• ಚೇತನ್ ನಾಡಿಗೇರ್
ಭಾರತೀಯ ಚಿತ್ರರಂಗದಲ್ಲಿ ಸುಧೀರ್ಘ ಕಾಲ ನಿರ್ದೇಶನ ಮಾಡಿದವರ ಸಂಖ್ಯೆ ಕಡಿಮೆಯೇ. ಅತೀ ಹೆಚ್ಚು ವರ್ಷಗಳ ಕಾಲ ನಿರ್ದೇಶಕರಾಗಿದ್ದವರ ಪೈಕಿ ಮೊದಲ ಸ್ಥಾನದಲ್ಲಿರುವವರು ಹಿಂದಿ ನಿರ್ದೇಶಕ ಯಶ್ ಚೋಪ್ರಾ ಎಂದು ಹೇಳಲಾಗುತ್ತದೆ. 1959ರಲ್ಲಿ ‘ಧೂಲ್ ಕಾ ಪೂಲ್’ ಚಿತ್ರದ ಮೂಲಕ ನಿರ್ದೇಕರಾದ ಯಶ್ ಚೋಪ್ರಾ 53 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಅವರ ಕೊನೆಯ ಚಿತ್ರ 2012ರಲ್ಲಿ ಬಿಡುಗಡೆಯಾದ ‘ಜಬ್ ತಕ್ ಹೇ ಜಾನ್’ ಆಗಿತ್ತು. ಈ 53 ವರ್ಷಗಳ ಪಯಣದಲ್ಲಿ ಅವರು ನಿರ್ದೇಶಿಸಿದ್ದು ಕೇವಲ 22 ಚಿತ್ರಗಳನ್ನು ಮಾತ್ರ.
ಅದೇ ರೀತಿ ಹೃತಿಕೇಶ್ ಮುಖರ್ಜಿ ಸುಮಾರು 41 ವರ್ಷಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದರು. ಬಸು ಚಟರ್ಜಿ 42 ವರ್ಷಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದರು. ಸಿಂಗೀತಂ ಶ್ರೀನಿವಾಸ ರಾವ್ 41 ವರ್ಷಗಳಲ್ಲಿ 60 ಚಿತ್ರಗಳನ್ನು ನಿರ್ದೇಶಿಸಿದರು. ಕೆ. ರಾಘವೇಂದ್ರ ರಾವ್ 42 ವರ್ಷಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದರು. ಕೆ. ಬಾಲಚಂದರ್ 41 ವರ್ಷಗಳಲ್ಲಿ 100 ಚಿತ್ರಗಳನ್ನು ನಿರ್ದೇಶಿಸಿದರು. ಭಾರತೀರಾಜ 43 ವರ್ಷಗಳಲ್ಲಿ 45 ಚಿತ್ರಗಳನ್ನು ನಿರ್ದೇಶನ ಮಾಡಿದರು. ಪ್ರಿಯದರ್ಶನ್ ನಿರ್ದೇಶಕರಾಗಿ ನಾಲ್ಕು ದಶಕಗಳಲ್ಲಿ 80ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಡೂರು ಗೋಪಾಲಕೃಷ್ಣನ್, ಐ.ವಿ. ಶಶಿ, ಫಾಜಿಲ್ ಹೀಗೆ ಹಲವರು ಸುಧೀರ್ಘವಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಸಾವಿರಾರು ನಿರ್ದೇಶಕರು ಬಂದು ಹೋಗಿದ್ದಾರೆ. ಅದರಲ್ಲಿ ಕೆಲವರು ಮಾತ್ರ ಹೀಗೆ ನಾಲ್ಕೈದು ದಶಕಗಳ ಕಾಲ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೊಂದು ಸಮಯದಲ್ಲಿ ಅವರು ಮಾಡಿದ ಕೆಲಸ ಕಡಿಮೆ ಎಂದನಿಸಬಹುದು. ಆದರೆ, ಅವರು ನಿರ್ದೇಶನದ ಜೊತೆಗೆ ಬೇರೆ ಕೆಲಸಗಳಲ್ಲೂ ಸತತವಾಗಿ ತೊಡಗಿಸಿಕೊಂಡಿದ್ದರು. ಯಶ್ ಚೋಪ್ರಾ ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಸಕ್ರಿಯರಾಗಿದ್ದರು. ಹೃಷಿಕೇಶ್ ಮುಖರ್ಜಿ ಸಂಕಲನಕಾರರಾಗಿ ಗುರುತಿಸಿಕೊಂಡಿದ್ದರು. ಬಸು ಚಟರ್ಜಿ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದರು. ಸಿಂಗೀತಂ ಕೆಲವು ಚಿತ್ರಗಳು ಸಂಗೀತ ಸಂಯೋಜಿಸಿದ್ದರು. ಭಾರತೀರಾಜ ನಟಿಸಿದರು. ಹೀಗೆ ನಾಲ್ಕು ದಶಕ ಮತ್ತು ಅದಕ್ಕೂ ಹೆಚ್ಚು ಸಕ್ರಿಯವಾಗಿದ್ದ ನಿರ್ದೇಶಕರು ಇನ್ನಷ್ಟು ಇದ್ದಾರೆ. ಆದರೆ, ಇಲ್ಲಿ ಕೆಲವರನ್ನು ಮಾತ್ರ ಹೆಸರಿಸಲಾಗಿದೆ.
ಈಗ್ಯಾಕೆ ಈ ವಿಷಯ ಎಂದರೆ, 50 ವರ್ಷಗಳ ಕಾಲ ನಿರ್ದೇಶನ ಮಾಡಿದವರ ಪಟ್ಟಿಗೆ ಇದೀಗ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಸಹ ಸೇರಿದ್ದಾರೆ. ಬಾಬು ನಿರ್ದೇಶನದ ಮೊದಲ ಚಿತ್ರ ‘ನಾಗಕನ್ನಿಕೆ’, 1975ರಲ್ಲಿ ಬಿಡುಗಡೆಯಾಗಿತ್ತು. ಆ ಚಿತ್ರ ಬಿಡುಗಡೆಯಾಗಿ ಸದ್ಯದಲ್ಲೇ 50 ವರ್ಷಗಳಾಗಲಿವೆ. ಈ 50 ವರ್ಷಗಳಲ್ಲಿ ಬಾಬು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶನ ಮಾಡುವುದರ ಜೊತೆಗೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಾಬು ನಿರ್ದೇಶನದ ಚಿತ್ರವೊಂದು ಬಿಡುಗಡೆಯಾಗದೆ 10 ವರ್ಷಗಳೇ ಆಗಿವೆ. ಈ ಮಧ್ಯೆ, ಅವರು ಶುರು ಮಾಡಿದ ‘ರಾಜವೀರ ಮದಕರಿ ನಾಯಕ’ ಮತ್ತು ‘ಬಂಧನ 2’ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ‘ಕಂಬಳ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಇನ್ನು, ಯಾವಾಗಲೋ ಮಾಡಿದ ‘ಭೀಮೂಸ್ ಬ್ಯಾಂಗ್ ಬ್ಯಾಂಕ್ ಕಿಡ್ಸ್’ ಚಿತ್ರವು ‘ರಕ್ತ ಕಾಶ್ಮೀರ’ ಹೆಸರಿನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಒಟ್ಟಾರೆ, ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಕಾಲ ಸಕ್ರಿಯವಾಗಿ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ಮೊದಲ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಾಬು ನಿರ್ದೇಶಕರಾಗಿ 50 ವರ್ಷಗಳಾಗಿದ್ದರೂ, ಅವರು ಚಿತ್ರರಂಗಕ್ಕೆ ಬಂದು ಇನ್ನೂ ಜಾಸ್ತಿ ಸಮಯವಾಗಿದೆ. 1972ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ನಾಯಕರಾಗಿ ಅಭಿನಯಿಸಿದ ‘ನಾಗರಹಾವು’ ಚಿತ್ರದ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆ ಬಾಬು ಹಲವು ಬಾರಿ ಮಾತನಾಡಿದ್ದಾರೆ. ಇತ್ತೀಚೆಗೆ ಮಾತನಾಡುವ ಸಂದರ್ಭದಲ್ಲಿ ನಟ-ನಿರ್ದೇಶಕ ರವಿಚಂದ್ರನ್, ಬಾಬು ಅವರನ್ನು ನೆನಪಿಸಿಕೊಂಡಿದ್ದರು. 1971ರಲ್ಲಿ ಬಿಡುಗಡೆಯಾದ ‘ಕುಲಗೌರವ’ ಚಿತ್ರದಲ್ಲಿ ತಾನು ಬಾಲನಟನಾಗಿ ನಟಿಸುವ ಸಂದರ್ಭದಲ್ಲಿ ಬಾಬು ತಮ್ಮ ಮೊದಲ ಛಾಯಾಚಿತ್ರವನ್ನು ತೆಗೆದಿದ್ದಾಗಿ ಹೇಳಿಕೊಂಡಿದ್ದರು. ಅಲ್ಲಿಗೆ ಬಾಬು ಚಿತ್ರಪಯಣ ಇನ್ನೂ ಸುಧೀರ್ಘವಾಗಿದ್ದು.

ಕನ್ನಡ ಚಿತ್ರರಂಗದ ಸುವರ್ಣ ಅಧ್ಯಾಯ ಎಂದರೆ 70ನೇ ದಶಕ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಸುವರ್ಣ ವರ್ಷಗಳಲ್ಲಿ ಬಂದು, ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದ ಕೆಲವು ನಿರ್ದೇಶಕರಿಗೆ ಇದೀಗ ಸುವರ್ಣ ಸಂಭ್ರಮ. ಬಾಬು ನಿರ್ದೇಶಕರಾಗಿ 50 ವರ್ಷಗಳಾದರೆ, ಗಿರೀಶ್ ಕಾಸರವಳ್ಳಿ ಮತ್ತು ಟಿ.ಎಸ್. ನಾಗಾಭರಣ, ಕನ್ನಡ ಚಿತ್ರರಂಗಕ್ಕೆ ಬಂದು ಈ ವರ್ಷಕ್ಕೆ 50 ವರ್ಷಗಳಾಗುತ್ತವೆ ಎಂಬುದು ವಿಶೇಷ. 1977ರಲ್ಲಿ ಬಿಡುಗಡೆಯಾದ ‘ಘಟಶ್ರಾದ್ಧ’ ಚಿತ್ರದ ಮೂಲಕ ಗಿರೀಶ್ ಕಾಸರವಳ್ಳಿ ನಿರ್ದೇಶಕರಾದರೂ, ಅದಕ್ಕೂ ಮೊದಲು 1975ರಲ್ಲಿ ಬಿಡುಗಡೆಯಾದ ‘ಚೋಮನ ದುಡಿ’ ಚಿತ್ರಕ್ಕೆ ಬಿ.ವಿ. ಕಾರಂತರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಗ್ರಹಣ’ ಚಿತ್ರದ ಮೂಲಕ ನಾಗಾಭರಣ ನಿರ್ದೇಶಕರಾದರೂ, 1975ರಲ್ಲಿ ಬಿಡುಗಡೆಯಾದ ‘ಕಾಡು’ ಚಿತ್ರದಲ್ಲಿ ಅವರು ಕೆಲಸ ಮಾಡಿದ್ದರು. ಚಿತ್ರದ ವಸ್ತ್ರವಿನ್ಯಾಸದ ಜವಾಬ್ದಾರಿಯ ಜೊತೆಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಆ ನಿಟ್ಟಿನಲ್ಲಿ ಕಾಸರವಳ್ಳಿ ಮತ್ತು ನಾಗಾಭರಣ ಇಬ್ಬರೂ ಚಿತ್ರರಂಗಕ್ಕೆ ಬಂದು ಈ ವರ್ಷಕ್ಕೆ ಗೋಲ್ಡನ್ ಜ್ಯೂಬಿಲಿಯಾಗುತ್ತದೆ.

ವಿಶೇಷವೆಂದರೆ, ಇಬ್ಬರು ಈಗಲೂ ಸಕ್ರಿಯರಾಗಿದ್ದಾರೆ. ಈ ಪೈಕಿ, ಗಿರೀಶ್ ಕಾಸರವಳ್ಳಿ ಅವರು ‘ಆಕಾಶ ಮತ್ತು ಬೆಕ್ಕು’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಭರಣ, ‘ನಾಡಪ್ರಭು ಕೆಂಪೇಗೌಡ’ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ. ಚಿತ್ರರಂಗದಲ್ಲಿ ಇಬ್ಬರೂ 50 ವರ್ಷಗಳನ್ನು ಮುಗಿಸಿದ್ದು, ಮುಂದಿನ ವರ್ಷಗಳಲ್ಲಿ ನಿರ್ದೇಶಕರಾಗಿ ಇಬ್ಬರೂ 50 ವರ್ಷ ಪೂರೈಸಲಿದ್ದಾರೆ. ಈ 50 ವರ್ಷಗಳಲ್ಲಿ ಇಬ್ಬರೂ ಚಿತ್ರ ನಿರ್ದೇಶನದ ಜೊತೆಗೆ ಬೇರೆಬೇರೆ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಗಿರೀಶ್ ಕಾಸರವಳ್ಳಿ 16 ಚಿತ್ರಗಳನ್ನು ನಿರ್ದೇಸಿಸುವುದರ ಜೊತೆಗೆ ಧಾರಾವಾಹಿ ಮತ್ತು ಸಾಕ್ಷ್ಯಚಿತ್ರಗಳನ್ನು ಮಾಡಿದರೆ, ನಾಗಾಭರಣ 35 ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ, ಕಿರುತೆರೆ ಮತ್ತು ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ.

ಚಿತ್ರರಂಗದಲ್ಲಿ ಐದು ದಶಕಗಳನ್ನು ಪೂರೈಸಿದ ನಿರ್ದೇಶಕರ ಸಾಲಿಗೆ, ಇನ್ನು ಮೂರು ವರ್ಷಕ್ಕೆ ಬರಗೂರು ರಾಮಚಂದ್ರಪ್ಪ ಸಹ ಸೇರುತ್ತಾರೆ. ಬರಗೂರು ನಿರ್ದೇಶನದ ಮೊದಲ ಚಿತ್ರ ‘ಒಂದು ಊರಿನ ಕಥೆ’ 1978ರಲ್ಲಿ ಬಿಡುಗಡೆಯಾಗಿತ್ತು. ಅಲ್ಲಿಂದ ಬರಗೂರರು ಹಲವು ಚಿತ್ರಗಳನ್ನು ನಿರ್ದೇಶಿಸಿದ್ದು, ಈಗಲೂ ಅದು ಮುಂದುವರೆದಿದೆ. ವಿಜಯ್ ರಾಘವೇಂದ್ರ ಅಭಿನಯದಲ್ಲಿ ‘ಸ್ವಪ್ನ ಮಂಟಪ’ ಎಂಬ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಚಿತ್ರರಂಗಕ್ಕೆ ಹಲುವ ಕನಸುಗಳನ್ನು ಕಟ್ಟಿಕೊಂಡು ಬರುವ ಎಷ್ಟೋ ಜನ ಒಂದು ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದೆರಡು ಚಿತ್ರಗಳನ್ನು ನಿರ್ದೇಶನ ಮಾಡಿದರೂ, ಹೆಚ್ಚು ಕಾಲ ಮುಂದುವರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಿರುವಾಗ, ಕನ್ನಡದ ನಾಲ್ವರು ಪ್ರಮುಖ ನಿರ್ದೇಶಕರು ಸುಧೀರ್ಘ ಪಯಣ ಮಾಡುವುದರ ಜೊತೆಗೆ, ತಮ್ಮ ಕೆಲಸಗಳಿಂದ ದೊಡ್ಡ ಹೆಸರು ಮಾಡಿರುವುದು, ಕನ್ನಡಿಗರ ಮತ್ತು ಕನ್ನಡ ಚಿತ್ರರಂಗದ ಪಾಲಿಗೆ ಸಂಭ್ರಮದ ಕ್ಷಣ.
ಮತ್ತೆ ‘ಬಿಗ್ ಬಾಸ್’ ನಡೆಸಿಕೊಡ್ತಾರಂತೆ ಸುದೀಪ್! ಇಂದು ಅಧಿಕೃತ ಘೋಷಣೆ?


