ಈಗಾಗಲೇ ಕಿರುಚಿತ್ರದ ಮೂಲಕ ಜನಪ್ರಿಯರಾಗಿರುವ ತಂಡವೊಂದು, ಇದೀಗ ಚಲನಚಿತ್ರದ ಮೂಲಕ ರಂಜಿಸುವುದಕ್ಕೆ ಬರುವುದಕ್ಕೆ ಸಜ್ಜಾಗಿದೆ. ಅದೇ ‘ಅಮೃತ ಅಂಜನ್’. ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಜಿ ಟಿ ಮಾಲ್ ನಲ್ಲಿರುವ ಉತ್ಸವ್ ಲಗಸಿಯಲ್ಲಿ ನಡೆದಿದ್ದು, ಮಾಜಿ ಸಚಿವೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಹಾಗೂ ಹಿರಿಯ ನಟಿ ಜಯಮಾಲಾ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಈ ಕಾರ್ಯಕ್ರಮಕ್ಕೆ ಬರಲು ಕಾರಣ ಲೋಕೇಶ್ ನಾಗಪ್ಪ ಎಂದ ಡಾ. ಜಯಮಾಲ, ‘ಅವರು ಇಂಜಿನಿಯರ್. ಈಗ ನಾವು ಇರುವಂತ ಮನೆಯನ್ನ ಕಟ್ಟಿಕೊಟ್ಟಿದವರು ಅವರೇ. ಅವರದು ಶಾಲೆ ಇದೆ. ಒಮ್ಮೆ ಶಾಲಾ ಫಂಕ್ಷನ್ ಗೆ ಬನ್ನಿ ಎಂದಿದ್ದರು. ಆಗ ನಮ್ಮ ಶಾಲೆಯಲ್ಲಿ ಸುಧಾಕರ್ ಎಂಬ ವಿದ್ಯಾರ್ಥಿ ಇದ್ದಾನೆ, ಅವನಿಗೆ ಸಿನಿಮಾ ಬಗ್ಗೆ ಬಹಳಷ್ಟು ಆಸಕ್ತಿ ಇದೇ ಎಂದಿದ್ದರು. ಅದರಂತೆ ಸುಧಾಕರ್ ಬಹಳ ಟ್ಯಾಲೆಂಟೆಡ್ ಹುಡುಗ. ನಾನು ಆತನಿಗೆ ಡಿಗ್ರಿ ಮುಗಿದ ನಂತರ ಸಿನಿಮಾಗೆ ಬನ್ನಿ, ವಿದ್ಯೆ ಬಹಳ ಮುಖ್ಯ ಎಂದಿದ್ದೆ. ಅದರಂತೆ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿ ಚಿತ್ರರಂಗಕ್ಕೆ ಬಂದಿದ್ದಾರೆ. ಒಮ್ಮೆ ಅವರ ತಂಡ ಮಾಡಿದಂತಹ ವೆಬ್ ಸೀರೀಸ್ ನೋಡಿದೆ. ಎರಡೂವರೆ ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಬಹಳ ಆಸಕ್ತಿಯಿಂದ ಇಡೀ ತಂಡ ಕೆಲಸ ಮಾಡಿದ್ದು, ಕಲಾವಿದರು, ನಿರ್ದೇಶಕರು, ತಂತ್ರಜ್ಞರಿಗೆ ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿದರು.

ಈ ಚಿತ್ರವನ್ನು ಜ್ಯೋತಿ ರಾವ್ ಮೋಹಿತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಗೌರವ್ ಶೆಟ್ಟಿ, ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಶ್ರೀಭವಯ, ಕಾರ್ತಿಕ್ ರೂವಾರಿ ರೆಡ್ಡಿ, ಪಲ್ಲವಿ ಪರ್ವ, ಮಧುಮಿತಾ, ನವೀನ್ ಡಿ. ಪಡೀಲ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಗ್ರಹಣ, ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಚಿತ್ರ ಇದೇ 30ರಂದು ರಾಜ್ಯಾದ್ಯಂತ ರಾರಾಜಿಸಲಿದೆ.


