ತದೆ. ಇವೆರೆಡರ ನಡುವೆ ಸನ್ನಿವೇಶಗಳು ಮನಸ್ಸನ್ನು ಕದಡುತ್ತದೆ. ಸಿನಿಮಾದಲ್ಲಿ ಮಳೆಯು ಮಹತ್ವದ ಪಾತ್ರವನ್ನು ವಹಿಸಿದೆ. ಜತೆಗೆ ಅರ್ಥಪೂರ್ಣ ಸಂದೇಶಗಳು ಅಲ್ಲಲ್ಲಿ ಬರುತ್ತದೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದು ಪರಮ್ ಗುಬ್ಬಿ ಮಾಹಿತಿ ನೀಡಿದರು.
’ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರಕ್ಕೆ ಅತಿಶಯ್ ಜೈನ್ ಸಂಗೀತ ಮತ್ತು ಶಾಂತಾರಾವ್ ಇಪಿಲಿ ಅವರ ಛಾಯಾಗ್ರಹಣವಿದೆ.
ಸಂಹಿತಾಗೆ ದೆವ್ವದ ಕಾಟ; ಫೆ.20ಕ್ಕೆ ‘ಮಿಕ್ಸಿಂಗ್ ಪ್ರೀತಿ’ ಚಿತ್ರ ಬಿಡುಗಡೆ


