ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಶಾಂಭವಿ’, ‘ಕನ್ಯಾದಾನ’, ‘ಅಣ್ಣ-ತಂಗಿ’ ಮುಂತಾದ ಧಾರಾವಾಹಿಗಳು ಈಗಾಗಲೇ ಜನಪ್ರಿಯವಾಗಿವೆ. ಈಗ ಉದಯ ಟಿವಿಯಲ್ಲಿ ಇನ್ನೂ ಒಂದು ಹೊಸ ಧಾರಾವಾಹಿ ಪ್ರಾರಂಭವಾಗಿದೆ. ಅದೇ ‘ಪ್ರೀತಿಯ ಅರಸಿ’.
ಈ ಧಾರಾವಾಹಿಯನ್ನು ಶ್ರುತಿ ನಾಯ್ಡು ನಿರ್ಮಿಸುತ್ತಿದ್ದು, ರಮೇಶ್ ಇಂದಿರಾ ನಿರ್ದೇಶಿಸುತ್ತಿದ್ದಾರೆ. ಸಾಮಾನ್ಯವಾಗಿ ಗಂಡು ಎಂದರೆ ಹೊರ ಪ್ರಪಂಚದಲ್ಲಿ ದುಡಿಯುವುದು, ಹೆಣ್ಣು ಎಂದರೆ ಮನೆ ನಿಭಾಯಿಸುವ ಜವಾಬ್ದಾರಿ ಹೊತ್ತವಳು ಎನ್ನುವುದು ಲೋಕಾರೂಢಿ. ಆದರೆ, ಇಲ್ಲಿ ನಾಯಕಿ ಅಂಜಲಿ ಮತ್ತು ನಾಯಕ ರಾಕಿ ಇಬ್ಬರೂ ವಿಭಿನ್ನ ಯೋಚನಾಲಹರಿ ಉಳ್ಳುವರು. ತನ್ನ ಉದ್ಯೋಗದಲ್ಲಿ ಅತ್ತ್ಯುನತ ಮಟ್ಟಕ್ಕೇರುವುದು ಅಂಜಲಿಯ ಕನಸಾದರೆ, ಕುಟುಂಬವೇ ಸರ್ವಸ್ವ, ಮನೆಯೇ ಎಲ್ಲಕ್ಕಿಂತ ಮುಖ್ಯ ಅನ್ನೋದು ರಾಕಿಯ ಧೃಡ ನಿರ್ಧಾರ. ಪ್ರೀತಿಯನ್ನು ಅರಸುತ್ತಿರುವ ಅಂಜಲಿ, ರಾಕಿಯ ಪ್ರೀತಿಯ ಅರಸಿಯಾಗುವಳೇ? ಈ ಅಪೂರ್ಣ ಮನಸ್ಸುಗಳನ್ನು ಬೆಸೆಯುವ ಅಪರೂಪದ ಪ್ರೇಮ ಕಥೆ ‘ಪ್ರೀತಿಯ ಅರಸಿ’.
ಈ ಪ್ರೇಮ ಕಥೆಯಲ್ಲಿ ಅಂಜಲಿಯಾಗಿ ರಕ್ಷಾ ನಿಂಬರ್ಗಿ, ರಾಕಿಯಾಗಿ ಪೃಥ್ವಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಇಬ್ಬರನ್ನು ಒಂದು ಮಾಡುವ ಜವಾಬ್ದಾರಿಯನ್ನ ಇವರ ಅಜ್ಜಿಯಂದಿರಾಗಿ ಗಿರಿಜಾ ಲೋಕೇಶ್ ಮತ್ತು ಪದ್ಮಾ ವಾಸಂತಿ ನಿಭಾಯಿಸಿದರೆ, ಅಪ್ಪನಾಗಿ ಜೈಜಗದೀಶ್ ಅಭಿನಯಿಸಿದ್ದಾರೆ. ಇವರೊಂದಿಗೆ ಮಿಥುನ್ ತೇಜಸ್ವಿ, ನಾಗೇಂದ್ರ ಅರಸ್ ಮತ್ತು ರಾಧಾ ಜೈರಾಮ್ ನಟಿಸುತ್ತಿದ್ದಾರೆ.
ಆಕ್ಟೋಬರ್ ೧೬ರಿಂದ ಪ್ರತಿದಿನ ರಾತ್ರಿ ೯ಕ್ಕೆ ‘ಪ್ರೀತಿಯ ಅರಸಿ’ ಧಾರಾವಾಹಿಯು ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
https://indiascreens.in/sudeep-questions-thukali-santhosh-about-his-behaviour/


