ಸಿರಿ ಕನ್ನಡದಲ್ಲಿ ‘ರಾಯರಿದ್ದಾರೆ’; ಜ.5ರಂದು ‘ಶ್ರೀ ಗುರು ರಾಘವೇಂದ್ರ ಉತ್ಸವ’

ಕಿರುತೆರೆ, ಚಂದನವನ, ಸಿನಿ ಸುದ್ದಿ

ಗಣೇಶ, ಶ್ರೀರಾಮ, ಅಣ್ಣಮ್ಮ ಸೇರಿದಂತೆ ಹಲವು ದೇವ-ದೇವತೆಗಳ ಉತ್ಸವಗಳನ್ನು ಆಚರಿಸುವುದು ಸಾಮಾನ್ಯ. ವಾಹಿನಿಗಳಲ್ಲೂ ಹಲವು ದೇವರ ಉತ್ಸವಗಳನ್ನು ಇದುವರೆಗೂ ಆಯೋಜಿಸಲಾಗಿದೆ. ಸಿರಿ ಕನ್ನಡ ವಾಹಿನಿಯು ಇದೇ ಮೊದಲ ಬಾರಿಗೆ ‘ಶ್ರೀ ಗುರು ರಾಘವೇಂದ್ರ ಉತ್ಸವ’ವನ್ನು ಆಯೋಜಿಸಿದೆ.

ಸಿರಿ ಕನ್ನಡ ವಾಹಿನಿಯ ವತಿಯಿಂದ ಜನವರಿ 5ರ ಭಾನುವಾರದಂದು ಜಯನಗರದ ಐದನೇ ಬ್ಲಾಕ್‍ನಲ್ಲಿರುವ ಶಾಲಿನಿ ಮೈದಾನದಲ್ಲಿ ‘ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ಸವ’ವನ್ನು ಆಯೋಜಿಸಲಾಗಿದ್ದು, ಈ ಉತ್ಸವವು 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಘನ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ.

ಈ ಉತ್ಸವದಲ್ಲಿ ಮಂತ್ರಾಲಯದಲ್ಲಿರುವ ರಾಯರ ದೇಗುಲ ಮತ್ತು ಬೃಂದಾವನವನ್ನು ಮರು ಸೃಷ್ಟಿ ಮಾಡಲಾಗುತ್ತಿದೆ. ಸುಬುಧೇಂದ್ರ ತೀರ್ಥರು ಬೃಂದಾವನಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ಉತ್ಸವದಲ್ಲಿ 30 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮವನ್ನು ಮಧುಸೂದನ್ ಹವಾಲ್ದಾರ್‍, ಸಿ.ಆರ್ ಮುರಳಿ ಮುಂತಾದವರ ಸಹಯೋಗದಲ್ಲಿ ಮಾಡಲಾಗುತ್ತಿದೆ.

ಭಾನುವಾರ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಿರಂತರವಾಗಿ ರಾಯರ ಭಜನೆ, ಪ್ರವಚನ, ಭಕ್ತಿ ಗೀತೆಗಳು, ಹರಿಕಥೆ ನಡೆಯಲಿದ್ದು, ಜನಪ್ರಿಯ ಗಾಯಕರಾದ ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್, ಅರ್ಚನಾ ಉಡುಪ ಮುಂತಾದವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ಸಿನಿಮಾ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಶೇಷವೆಂದರೆ, ಧನಂಜಯ, ಆಶಿಕಾ ರಂಗನಾಥ್ ಸೇರಿದಂತೆ 25 ಸಾಧಕರಿಗೆ ‘ಶ್ರೀ ಗುರು ರಾಘವೇಂದ್ರ’ ಪ್ರಶಸ್ತಿಯನ್ನು ನೀಡಿ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಮಂತ್ರಾಲದಿಂದಲೇ ತಂದ ಪರಿಮಳ ಪ್ರಸಾದ ಮತ್ತು ಮಂತ್ರಾಕ್ಷತೆಯನ್ನು ವಿತರಣೆ ಮಾಡಲಾಗುವುದು. ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಗುತ್ತದೆ.

ಈ ಕುರಿತು ಮಾತನಾಡುವ ಸಿರಿ ಕನ್ನಡ ಚಾನಲ್‍ನ ಸಂಜಯ್‍ ಶಿಂಧೆ, ‘ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮತ್ತು ಸುಬುಧೇಂದ್ರ ತೀರ್ಥರ ಜೀವನ ಚರಿತ್ರೆ ಮತ್ತು ಮಹಿಮೆಯನ್ನು ಆಕರ್ಷಕ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುವುದು. 30/40 ಅಡಿಯ ಬೃಹತ್ ರಂಗೋಲಿಯನ್ನು ಇದೇ ಸಂದರ್ಭದಲ್ಲಿ ಬಿಡಿಸಲಾಗುವುದು. ಈಗಾಗಲೇ ಹಲವು ರಾಯರ ಮಠಗಳಿಗೆ ಪ್ರತಿಗಳನ್ನು ಕಳುಹಿಸಲಾಗಿದೆ. ಭಕ್ತಾದಿಗಳು ತಮ್ಮ ಸಂಕಲ್ಪದೊಂದಿಗೆ 108 ಬಾರಿ ‘ಶ್ರೀ ಗುರು ರಾಘವೇಂದ್ರಾಯ ನಮಃ’ ಎಂದು ಬರೆದು ತಂದರೆ ಬೃಂದಾವನದಲ್ಲಿಟ್ಟು ಪೂಜಿಸಲಾಗುತ್ತದೆ. ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಫೆಬ್ರವರಿ 3 ರಿಂದ, ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಸಿರಿ ಕನ್ನಡ ವಾಹಿನಿಯಲ್ಲಿ ‘ರಾಯರಿದ್ದಾರೆ’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಂತ್ರಾಲಯದ ನಿತ್ಯ ಪೂಜೆ, ಸುಬುಧೇಂದ್ರ ತೀರ್ಥರ ಆಶೀರ್ವಚನ, ರಾಯರ ಪವಾಡಗಳು, ರಾಯರ ಕೃಪೆಗೆ ಒಳಗಾದ ಭಕ್ತಾದಿಗಳ ಸಂದರ್ಶನ ಮತ್ತು ರಾಯರ ಜೀವನ ಚರಿತ್ರೆಯನ್ನು ಮರು ಸೃಷ್ಟಿಸಿ ಪ್ರಸಾರ ಮಾಡಲಾಗುವುದು’ ಎಂದರು.

ಚಿತ್ರ ವಿಮರ್ಶೆ: ರೌಡಿಸಂ ಮತ್ತು ಪ್ರೀತಿಯ ನಡುವಿನ ಸಂಘರ್ಷ

Latest Posts

Discover more from KannadaScreens

Subscribe now to keep reading and get access to the full archive.

Continue reading