ನನ್ನನ್ನು ‘ಜಿ ಬಾಸ್‍’ ಅಂತ ಕರೆಯಬೇಡಿ; ಅಭಿಮಾನಿಗಳಿಗೆ ಗಣೇಶ್‍ ಮನವಿ

ಚಂದನವನ, ವೀಡಿಯೋ, ಸಂದರ್ಶನ, ಸಿನಿ ಸುದ್ದಿ

‘ಅಭಿಮಾನಿಗಳು ಇತ್ತೀಚೆಗೆ ಸಂಭ್ರಮದಲ್ಲಿ ನನ್ನನ್ನು ‘ಜಿ ಬಾಸ್‍’ ಅಂತ ಕರೆಯುತ್ತಿದ್ದರು. ದಯಮಾಡಿ ನನ್ನನ್ನು ‘ಜಿ ಬಾಸ್‍’ ಅಂತೆಲ್ಲಾ ಕರೆಯಬೇಡಿ. ನಾನು ನಿಮ್ಮ ಮನೆಯ ಹುಡುಗ ಗಣೇಶ್‍. ಪ್ರೀತಿಯಿಂದ ‘ಗೋಲ್ಡನ್ ಸ್ಟಾರ್’ ಎಂಬ ಕರೆಯುತ್ತಿದ್ದೀರಿ. ನನಗೆ ಅಷ್ಟು ಸಾಕು. ‘ಜಿ ಬಾಸ್‍’ ಅಂತ ಕರೆಯಬೇಡಿ’ ಎಂದು ಗಣೇಶ್‍ ಹೇಳಿದ್ದಾರೆ.

ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಗುರುವಾರ ಬಿಡುಗಡೆಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ, ಚಿತ್ರತಂಡದವರು ಪತ್ರಿಕಾಗೋಷ್ಠಿ ಆಯೋಜಿಸಿ ಚಿತ್ರಕ್ಕೆ ಸಿಗುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗಣೇಶ್‍, ‘ಈ ಮೂರು ದಿನಗಳ ಕಾಲ ಪ್ರೇಕ್ಷಕರು ದೊಡ್ಡ ರೀತಿಯಲ್ಲಿ ಬಂದು ಚಿತ್ರ ನೋಡಿ ಇಷ್ಟಪಟ್ಟಿದ್ದು ನಿಜಕ್ಕೂ ಖುಷಿ ಕೊಟ್ಟಿದ್ದು. ಇದು ಆರಂಭ ಅಷ್ಟೇ. ಸೋಮವಾರದ ನಂತರ ಿನ್ನೂ ಜಾಸ್ತಿ ಆಗಬಹುದು ಎಂಬ ನಿರೀಕ್ಷೆ ಜಾಸ್ತಿ ಇದೆ. ಹಾಗಂತ ೇನೋ ಆಗಿಬಿಡುತ್ತದೆ ಎಂಬ ನಂಬಿಕೆ ಅಲ್ಲ. ನಿರ್ದೇಶಕರು 50 ಲಕ್ಷ ಜನ ನೋಡಿದರೆ ಸಾಕು ಎಂದರು. ನನಗೆ 30 ಲಕ್ಷ ಜನ ನೋಡುತ್ತಾರೆ ಎಂಬ ಭರವಸೆ ಇದೆ. ಮಂಡ್ಯದಲ್ಲಿ ಒಂದೇ ಕುಟುಂಬದ 30 ಜನ ಒಟ್ಟಿಗೆ ಬಂದು ಚಿತ್ರ ನೋಡಿದ್ದಾರೆ. ಇದು ನನ್ನ ಮೇಲೆ ಅವರು ಇಟ್ಟ ಪ್ರೀತಿಯನ್ನು ತೋರಿಸುತ್ತದೆ. ಪ್ರತೀ ಸಿನಿಮಾದಲ್ಲೂ ಜನರನ್ನು ಮನರಂಜಿಸುವ ಕೆಲಸ ಮಾಡುತ್ತಿರುತ್ತೀನಿ. ಅದು ಈ ಚಿತ್ರದಲ್ಲಲಿ ದೊಡ್ಡ ಮಟ್ಟದಲ್ಲಿ ಕಂಡಿದೆ. ಅವರೆಲ್ಲರಿಗೂ ಧನ್ಯವಾದ ಹೇಳುತ್ತೀನಿ’ ಎಂದರು.

ತಮಗೆ ಸುಳ್ಳು ಲೆಕ್ಕ ಕೊಡುವುದಕ್ಕೆ ಇಷ್ಟವಿಲ್ಲ, ಸದ್ಯದಲ್ಲೇ ಸರಿಯಾದ ಕಲೆಕ್ಷನ್ ಎಷ್ಟಾಗಿದೆ ಎಂದು ತಿಳಿಸುವುದಾಗಿ ಹೇಳಿದ ಗಣೇಶ, ‘ಜಾಸ್ತಿ ಚಿತ್ರಗಳು ಬಿಡುಗಡೆಗೆ ಇದ್ದರಿಂದ ನಮಗೆ ಹೆಚ್ಚು ಪ್ರದರ್ಶನ ಸಿಗಲಿಲ್ಲ. ಮಲ್ಟಿಪ್ಲೆಕ್ಸ್ಗಳಲ್ಲಿ ನನ್ನ ಚಿತ್ರಕ್ಕೆ 10-12 ಪ್ರದರ್ಶನ ಸಿಗುತ್ತಿತ್ತು. ಆದರೆ, ಜಾಸ್ತಿ ಚಿತ್ರಗಳಿದ್ದರಿಂದ ಐದು ಪ್ರದರ್ಶನಗಳು ಸಿಕ್ಕವು. ಶುಕ್ರವಾರ ಎಂಟಾಯ್ತು. ಶನಿವಾರ 10, ನಾಳೆ 12 ಆಗಬಹುದು. ಅದು ಹಾಗೆಯೇ ಮುಂದುವರೆಯಬೇಕು ಎಂಬುದು ನನ್ನಾಸೆ. ಮೊದಲು ನಾವು ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್‍ ಇವೆಂಟ್‍ ಮಾಡಬೇಕು ಎಂಬ ಯೋಚನೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಯಶಸ್ಸಿನ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಮಾಡುವ ಯೋಚನೆ ಇದೆ. ಆ ದಿನ ಚಿತ್ರ ಎಷ್ಟು ಗಳಿಕೆ ಮಾಡಿದೆ ಎಂದು ಹೇಳುತ್ತಾರೆ. ಸರಿಯಾದ ನಂಬರ್‍ ಆಗಿರುತ್ತದೆ ಅದು. ಸುಮ್ಮನೆ ಸುಳ್ಳು ಹೇಳುವುದಿಲ್ಲ. ಸುಳ್ಳು ಹೇಳ್ತಾ ಹೇಳ್ತಾ, ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿರುತ್ತೇವೆ. ಜೊತೆಗೆ, ನೋಡುಗಿರಗೂ, ಓದುಗರಿಗೂ ಮೋಸ ಮಾಡುತ್ತಿರುತ್ತೇವೆ. ಹಾಗಾಗಿ, ಎರಡು ವಾರಗಳ ನಂತರ ಏನು ಕಲೆಕ್ಷನ್‍ ಆಯಿತು ಎಂದು ಸರಿಯಾದ ನಂಬರ್‍ ಕೊಡುತ್ತೇವೆ. ಅದರ ಜೊತೆಗೆ ಈ ತರಹದ ಯಶಸ್ಸು ಪ್ರತಿ ಜಿಲ್ಲೆ, ತಾಲ್ಲೂಕಿಗೆ ಹೋಗಿ ಧನ್ಯವಾದ ಹೇಳಿ ಬರುತ್ತೇವೆ. ಮೊದಲಿಗೆ ನಾನು ಯಾವತ್ತೂ ಹೀಗೆ ಟೂರ್ ಮಾಡಿದವನಲ್ಲ’ ಎಂದರು.

ಇನ್ನು, ಈ ಚಿತ್ರಕ್ಕೆ ಅವರು ನರ್ತಕಿ ಚಿತ್ರಮಂದಿರಕ್ಕೆ ಬಹಳ ವರ್ಷಗಳ ನಂತರ ಹೋಗಿದ್ದರು. ‘ನಾನು ಚಿತ್ರಮಂದಿರಗಳಿಗೂ ಹೋದವನಲ್ಲ. ಸುಮಾರು 10 ವರ್ಷವೇ ಆಗಿತ್ತು ಚಿತ್ರಮಂದಿರಕ್ಕೆ ಹೋಗಿ. ಈ ಚಿತ್ರದ ಮೇಲಿನ ನಂಬಿಕೆ ಮತ್ತು ಪ್ರೀತಿ ನೋಡಿ ಚಿತ್ರಮಂದಿರಕ್ಕೆ ಹೋದೆ. ಮೇಲಾಗಿ ಏಳೆಂಟು ವರ್ಷಗಳಿಂದ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿರಲಿಲ್ಲ. ಹಾಗಾಗಿ, ಸಿನಿಮಾಗೆ ಬಂದವರನ್ನು ನೋಡಿ, ಖುಷಿ ಹಂಚಿಕೊಳ್ಳಬೇಕು ಎಂದು ನರ್ತಕಿ ಚಿತ್ರಮಂದಿರಕ್ಕೆ ಹೋದೆ. ಆ ಖುಷಿಯಲ್ಲಿ ರಂಗಾಯಣ ರಘು ತರಹ ಡ್ಯಾನ್ಸ್ ಮಾಡಿದೆ. ಮುಂದಿನ ವಾರದಿಂದ ಕರ್ನಾಟಕದಾದ್ಯಂತ ಟ್ರಿಪ್‍ ಮಾಡುವ ಯೋಚನೆ ಇದೆ. ಅದರ ನಂತರ ಒಂದು ದೊಡ್ಡ ಕಾರ್ಯಕ್ರಮ ಮಾಡುತ್ತೇವೆ’ ಎಂದರು.

ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ, ‘ನನ್ನ ಪ್ರಕಾರ ಸೋಮವಾರದ ನಂತರ ಟ್ರೆಂಡ್‍ ಗೊತ್ತಾಗುತ್ತದೆ. ಆ್ಯಕ್ಷನ್‍ ಚಿತ್ರಗಳಿಗೂ, ಫ್ಯಾಮಿಲಿ ಚಿತ್ರಗಳಿಗೂ ವ್ಯತ್ಯಾಸವಿದೆ. ಮಹಿಳೆಯರು ಚಿತ್ರಮಂದಿರಗಳಿಗೆ ಬಂದರೆ ಚಿತ್ರ ಯಶಸ್ವಿ ಅಂತಲೇ ಅರ್ಥ. ಮಹಿಳೆಯರು ಇನ್ನೂ ಸಂಪೂರ್ಣವಾಗಿ ಬಂದಿಲ್ಲ. ಹಾಗಾಗಿ, ಸೋಮವಾರದಿಂದ ನಿಜವಾದ ಕಲೆಕ್ಷನ್‍ ಗೊತ್ತಾಗುತ್ತದೆ. ಈ ಮೂರು ದಿನಗಳ ಕಾಲ ಕಲೆಕ್ಷನ್‍ ನಿಜಕ್ಕೂ ಚೆನ್ನಾಗಿದೆ. ಇದು ಆರಂಭ ಅಷ್ಟೇ’ ಎಂದರು.

ಈ ಸಂದರ್ಭದಲ್ಲಿ ನಿರ್ಮಾಪಕ ಪ್ರಶಾಂತ್‍ ರುದ್ರಪ್ಪ, ರಂಗಾಯಣ ರಘು, ಶರಣ್ಯ ಶೆಟ್ಟಿ ಮುಂತಾದವರು ಹಾಜರಿದ್ದರು.

ನಾನು ಅವರ ಋಣದಲ್ಲಿದ್ದೇನೆ, ಅವರು ನನಗೆ ಸ್ಫೂರ್ತಿ: ರಾಜ್‍ ಶೆಟ್ಟಿ

Discover more from KannadaScreens

Subscribe now to keep reading and get access to the full archive.

Continue reading