ಕತ್ತಿ ಹಿಡದವರು ನಂಬರ್ ಒನ್‍ ಆದರು, ನಾನಲ್ಲೇ ಉಳಿದೆ: ಸುದೀಪ್‍

ಚಂದನವನ, ಸಂದರ್ಶನ, ಸಿನಿ ಸುದ್ದಿ

ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಬಿಡುಗಡೆ ಯಾವಾಗ ಎಂದು ಕೇಳಿ ಅಭಿಮಾನಿಗಳು ಸುಸ್ತಾಗಿದ್ದರು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಚಿತ್ರವು ಡಿ. 25ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಪ್ರಾರಂಭವಾಗಿ ಎರಡು ವರ್ಷಗಳಾಗಿದ್ದರೂ, ಚಿತ್ರದ ಬಗ್ಗೆ ಸುದೀಪ್‍ ಹೆಚ್ಚು ಮಾತನಾಡಿರಲಿಲ್ಲ. ಈಗ ಮೊದಲ ಬಾರಿಗೆ ಚಿತ್ರದ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ಮ್ಯಾಕ್ಸ್’ ಕುರಿತು ಮಾತನಾಡಿರುವ ಸುದೀಪ್‍, ‘ಇದು ಒಂದು ರಾತ್ರಿಯ ಕಥೆ. ಇಲ್ಲಿ ಚಿತ್ರಕಥೆಯೇ ಹೀರೋ. ವಿಜಯ್‍ ಕಾರ್ತಿಕೇಯ ಮನೆಗೆ ಬಂದು ಕಥೆ ಹೇಳಿದರು. ಹುಡುಗಿ ನೋಡಿದೆ. ಇಷ್ಟ ಆಗಿದ್ದರಿಂದಲೇ ತಾಳಿ ಕಟ್ಟುವುದಕ್ಕೆ ಒಪ್ಪಿಕೊಂಡೆ. ಇಲ್ಲಿ ಪ್ರಮುಖವಾಗಿ ಇರುವುದು ಒಂದೇ ವಿಷಯ. ಮೂಡ್‍ ಹೇಗಿದೆ ಎಂಬುದರ ಮೇಲೆ ಎಲ್ಲವೂ ನಿಂತಿರುತ್ತದೆ. ಮೂಡ್‍ ಚೆನ್ನಾಗಿದ್ದರೆ ಕಥೆ ಕೇಳುತ್ತೇನೆ. ಇಲ್ಲವಾದರೆ ಇಲ್ಲ. ವಿಜಯ್‍ ಕಾರ್ತಿಕೇಯ ಕಥೆ ಹೇಳಿದ ದಿನ ನನ್ನ ಮೂಡ್‍ ಚೆನ್ನಾಗಿತ್ತು. ಕಥೆ ಬಹಳ ಪ್ರಾಮಾಣಿಕವಾಗಿತ್ತು. ನನ್ನ ಮೆಚ್ಚಿಸೋಕೆ ಅವರು ಏನೋ ಮಾಡರಲಿಲ್ಲ. ಆದರೆ, ಸ್ವಲ್ಪ ತಮಿಳಿನ ಫ್ಲೇವರ್ ಇತ್ತು. ಎಷ್ಟು ಜೊತೆ ಬಟ್ಟೆ ತಂದಿದ್ದೀರಾ ಎಂದು ಕೇಳಿದೆ. ಒಂದೇ ಜೊತೆ ಎಂದರು. ಎಂಟು ಜೊತೆ ಬಟ್ಟೆ ತರಿಸಸಿಕೊಟ್ಟು, ಇಲ್ಲೇ ಇರಿಸಿಕೊಂಡೆ. ಸಾಕಷ್ಟು ಚರ್ಚೆ ಮಾಡಿದ ನಂತರ ಒಂದೊಳ್ಳೆಯ ಚಿತ್ರಕಥೆ ಸಿದ್ಧವಾಯ್ತು’ ಎಂದರು.

ಚಿತ್ರದಲ್ಲಿ ರಕ್ತಪಾತ ಸ್ವಲ್ಪ ಹೆಚ್ಚೇ ಇರುವ ಹಾಗಿದೆ ಎಂಬ ಮಾತನ್ನು ಒಪ್ಪದ ಅವರು, ‘ನಾನು ‘ಸ್ವಾತಿಮುತ್ತು’, ‘ಮೈ ಆಟೋಗ್ರಾಫ್‍’, ‘ಮುಸ್ಸಂಜೆ ಮಾತು’ನಂತಹ ಚಿತ್ರಗಳನ್ನು ಮಾಡಿ ಮೆಸೇಜ್ ಕೊಟ್ಟೆ. ಆದರೆ, ಜನ ಮನೆಗೆ ಕಳಿಸಿದರು. ಆಗಿನ ಕಾಲಕ್ಕೆ ಕತ್ತಿ ಹಿಡದವರು ನಂಬರ್‍ ಒನ್‍ ಆದರು. ಮುಂದೇನು ಎಂದು ಅಪ್ಪ-ಅಮ್ಮನನ್ನು ಕೇಳಿದಾಗ, ‘ಮನೆಯಲ್ಲಿ ಹಾಕುವ ಬಟ್ಟೆ ಮನೆಯಲ್ಲಿರಲಿ, ಹೊರಗೆ ಹಾಕುವ ಬಟ್ಟೆ ಹೊರಗೆ ಇರಲಿ’ ಎಂದು ಹೇಳಿದರು. ಹೊರಗೆ ನಿನ್ನಿಂದ ಏನು ನಿರೀಕ್ಷಿಸುತ್ತಾರೋ ಹಾಗಿರು ಎಂದರು. ಅದರಂತೆ ಚಿತ್ರಗಳನ್ನು ಮಾಡುತ್ತಿದ್ದೇನೆ. ಇಲ್ಲಿ ರಕ್ತವಿದೆ ಎಂಬ ಕಾರಣಕ್ಕೆ ಚಿತ್ರದ ಪೂರ್ತಿ ಅದೇ ಇದೆ ಎಂದುಕೊಳ್ಳಬೇಡಿ. ಇಲ್ಲಿ ರಕ್ತ ಕಾಣಬಹುದು. ಹಾಗಂತ ಅದೇ ಸಂಪೂರ್ಣವಲ್ಲ. ಅದೊಂದು ಭಾಗವಷ್ಟೇ. ಚಿತ್ರ ನೋಡಿ ತೀರ್ಮಾನ ಮಾಡಿ. ಇವತ್ತು ಜನ ವಿದ್ಯಾವಂತರಾಗಿದ್ದಾರೆ. ತಮಗೆ ಏನು ಬೇಕು ಎಂದು ಅವರಿಗೆ ಗೊತ್ತಿದೆ. ಅದಕ್ಕೆ ಪೂರಕವಾಗಿ ಚಿತ್ರ ಕೊಡುವ ಪ್ರಯತ್ನ ಮಾಡಿದ್ದೇವೆ’ ಎಂದರು.

ಇಲ್ಲಿಯವರೆಗೂ ತಾನು ಲಾಂಗ್‍-ಮಚ್ಚು ಹಿಡಿದು ಸಿನಿಮಾ ಮಾಡಲಿಲ್ಲ ಎಂದ ಸುದೀಪ್‍, ‘‘ಮಾಣಿಕ್ಯ’ ಚಿತ್ರವು ‘ನಂ 73 ಶಾಂತಿ ನಿವಾಸ’ ಚಿತ್ರದ ಇನ್ನೊಂದು ರೂಪವಾಗಿತ್ತು. ಆದರೆ, ಅದು ಸಾಫ್ಟ್ ಆಗಿದ್ದರಿಂದ ಓಡಲಿಲ್ಲ. ‘ಮಾಣಿಕ್ಯ’ದಲ್ಲಿ ಚೇಸ್‍, ಫೈಟ್‍, ಗ್ಲಾಮರ್‍ ಎಲ್ಲವೂ ಇತ್ತು. ಒಂದು ಕಥೆಯನ್ನು ಹೇಳುವ ರೀತಿ ಹೇಳಿದ್ದರಿಂದ ಅದರಲ್ಲಿ ನಾನು ಗೆದ್ದೆ. ಒಮ್ಮೊಮ್ಮೆ ಯಾವ ರೀತಿಯ ಸಿನಿಮಾ ಮಾಡಬೇಕು, ಮಾಡಬಾರದು ಎಂಬ ಗೊಂದಲ ನನಗೂ ಆಗುತ್ತದೆ. ಮನರಂಜನೆ ಅನ್ನೋದು ದೇವಸ್ಥಾನದಲ್ಲಿ ಪೂಜೆ ಮಾಡಿದಂತೆ. ನಾವು ಪೂಜೆ ಮಾಡೋಕಷ್ಟೇ ಸಾಧ್ಯ. ದೇವರಿಗೆ ಇಷ್ಟವಾದರೆ ವರ ಕೊಡುತ್ತಾರೆ. ಇಲ್ಲವಾದರೆ ಇಲ್ಲ ಎಂದರು’ ಸುದೀಪ್‍.

ವಿ ಕ್ರಿಯೇಷನ್ಸ್ ಬ್ಯಾನರ್‍ನಡಿ ಕಲೈಪುಲಿ ಎಸ್ ಧಾನು ನಿರ್ಮಿಸಿರುವ ‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್‍ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ನವೆಂಬರ್ 29ರಿಂದ ಸನ್‌ನೆಕ್ಸ್ಟ್‌ನಲ್ಲಿ ‘ಕೃಷ್ಣಂ ಪ್ರಣಯ ಸಖಿ’

Discover more from KannadaScreens

Subscribe now to keep reading and get access to the full archive.

Continue reading