‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೊದಲ ವಾರಾಂತ್ಯದ ಎಪಿಸೋಡ್ ಆದ ‘ಕಿಚ್ಚನ ಪಂಚಾಯ್ತಿ’ ಮುಗಿದಿದೆ. ಅಷ್ಟೇ ಅಲ್ಲ, ಈ ಕಂತಿನಲ್ಲಿ ವಾರದ ಮೊದಲ ಸ್ಪರ್ಧಿ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ. ಈ ಸೀಸನ್‍ನಿಂದ ಹೊರನಡೆದ ಮೊದಲ ಸ್ಪರ್ಧಿ ಎಂದರೆ ಅದು ಸ್ನೇಕ್ ಶ್ಯಾಮ್.
ಈ ಬಾರಿಯ ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು ಮತ್ತು ಡ್ರೋಣ್ ಪ್ರತಾಪ್ ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್ ಆಗಿದ್ದು ನೀತು ಅವರು. ನಂತರ ಒಬ್ಬೊಬ್ಬರೇ ಸೇಫ್ ಆಗಿ ಕೊನೆಗೆ ಸ್ನೇಕ್ ಶ್ಯಾಮ್ ಮನೆಯಿಂದ ಹೊರಬರುವಂತಾಯಿತು.
‘ಬಿಗ್ ಬಾಸ್’ ಮನೆಗೆ ಹೋಗುವಾಗ ಪ್ರಬಲ ಸ್ಪರ್ಧಿಯಂತೆ ಕಂಡಿದ್ದ ಶ್ಯಾಮ್, ಆ ನಂತರ ಮೊದಲ ವಾರ ಸದ್ದು ಮಾಡಿದ್ದು ಕಡಿಮೆಯೇ. ಬಹಳಷ್ಟು ಸ್ಪರ್ಧಿಗಳು ಸ್ನೇಕ್ ಶ್ಯಾಮ್ ಅವರನ್ನು ಹುರಿದುಂಬಿಸುವುದಕ್ಕೆ ಪ್ರಯತ್ನಿಸಿದರೂ, ಶ್ಯಾಮ್ ಯಾಕೋ ಡಲ್ ಆಗಿದ್ದರು. ಕೊನೆಗೆ ಭಾನುವಾರದ ಎಪಿಸೋಡ್‌ನಲ್ಲಿ ಉಳಿದ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಶ್ಯಾಮ್ ಅವರೇ ಹೊರಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು. ಅದರಂಗತೆ ಅವರು ಮೊದಲ ವಾರವೇ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಿದ್ದಿದ್ದಾರೆ.
ನಂತರ ಮಾತನಾಡಿರುವ ಶ್ಯಾಮ್, ‘ನನಗೆ ಇಲ್ಲಿ ಸಾಕಷ್ಟು ಸ್ನೇಹಿತರು ಇದ್ದರು. ಆದ್ರೆ ಇಲ್ಲಿ ನನಗೆ ಆರೋಗ್ಯ ಕೈಕೊಟ್ಟಿತು. ಹಾಗೆಯೇ ಪ್ರಾಣಿಗಳ ನೆನಪು ತುಂಬ ಕಾಡುತ್ತಿತ್ತು. ಅದೇ ಕಾರಣಕ್ಕೆ ನನಗೆ ಇಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ 10ನೇ ಸೀಸನ್ ಕಲರ್ಸ್ ಪ್ರತಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದ್ದು, ಇಡೀ ದಿನದ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು.
https://indiascreens.in/sudeep-questions-thukali-santhosh-about-his-behaviour/


