ಆಮೀರ್ ಖಾನ್ ಅಭಿನಯದ ‘ಸಿತಾರೆ ಜಮೀನ್ ಪರ್’ ಚಿತ್ರವು ಜೂನ್ 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆಮೀರ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳಾಗಿರುವುದರಿಂದ ಚಿತ್ರದ ಬಗ್ಗೆ ಸಹಜವಾಗಿಯೇ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಿವೆ.
ಈ ಮಧ್ಯೆ, ಚಿತ್ರದ ಡಿಜಿಟಲ್ ಹಕ್ಕುಗಳನ್ನು ಕೊಳ್ಳುವುದಕ್ಕೆ ನೆಟ್‍ಫ್ಲಿಕ್ಸ್ ಮುಂದೆ ಬಂದಿದೆ. ಚಿತ್ರದ ಹಕ್ಕುಗಳನ್ನು ಕೊಳ್ಳುವುದಕ್ಕೆ 125 ಕೋಟಿ ರೂ ಆಫರ್ ನೀಡಿದೆ. ಇದು ವಿಶೇಷವೇನಲ್ಲ. ಇದಕ್ಕೂ ಮೊದಲು ಬೇರೆ ಚಿತ್ರಗಳ ಹಕ್ಕುಗಳನ್ನು ಇನ್ನೂ ಹೆಚ್ಚು ಬೆಲೆ ಕೊಟ್ಟು ಕೊಂಡಿದೆ. ‘ಪುಷ್ಪಾ 2’ ಚಿತ್ರದ ಹಕ್ಕುಗಳಿಗೇ ನೆಟ್‍ಫ್ಲಿಕ್ಸ್ 270 ಕೋಟಿ ರೂ ನೀಡಿದ್ದು ಸುದ್ದಿಯಾಗಿತ್ತು. ಹಾಗಿರುವಾಗ, ‘ಸಿತಾರೆ ಜಮೀನ್ ಪರ್’ ಚಿತ್ರದ ಹಕ್ಕುಗಳನ್ನು ಖರೀದಿಸುವುದಕ್ಕೆ 125 ಕೋಟಿ ರೂ ಖರ್ಚು ಮಾಡುತ್ತಿರುವುದು ದೊಡ್ಡ ವಿಷಯವೇನಲ್ಲ.
ಆದರೆ, ಇಲ್ಲೂ ಒಂದು ವಿಶೇಷವಿದೆ. ಅದೇನೆಂದರೆ, ಈ ಚಿತ್ರದ ಹಕ್ಕುಗಳನ್ನು ಖರೀದಿಸುವುದಕ್ಕೆ ನೆಟ್‍ಫ್ಲಿಕ್ಸ್ ಮೊದಲು 60 ಕೋಟಿ ರೂ ಆಫರ್ ನೀಡಿತ್ತಂತೆ. ಆದರೆ, ಇದಕ್ಕೆ ಆಮೀರ್ ಖಾನ್ ಒಪ್ಪಲಿಲ್ಲ. ಈಗ ಇದೇ ಚಿತ್ರದ ಹಕ್ಕುಗಳಿಗೆ ಅದೇ ಸಂಸ್ಥೆ ಡಬ್ಬಲ್ ಹಣ ಕೊಡುವುದಕ್ಕೆ ತಯಾರಾಗಿದೆ.
ಅದಕ್ಕೆ ಕಾರಣವೂ ಇದೆ. ಯಾವಾಗ ನೆಟ್‍ಫ್ಲಿಕ್ಸ್ ಹೇಳಿದ ಮೊತ್ತ ಕಡಿಮೆ ಎಂದನಿಸಿತೋ, ಆಗ ಆಮೀರ್ ಖಾನ್ ಈ ಆಫರ್ ಪಕ್ಕಕ್ಕಿಟ್ಟು, ಇನ್ನೊಂದು ಐಡಿಯಾ ಮಾಡಿದ್ದಾರೆ. ಯಾವುದೋ ಓಟಿಟಿಗೆ ಹಕ್ಕುಗಳನ್ನು ಕೊಡುವ ಬದಲು ಯಾಕೆ ತಮ್ಮದೇ ಯೂಟ್ಯೂಬ್ ಚಾನಲ್‍ನಲ್ಲಿ Pay-Per-View ಮಾದರಿಯಲ್ಲಿ ಬಿಡುಗಡೆ ಮಾಡಿದರೆ, ಆಗ ಅದಕ್ಕಿಂದ ಹೆಚ್ಚು ದುಡಿಯಬಹುದು ಎಂದನಿಸಿದೆ. ಹಾಗಾಗಿ, ಚಿತ್ರವನ್ನು ಕೆಲವು ವಾರಗಳ ನಂತರ ತಮ್ಮದೇ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಮಾಡುವುದು ಅವರ ಯೋಚನೆ.
ಯಾವಾಗ ಆಮೀರ್ ಖಾನ್ ಈ ನಿರ್ಧಾರಕ್ಕೆ ಬಂದರೋ, ಆಗ ನೆಟ್‍ಫ್ಲಿಕ್ಸ್ ಎಚ್ಚೆತ್ತುಕೊಂಡಿದೆ. ಈ ಪ್ರಯತ್ನದಿಂದ ಮುಂದೆ ತಮಗೆ ದೊಡ್ಡ ಆಪತ್ತು ಬರಬಹುದು ಎಂದು ಅದಕ್ಕೆ ಅರ್ಥವಾಗಿದೆ. ಏಕೆಂದರೆ, ಮುಂದಿನ ದಿನಗಳಲ್ಲಿ ಎಲ್ಲರೂ ಓಟಿಟಿ ಬಿಟ್ಟು ತಮ್ಮದೇ ಯೂಟ್ಯೂಬ್ ಚಾನಲ್‍ನಲ್ಲಿ Pay-Per-View ಮಾದರಿಯಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬಹುದು. ಇದರಿಂದ ಇಡೀ ವ್ಯವಸ್ಥೆಗೆ ಪೆಟ್ಟು ಬಿದ್ದಂತಾಗುತ್ತದೆ. ಹಾಗಾಗಿ, ಆಮೀರ್ ಖಾನ್‍ರನ್ನು ತಡೆಯುವುದಕ್ಕೆ ದುಪ್ಪಟ್ಟ ಆಫರ್ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಆಫರ್‍ಗೆ ಆಮೀರ್ ಖಾನ್ ಇನ್ನೂ ಉತ್ತರ ಕೊಟ್ಟಿಲ್ಲ.
‘ಸಿತಾರೆ ಜಮೀನ್ ಪರ್’ ಚಿತ್ರವು ‘ಚಾಂಪಿಯನ್ಸ್’ ಎಂಬ ಸ್ಪಾನಿಶ್ ಚಿತ್ರದ ರೀಮೇಕ್ ಆಗಿದ್ದು, ಈ ಚಿತ್ರದಲ್ಲಿ ಆಮೀರ್ ಖಾನ್ ಜೊತೆಗೆ ಜೆನಿಲಿಯಾ ಡಿಸೋಜ, ಬ್ರಿಜೇಂದ್ರ ಕಾಲ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಆರ್.ಎಸ್. ಪ್ರಸನ್ನ ನಿರ್ದೇಶಿಸಿದ್ದು, ಚಿತ್ರವನ್ನು ಆಮೀರ್ ಖಾನ್ ನಿರ್ಮಿಸಿದ್ದಾರೆ.
‘ಹೌಸ್‍ಫುಲ್ 5’ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್; ಎರಡೂ ಚಿತ್ರಗಳು ಒಟ್ಟಿಗೆ ಬಿಡುಗಡೆ


