ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವು ಈಗಾಗಲೇ ತನ್ನ ಹಾಡುಗಳಿಂದ ಗುರುತಿಸಿಕೊಂಡಿದ್ದು, ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ ಎನ್ನುವುದರ ಜೊತೆಗೆ, ಇದು ಗಣೇಶ್ ಲೆವೆಲ್‍ನ ಚಿತ್ರವಲ್ಲ ಎನ್ನುತ್ತಾರೆ ಶ್ರೀನಿವಾಸ ರಾಜು.
‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಕುರಿತು ಮಾತನಾಡುವ ಅವರು, ‘ಇದಕ್ಕೂ ಮೊದಲು ಇನ್ನೊಂದು ಕಥೆ ಬರೆದಿದ್ದೆ. ಆದರೆ, ಅದನ್ನು ಮಾಡುವುದ ಕಷ್ಟ ಅಂತನಿಸಿತ್ತು. ಈ ಮಧ್ಯೆ, ಒಂದು ಫ್ಯಾಮಿಲಿ ಸಿನಿಮಾ ಮಾಡುವ ಆಸೆ ಇತ್ತು. ಮೂರ್ನಾಲ್ಕು ವರ್ಷಗಳಿಂದ ಜನ ಕ್ರೈಮ್ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸಂದರ್ಭದಲ್ಲಿ ಒಂದು ಲವ್‍ಸ್ಟೋರಿ ಮಾಡಬೇಕು ಎಂದನಿಸಿತ್ತು. ಪ್ರಶಾಂತ್ ಓಕೆ ಎಂದರು. ಫ್ಯಾಮಿಲಿ ಸಿನಿಮಾ ಎಂದರೆ ಅದಕ್ಕೆ ಗಣೇಶ್ ರಾಯಭಾರಿ. ನನಗೆ ಮಾತಿನಲ್ಲಿ ಕಥೆ ಹೇಳೋಕೆ ಬರಲ್ಲ. ಇಡೀ ಕಥೆ ಹೇಳೋಕೆ ಬರಲ್ಲ. ಆದರೂ ಹೋಗಿ ಗಣೇಶ್ ಅವರಿಗೆ ಹೇಳಿದೆ. ಅವರು ಒಪ್ಪಿದರು. ಬಹುಶಃ ಅವರು ಒಪ್ಪದಿದ್ದರೆ ಈ ಸಿನಿಮಾ ಮಾಡುತ್ತಿರಲಿಲ್ಲ. ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೆ. ಈ ಚಿತ್ರದಲ್ಲಿ ಅವರು ತೊಡಗಿಸಿಕೊಂಡ ರೀತಿ ಹೇಳೋಕೆ ಕಷ್ಟ. ಅವರು ತಮ್ಮ ಅಭಿನಯದಿಂದ ಕಥೆಯನ್ನು ಇನ್ನೊಂದು ಲೆವೆಲ್‍ಗೆ ತೆಗೆದುಕೊಂಡು ಹೋದರು. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಆದರೆ, ಚಿತ್ರ ಚೆನ್ನಾಗಿ ಬರುವುದಕ್ಕೆ ಕಾರಣ ಗಣೇಶ್ ಮತ್ತು ಬೇರೆ ಕಲಾವಿದರು’ ಎನ್ನುತ್ತಾರೆ.

ಶ್ರೀನಿವಾಸ ರಾಜು ಕ್ರೈಮ್ ಚಿತ್ರಗಳಿಗೆ ಜನಪ್ರಿಯರಾದವರು. ‘ದಂಡುಪಾಳ್ಯ’ ಸರಣಿಯ ಚಿತ್ರಗಳನ್ನು ಮಾಡಿದವರು. ಅದರಿಂದ ಆಚೆ ಬರುವುದಕ್ಕೆ ಈ ಚಿತ್ರ ಮಾಡಿದ್ದಾಗಿ ಅವರು ಹೇಳುತ್ತಾರೆ. ‘ನಾನು ಬರೀ ಕ್ರೈಮ್ ಅಷ್ಟೇ ಅಲ್ಲ, ಎಲ್ಲಾ ರೀತಿಯ ಸಿನಿಮಾಗಳನ್ನು ಮಾಡಿದ್ದೀನಿ. ಆದರೆ, ಅದು ಜನರಿಗೆ ಇಷ್ಟವಾಗಲಿಲ್ಲ ಎಂದರೆ ಮರೆತು ಹೋಗುತ್ತದೆ. ‘ದಂಡುಪಾಳ್ಯ’ ಚಿತ್ರಗಳು ಯಶಸ್ವಿಯಾಗಿದ್ದರಿಂದ, ನಾನು ಆ ಚಿತ್ರಗಳ ನಿರ್ದೇಶಕ ಎಂದು ಜನರ ಮನಸ್ಸಿನಲ್ಲಿ ಬಲವಾಗಿ ಕೂತಿದೆ. ಅದರಿಂದ ಆಚೆ ಬರಬೇಕು ಎಂದು ಈ ಸಿನಿಮಾ ಮಾಡಿದೆ. ಈ ಸಿನಿಮಾದಲ್ಲಿ ಗಣೇಶ್ ಎಂಥಾ ನಟ ಎಂಬುದು ಇನ್ನೊಮ್ಮೆ ಗೊತ್ತಾಗುತ್ತದೆ. ಚಿತ್ರೀಕರಣ ಪ್ರಾರಂಭವಾಗಿ ಮೂರ್ನಾಲ್ಕು ದಿನಗಳಲ್ಲೇ, ಈ ಕಥೆ ಅವರ ಲೆವೆಲ್‍ಗೆ ಇಲ್ಲ ಎಂಬುದು ಸ್ಪಷ್ಟವಾಯಿತು. ಅವರನ್ನು ನಾನು ಸುಮ್ಮನೆ ಹೊಗಳುತ್ತಿಲ್ಲ. ಹೃದಯದಿಂದ ಹೇಳುತ್ತಿದ್ದೇನೆ. 10 ದಿನಗಳ ನಂತರ, ಇದು ಅವರ ಲೆವೆಲ್‍ನ ಚಿತ್ರವಲ್ಲ ಎಂದು ಸುಮ್ಮನಾಗಿಬಿಟ್ಟೆ. ಆಗಲೇ ಅವರ ಜೊತೆಗೆ ಇನ್ನೊಂದು ಅವರ ಲೆವೆಲ್‍ನ ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ’ ಎನ್ನುತ್ತಾರೆ.
‘ಕೃಷ್ಣಂ ಪ್ರಣಯ ಸಖಿ’ ಚಿತ್ರವಲ್ಲದೆ ಅವರು ಗಣೇಶ್‍ಗಾಗಿ ಇನ್ನೊಂದು ಸಿನಿಮಾ ಮಾಡಿಕೊಂಡಿದ್ದಾರಂತೆ. ಅದು ಮ್ಯಾಜಿಕಲ್ ಚಿತ್ರವಾಗುತ್ತದೆ ಎನ್ನುವ ಶ್ರೀನಿವಾಸ ರಾಜು, ‘ಒಂದು ಕಥೆ ಮಾಡಿಕೊಂಡಿದ್ದೇನೆ. ಇಡೀ ಜಗತ್ತು ಅವರತ್ತ ತಿರುಗಿನೋಡುವಂತಹ ಕಥೆ ಬರೆದಿದ್ದೇನೆ. ಅವರ ಜೊತೆಗೇ ಇನ್ನೊಂದು ಚಿತ್ರ ಮಾಡಬೇಕು. ಈ ಚಿತ್ರದಲ್ಲಿ ಒಬ್ಬ ನಟನಾಗಿ ಅವರು ಮೀರಿಸಿದ್ದಾರೆ. ಆ ಚಿತ್ರದಲ್ಲಿ ನಾನು ನಿರ್ದೇಶಕನಾಗಿ ಮೀರಿಸಬೇಕು. ಅದು ಅವರ ಲೆವೆಲ್‍ನ ಸಿನಿಮಾ. ಅದು ಯಾವ ಜಾನರ್ ಎನ್ನುವುದಕ್ಕಿಂತ, ಅವರನ್ನು ಪೂರ್ತಿ ಅನ್ವೇಷಿಸುವ ಚಿತ್ರ. ಅದೊಂದು ಮ್ಯಾಜಿಕಲ್ ಚಿತ್ರವಾಗುತ್ತದೆ’ ಎನ್ನುತ್ತಾರೆ.


