ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ಕನ್ನಡ ‘ಬಿಗ್ ಬಾಸ್’ನ 10ನೇ ಸೀಸನ್ ಇದೇ ಭಾನುವಾರ (ಅಕ್ಟೋಬರ್ 8) ಪ್ರಾರಂಭವಾಗಲಿದೆ. ಅಂದು ಸಂಜೆ ಆರು ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ನಟ-ನಿರೂಪಕ ಸುದೀಪ್ ಸ್ಪರ್ಧಿಗಳನ್ನು ಮನೆಗೆ ಕಳುಹಿಸಿಕೊಡಲಿದ್ದಾರೆ. ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ ಒಂಬತ್ತೂವರೆಗೆ ಪ್ರಸಾರವಾಗುತ್ತವೆ.
ಈ ಬಾರಿಯ ವಿಶೇಷತೆಯೆಂದರೆ, ಕಾರ್ಯಕ್ರಮದ 10ನೇ ವರ್ಷದ ಸಂಭ್ರಮದಲ್ಲಿ ಈ ಸೀಸನ್‌ನ್ನುವಯಕಾಮ್18ನ ಒಟಿಟಿ ಫ್ಲ್ಯಾಟ್‌ಫಾರಂ ಆದ ಜಿಯೋ ಸಿನಿಮಾದದಲ್ಲಿ 24 ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಕಾರ್ಯಕ್ರಮದ ಕುರಿತಾಗಿ ಹಲವು ವಿಷಯಗಳನ್ನು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳಲಾಗಿದೆ.
ಈ ಕುರಿತು ಮಾತನಾಡುವ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ‘ಈ ಸೀಸನ್ ವಿಶೇಷವಾಗಲು ಮೂರು ಕಾರಣಗಳಿವೆ. 10ನೇ ಸೀಸನ್ ಎಂಬುದೇ ಒಂದು ಸಂಭ್ರಮ. ಸೀಸನ್ನಿಗೊಂದು ಥೀಮ್ ಅಳವಡಿಸಿರುವುದು ಆಟದ ರೀತಿಯನ್ನು ಬದಲಿಸಲಿದೆ. ವಿಶಾಲವಾದ ಹೊಸ ಮನೆ ಮೂರನೇ ವಿಶೇಷ. ಮೂರೂ ಸೇರಿ ಹಿಂದೆಂದೂ ಕಾಣದಂತ ಮನರಂಜನೆಗೆ ದಾರಿಮಾಡಿಕೊಡಲಿವೆ’ ಎನ್ನುತ್ತಾರೆ.
10 ವರ್ಷ ಹೇಗೆ ಕಳೆಯಿತೋ ಎಂಬುದೇ ಗೊತ್ತಿಲ್ಲ ಎನ್ನುವ ಕಾರ್ಯಕ್ರಮದ ಸೂತ್ರಧಾರ ಸುದೀಪ್, ‘ನನ್ನ ಪ್ರಕಾರ ‘ಬಿಗ್ ಬಾಸ್’ ಒಂದು ಶೋ ಅಲ್ಲ, ಇದು ನನ್ನ ಹ್ಯಾಪಿ ಹೋಂ. ಪ್ರತಿ ಸೀಸನ್ನಲ್ಲೂ ಹೊಸ ಹೊಸ ವ್ಯಕ್ತಿತ್ವಗಳನ್ನು ಪರಿಚಯ ಮಾಡಿಕೊಳ್ಳುವುದು ಒಂದು ವಿಶಿಷ್ಟ ಅನುಭವ. 10ನೇ ಸೀಸನ್ನಿಗೆ ಎಲ್ಲರಂತೆ ನಾನೂ ಕಾತರನಾಗಿದ್ದೇನೆ’ ಎನ್ನುತ್ತಾರೆ ಸುದೀಪ್.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ಎಕ್ಸ್‌ಕ್ಲ್ಯೂಸಿವ್ ಮತ್ತು ಅನ್‌ಸೀನ್ ಮನರಂಜನಾ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ನೋಡಲಿಕ್ಕೆ ಸಿಗಲಿವೆ. ‘ಬಿಗ್ ನ್ಯೂಸ್’, ‘ಅನ್‌ಸೀನ್ ಕಥೆಗಳು’, ‘JioCinema ಫನ್ ಫ್ರೈಡೇ’, ‘ಡೀಪ್ ಆಗಿ ನೋಡಿ’ … ಹೀಗೆ ಹಲವಾರು ರೂಪದಲ್ಲಿ, ಮನೆಯೊಳಗಿನ ಕುತೂಹಲಕಾರಿ ಘಟನಾವಳಿಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆ ಸಜ್ಜಾಗಿದೆ. ಮನೆಯೊಳಗೆ ನಡೆಯುವ ನಾಟಕೀಯ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ‘ಲೈವ್ ಶಾರ್ಟ್’ ಇನ್ನೊಂದು ವಿಶೇಷ ಆಕರ್ಷಣೆಯಾಗಿದೆ.
ಇದರ ಜೊತೆಜೊತೆಯಲ್ಲಿ ‘ವಾಚ್ ಆಂಡ್ ವಿನ್’, ‘ಮೀಮ್ ದ ಮೊಮೆಂಟ್’, ‘ಹೈಪ್ ಚಾಟ್’, ‘ವಿಡಿಯೊ ವಿಚಾರ್’ಗಳ ಮೂಲಕ ‘ಬಿಗ್ ಬಾಸ್’ ಕನ್ನಡದ ಅಭಿಮಾನಿಗಳಿಗೆ, ಸಂವಾದ ನಡೆಸುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಘೋಷಣೆಯಾಗದಿದ್ದರೂ, ಈ ಬಾರಿ ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿರುವ ಶ್ವಾನ, ‘Excuse Me’ ಖ್ಯಾತಿಯ ನಟ ಸುನೀಲ್ ರಾವ್, ರಘು ಮುಖರ್ಜಿ, ಅಕ್ಕ ಅನು, ಪ್ರಕಾಶ್ ತುಮ್ಮಿನಾಡು, ರಂಜಿನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ‘ಬಾಲಾಜಿ ಫೋಟೋ ಸ್ಟುಡಿಯೋ’ ಖ್ಯಾತಿಯ ರಾಜೇಶ್ ಧ್ರುವ, ‘ಕೆಜಿಎಫ್’ನಲ್ಲಿ ಅಭಿನಯಿಸಿದ್ದ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ಬುಲೆಟ್ ಪ್ರಕಾಶ್ ಮಗ ರಕ್ಷಕ್, Rapper ಇಶಾನಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
https://indiascreens.in/the-probable-list-of-contestants-in-bigg-boss-kannada-season-10/


