ಇಲ್ಲಿ ನಾಯಕ, ನಾಯಕಿ ಇಬ್ಬರ ಹೆಸರೂ ‘ಮೇಘ’

ಚಂದನವನ, ಸಿನಿ ಸುದ್ದಿ

‘ಮೇಘ’ ಎಂಬ ಹೆಸರು ಕೇಳುತ್ತಿದ್ದಂತೆಯೇ, ಇದೊಂದು ನಾಯಕಿ ಪ್ರಧಾನ ಚಿತ್ರ ಎಂದನಿಸಬಹುದು. ಆದರೆ, ನಿರ್ದೇಶಕ ಚರಣ್‍ ತಮ್ಮ ಹೊಸ ‘ಮೇಘ’ದಲ್ಲೊಂದು ಟ್ವಿಸ್ಟ್ ಇಟ್ಟಿದ್ದಾರೆ. ಇದೊಂದು ನಾಯಕಿ ಪ್ರಧಾನ ಚಿತ್ರವಲ್ಲವಂತೆ. ನಾಯಕ-ನಾಯಕಿ ಇಬ್ಬರಿಗೂ ಸಮನಾದ ಅವಕಾಶ ಇರುವುದರಿಂದ, ಇಬ್ಬರಿಗೂ ‘ಮೇಘ’ ಎಂಬ ಹೆಸರನ್ನಿಟ್ಟಿದ್ದಾರೆ. ಆ ಮೂಲಕ, ಈ ‘ಮೇಘ’ ಯಾವ ಮೇಘದ ಸುತ್ತ ಸುತ್ತುತ್ತದೆ ಎಂಬ ಸಸ್ಪೆನ್ಸ್ ಇಟ್ಟಿದ್ದಾರೆ.

‘ಕನ್ನಡತಿ’ ಖ್ಯಾತಿಯ ಕಿರಣ್‍ ರಾಜ್‍ ನಟನೆಯ ಚಿತ್ರವೇ ಈ ‘ಮೇಘ’. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.  ಡಾ.ವಿ.ನಾಗೇಂದ್ರ ಪ್ರಸಾದ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವ ಚರಣ್‍, ನಾಗೇಂದ್ರ ಪ್ರಸಾದ್‍ ಅವರ ಗರಡಿಯವರು. ಅದಕ್ಕೂ ಮೊದಲು ಐಟಿ ಉದ್ಯೋಗಿಯಾಗಿದ್ದರಂತೆ. ಕೋವಿಡ್‍ ನಂತರ ಕೆಲಸ ಬಿಟ್ಟು ಪ್ರಸಾದ್‍ ಬಳಿ ಸಿನಿಮಾ ಕಲಿಯಲು ಮುಂದಾದರಂತೆ. ಈಗ ಅಲ್ಲಿ ಕಲಿತಿದ್ದನ್ನೆಲ್ಲಾ ಸೇರಿಸಿ ಅವರು ‘ಮೇಘ’ ಚಿತ್ರ ಮಾಡಿದ್ದಾರೆ.

‘’ಮೇಘ’ ನನ್ನ ಮೊದಲ ನಿರ್ದೇಶನದ ಚಿತ್ರ. ಮೇಘ”ಗಳು ಆಕಾಶದಲ್ಲಿ ಯಾವಾಗಲೂ ಒಟ್ಟಾಗೆ ಚಲಿಸುತ್ತದೆ. ಆದರೆ, ಮಳೆಯನ್ನು ಎಲ್ಲೋ ಸುರಿಸುತ್ತದೆ. ಇದನ್ನೇ ಇಟ್ಟುಕೊಂಡು ಪ್ರೇಮ ಕಥೆ ಸಿದ್ದಮಾಡಿಕೊಂಡೆ. ನಮ್ಮ ಸಿನಿಮಾದಲ್ಲಿ ಮೇಘ ಎಂದರೆ ಪ್ರೀತಿ ಅಂತ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಜೋಯಲ್ ಸಕ್ಕರಿ ಸಂಗೀತ ಸಂಯೋಜಿಸಿರುವ ಐದು ಸುಮಧುರ ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳನ್ನು ಗುರುಗಳಾದ ನಾಗೇಂದ್ರ ಪ್ರಸಾದ್ ಅವರು, ಬಾಕಿ ಮೂರು ಹಾಡುಗಳನ್ನು ನಾನು ಬರೆದಿದ್ದೇನೆ. ಯತೀಶ್ ಹೆಚ್ ಆರ್ ಅವರು ನಿರ್ಮಾಣ ಮಾಡಿದ್ದಾರೆ.  ಚಿತ್ರ ಬಿಡುಗಡೆಯ ಹಂತದಲ್ಲಿದೆ’ ಎಂದು ಮಾಹಿತಿ ಕೊಟ್ಟರು.

ಕಿರಣ್‍ ರಾಜ್‍ ಇದುವರೆಗೂ ಮಾಡದಿರುವ ಒಂದು ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದಾರಂತೆ. ‘ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ‘ಮೇಘ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಮ ಕಥಾನಕವಾಗಿದ್ದರೂ ಚಿತ್ರದ ಎಮೋಷನ್  ಎಲ್ಲರ ಗಮನ ಸೆಳೆಯುತ್ತದೆ. ನಾನು ಈ ಚಿತ್ರದ ಕಥೆ ಕೇಳಿ, ನನ್ನ ಅಪ್ಪನಿಗೆ ಬುಲೆಟ್ ಕೊಡಿಸಿದ್ದೇನೆ. ಈಗಿನ ಪೀಳಿಗೆಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ’ ಎಂದರು ಕಿರಣ್ ರಾಜ್.

‘ಮೇಘ’ ಚಿತ್ರಕ್ಕೆ ಗೌತಮ್‍ ನಾಯಕ್‍ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ.

ಈ ಕೊಂಡಾಣ ಎಲ್ಲಿದೆ? ದೇವಿಪ್ರಸಾದ್‍ ಶೆಟ್ರು ಹೇಳ್ತಾರೆ ಕೇಳಿ …

Latest Posts

Discover more from KannadaScreens

Subscribe now to keep reading and get access to the full archive.

Continue reading