‘ಬಿಗ್ ಬಾಸ್ ಕನ್ನಡ – ಸೀಸನ್ 10’ಗೆ ಹೋಗಿದ್ದ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ಈಗ ಆ ಮನೆಯಿಂದ ವಾಪಸ್ಸಾಗಿದ್ದಾರೆ. ಇಷ್ಟಕ್ಕೂ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇಕೆ ಎಂಬ ಪ್ರಶ್ನೆಗೆ, ಯುವಕರಿಗೆ ಸಂದೇಶ ಕೊಡುವುದಕ್ಕೆ ಎಂಬ ಉತ್ತರವನ್ನು ಅವರು ನೀಡಿದ್ದಾರೆ.
ಭಾನುವಾರ ರಾತ್ರಿಯಷ್ಟೇ ಕಾರ್ಯಕ್ರಮದ ನಿರೂಪಕರಾದ ಸುದೀಪ್, 17 ಸ್ಪರ್ಧಿಗಳನ್ನು ಮನೆಗೆ ಕಳುಹಿಸಿದ್ದರು. ಸೋಮವಾರ, 18ನೇ ಸ್ಪರ್ಧಿಯಾಗಿ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದರು. ಅವರು ಮನೆಗೆ ಅತಿಥಿಯಾಗಿ ಹೋಗಿದ್ದರೋ ಅಥವಾ ಸ್ಪರ್ಧಿಯಾಗಿ ಹೋಗಿದ್ದರೋ ಎಂಬ ವಿಷಯದಲ್ಲಿ ಗೊಂದಲವಿತ್ತು.
ಅದಕ್ಕೆ ಸರಿಯಾಗಿ, ಪ್ರದೀಪ್ ಈಶ್ವರ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಹಿನ್ನೆಲೆಯಲ್ಲೇ ವಿವಾದ ಸಹ ಪ್ರಾರಂಭವಾಗಿತ್ತು. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರೊಬ್ಬರು, ತಮ್ಮ ಜವಾಬ್ದಾರಿಯನ್ನು ಮರೆತು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬಂದಿತ್ತು. ಅಷ್ಟೇ ಅಲ್ಲ, ಅವರನ್ನು ತಮ್ಮ ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಸಭಾಪತಿಗಳಿಗೆ ದೂರನ್ನೂ ನೀಡಲಾಗಿತ್ತು.
ಆದರೆ, ತಾನು ‘ಬಿಗ್ ಬಾಸ್’ ಮನೆಗೆ ಸ್ಪರ್ಧಿಯಾಗಿ ಹೋಗಿಲ್ಲ, ಅತಿಥಿಯಾಗಿ ಹೋಗಿದ್ದೆ ಎಂದು ಪ್ರದೀಪ್ ಈಶ್ವರ್ ಹೇಳಿಕೊಂಡಿದ್ದಾರೆ. ವಾಪಸ್ಸು ಮರಳಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ತಾವು ಈ ಕಾರ್ಯಕ್ರಮಕ್ಕೆ ಹೋಗಿದ್ದೇಕೆ ಎಂದು ವಿವರಿಸಿದ್ದಾರೆ.
‘’ಬಿಗ್ ಬಾಸ್’ ಎನ್ನುವುದು ದೊಡ್ಡ ವೇದಿಕೆ. ಅದಕ್ಕೆ ಸಾಕಷ್ಟು ವೀಕ್ಷಕರಿದ್ದಾರೆ. ಕಾರ್ಯಕ್ರಮದ ತಂಡದವರು ಎರಡ್ಮೂರು ತಾಸು ಅತಿಥಿಯಾಗಿ ಬನ್ನಿ ಎಂದು ಕರೆದರು. ಯಾರು ಕರೆದರೂ ಸಂದರ್ಶನ ಕೊಡುತ್ತೀನಿ. ಅದೊಂದು ಸೌಜನ್ಯ. ಅದೇ ರೀತಿ 08:15ರ ಹೊತ್ತಿಗೆ ಹೋಗಿ 11:30ಕ್ಕೆ ಹೊರಗೆ ಬಂದೆ. ಯುವಕರಿಗೆ ಒಂದು ಸಂದೇಶ ಹೇಳಬೇಕಿತ್ತು. ಅಪ್ಪ-ಅಮ್ಮನ ಮಹತ್ವ ಹೇಳಬೇಕಿತ್ತು. ಯುವಕರನ್ನು ಮೋಟಿವೇಟ್ ಮಾಡಬೇಕಿತ್ತು. ನಾನು ನನ್ನ ಯೂಟ್ಯೂಬ್ ಚಾನಲ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಈ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿ ಈ ವೇದಿಕೆಯಲ್ಲೂ ಅದನ್ನೇ ಮಾಡಿದ್ದೇನೆ. ಮಿಕ್ಕಂತೆ ಏನೂ ಇಲ್ಲ. ಅಲ್ಲಿ ಹೋಗಿ ನಾನು ಒಬ್ಬ ಸ್ಪರ್ಧಿ ಎಂದು ಪ್ರಾಂಕ್ ಮಾಡಬೇಕಿತ್ತು, ಮಾಡಿದೆ. ಒಂದು ಎಪಿಸೋಡ್ ಹೋಗಲಿ, ಒಂದಿಷ್ಟು ಕುತೂಹಲ ಇರಲಿ ಎಂದು ಚಾನಲ್ನವರು ಹೇಳಿದ್ದರು. ಅದರಂತೆ ಒಂದು ಕಂತಿನಲ್ಲಿ ಮಾತ್ರ ಇದ್ದು ಬಂದೆ’ ಎನ್ನುತ್ತಾರೆ.
ಇನ್ನು, ಕಾರ್ಯಕ್ರಮದಲ್ಲಿ ಭಾಗವಹಿಸದ್ದರ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾದ ಕುರಿತು ಮಾತನಾಡಿರುವ ಅವರು, ‘ನಾವು ಹೊಸ ತಲೆಮಾರಿನ ರಾಜಕಾರಣಿಗಳು. ಹೊಗಳಿದರೂ, ತೆಗಳಿದರೂ ಗೌರವ ಕೊಡಬೇಕು. ರಾಜಕಾರಣಿಗಳ ಮೊದಲ ಅರ್ಹತೆ ತೆಗಳಿಸಿಕೊಳ್ಳುವುದು. ಅದರಲ್ಲಿ ತಪ್ಪೇನಿಲ್ಲ. ಅವರವರ ಅಭಿಪ್ರಾಯ. ಸರಿ ಎನ್ನುವವರೂ ಇದ್ದಾರೆ. ತಪ್ಪು ಎನ್ನುವವರೂ ಇದ್ದಾರೆ. ಸರಿ-ತಪ್ಪುಎಂದವರು ಟಿವಿ ಮುಂದೆ ಕುಳಿತರು. ನಾನು ಹೇಳಿದ್ದನ್ನು ಕೇಳಿದರು. ಈಗ ನಾನು ಎಂದಿನಂತೆ ನಾನು ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ಒಂದೊಳ್ಳೆಯ ವೇದಿಕೆಯಲ್ಲಿ ಒಂದೊಳ್ಳೆಯ ಸಂದೇಶ ಕೊಟ್ಟೆ. ನನಗೆ ಆ ಬಗ್ಗೆ ಖುಷಿ ಇದೆ. ಅದರಿಂದ ಕೋಟ್ಯಂಥರ ಕನ್ನಡಿಗರನ್ನು ರೀಚ್ ಆಗಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.
ನಾನೊಬ್ಬ ಶಾಸಕ, ನನಗೂ ಜವಾಬ್ದಾರಿ ಇದೆ ಎಂದಿರುವ ಅವರು, ‘ಕಾರ್ಯಕ್ರಮಕ್ಕೆ ಕೇವಲ ಮೂರು ತಾಸಿನ ಕಾಲ ಹೋದೆ. ಕಾರ್ಯಕ್ರಮಕ್ಕೆ ಹೈಪ್ ಬರಬೇಕು ಒಂದು ದಿನ ಯಾರಿಗೂ ಸಿಗಬೇಡಿ ಸಾರ್ ಎಂದು ಚಾನಲ್ ಗೆಳೆಯರೂ ಹೇಳಿದರು. ಅದಕ್ಕೆ ಗೌರವ ಕೊಟ್ಟು ಸುಮ್ಮನಿದ್ದೆ. ಆದರೆ, ಈ ಕುರಿತು ಏನೇನೋ ಚರ್ಚೆಗಳಾದವು. ಅದಕ್ಕೂ ಗೌರವ ಕೊಡುತ್ತೇನೆ’ ಎನ್ನುತ್ತಾರೆ.
https://indiascreens.in/nagabhushan-says-his-father-died-in-a-hit-and-run-case/


