ಈ ಕೊಂಡಾಣ ಎಲ್ಲಿದೆ? ದೇವಿಪ್ರಸಾದ್‍ ಶೆಟ್ರು ಹೇಳ್ತಾರೆ ಕೇಳಿ …

ಚಂದನವನ, ಸಂದರ್ಶನ, ಸಿನಿ ಸುದ್ದಿ

ವಿಜಯ್‍ ರಾಘವೇಂದ್ರ ಮತ್ತು ಭಾವನಾ ಮೆನನ್ ಅಭಿನಯದ ‘ಕೇಸ್‍ ಆಫ್ ಕೊಂಡಾಣ’ ಚಿತ್ರದ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಇದೆ. ಚಿತ್ರವು ಜನವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಹಿಂದೆ ‘ಸೀತಾರಾಂ ಬಿನಾಯ್‍’ ನಿರ್ದೇಶಿಸಿದ್ದ ದೇವಿಪ್ರಸಾದ್‍ ಶೆಟ್ಟಿ ಈ ಚಿತ್ರ ನಿರ್ದೇಶಿಸಿರುವುದು ಗೊತ್ತಿರಬಹುದು. ಆ ಚಿತ್ರದಂತೆ ಇದೂ ಒಂದು ಪೊಲೀಸ್‍ ತನಿಖಾ ಚಿತ್ರ ಎಂಬುದು ಇಷ್ಟರಲ್ಲಿ ಟ್ರೇಲರ್ ನೋಡಿ ಅರ್ಥವಾಗಿರಬಹುದು. ಆದರೆ, ಈ ಕೊಂಡಾಣ ಎಂದರೇನು? ಅದೆಲ್ಲಿದೆ? ಎಂಬ ಪ್ರಶ್ನೆಗಳು ಬರುವುದು ಸಹಜ.

ಈ ಕುರಿತು ಮಾತನಾಡುವ ನಿರ್ದೇಶಕ ಮತ್ತು ಚಿತ್ರಕ್ಕೆ ಕಥೆಯನ್ನೂ ಬರೆದಿರುವ ದೇವಿಪ್ರಸಾದ್‍ ಶೆಟ್ಟಿ, ‘ಕೊಂಡಾಣ ಎನ್ನುವುದು ಒಂದು ಜಾಗದ ಕಥೆ. ಬೆಂಗಳೂರಿನ ಹೊರವಲಯದಲ್ಲಿರುವ ಯಾವುದೋ ಒಂದು ಪ್ರದೇಶ ಅದು. ಅಲ್ಲಿ ಕಥೆ ನಡೆಯುವುದರಿಂದ ಚಿತ್ರಕ್ಕೆ ‘ಕೇಸ್‍ ಆಫ್‍ ಕೊಂಡಾಣ’ ಎಂಬ ಹೆಸರಿಟ್ಟಿದ್ದೇವೆ. ಇಲ್ಲಿ ಒಂದು ಕಥೆ ಅಥವಾ ಪಾತ್ರವಿಲ್ಲ. ಹಲವು ಪಾತ್ರಗಳು ಮತ್ತು ಎಳೆಗಳಿವೆ. ಅವನ್ನೆಲ್ಲ ಸೇರಿಸಿ ಈ ಕಥೆ ಮಾಡಿದ್ದೇವೆ. ಇದೊಂದು ಹೈಪರ್‍ಲಿಂಕ್‍ ಚಿತ್ರ. ಮೊದಲ ಒಂದಿಷ್ಟು ನಿಮಿಷಗಳು ಪಾತ್ರದ ಪರಿಚಯಕ್ಕೆ ಸೀಮಿತವಾಗಿದೆ. ಚಿತ್ರ ಶುರುವಾಗುವುದು 40ನೇ ನಿಮಿಷದ ನಂತರ. ಬರೆಯುತ್ತಾ ಬರೆಯುತ್ತಾ ಸಾಕಷ್ಟು ಬದಲಾಗಿದೆ. ಮೊದಲು ಇಡೀ ಕಥೆ ಬೆಳಿಗ್ಗೆ ನಡೆಯಬೇಕಿತ್ತು. ಆದರೆ, ಕ್ರಮೇಣ ಆಲೋಚನೆ ಬದಲಾಗಿ ಒಂದು ರಾತ್ರಿಯ ಕಥೆಯಾಗಿದೆ. ಸಂಜೆ ಪ್ರಾರಂಭವಾಗಿ ಬೆಳಿಗ್ಗೆ ಮುಕ್ತಾಯವಾಗುತ್ತದೆ’ ಎನ್ನುತ್ತಾರೆ.

‘ಕೇಸ್ ಆಫ್ ಕೊಂಡಾಣ’ ಚಿತ್ರದ ಶೇ.90ರಷ್ಟು ಚಿತ್ರೀಕರಣ ರಾತ್ರಿಯಲ್ಲೇ ಆಗಿದೆ. ಇದೊಂದು ಇನ್ವೆಸ್ಟಿಗೇಟಿವ್‍ ಥ್ರಿಲ್ಲರ್‍ ಚಿತ್ರವಾಗಿದ್ದು, ದೇವಿಪ್ರಸಾದ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಸಾತ್ವಿಕ್‍ ಹೆಬ್ಬಾರ್‍ ಜೊತೆಗೆ ಸೇರಿ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಹಿರಿಯ ಪತ್ರಕರ್ತ ಮತ್ತು ಲೇಖಕ ಜೋಗಿ ಚಿತ್ರದ ಸಂಭಾಷಣೆಗಳನ್ನು ರಚಿಸಿದ್ದಾರೆ.

‘ಕೇಸ್‍ ಆಫ್‍ ಕೊಂಡಾಣ’ ಚಿತ್ರದಲ್ಲಿ ಖುಷಿ ರವಿ ಮತ್ತು ರಂಗಾಯಣ ರಘು ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ.

‘ಕಬ್ಜ’ ಚಿತ್ರದಿಂದ 20 ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ: ಚಂದ್ರು

Discover more from KannadaScreens

Subscribe now to keep reading and get access to the full archive.

Continue reading