15 ವರ್ಷಗಳಿಂದ ಒಂದು ಗೆಲುವು ನೋಡಿಲ್ಲ; ಮನದ ನೋವು ಹೊರಹಾಕಿದ ಸೂರ್ಯ

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ಇಲ್ಲಿಯವರೆಗೂ ಎದ್ದಿಲ್ಲ. ಬಿದ್ದಿದ್ದೇ ಹೆಚ್ಚು. ಕಳೆದ 15 ವರ್ಷಗಳಿಂದ ಒಂದು ಗೆಲುವು ನೋಡಿಲ್ಲ. ಈ ಚಿತ್ರವಾದರೂ ಗೆಲುವು ತಂದು ಕೊಡಲಿ ಎಂದು ಆಶೀರ್ವಾದ ಮಾಡಿ …’

ಹಾಗಂತ ಕೇಳಿದವರು ಸೂರ್ಯ ಅಲಿಯಾಸ್‍ ಯಶಸ್‍ ಸೂರ್ಯ. ಒಂದೂವರೆ ದಶಕಗಳ ಹಿಂದೆ ಚಿತ್ರರಂಗಕ್ಕೆ ಬಂದ ಅವರು, ಇದುವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅದರಲ್ಲಿ ಗೆಲುವು ಕಂಡಿಲ್ಲ. ಈಗ ಅವರು ಯೋಗರಾಜ್‍ ಭಟ್‍ ನಿರ್ದೇಶನದ ‘ಗರಡಿ’ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ತನಗೆ ಯಶಸ್ಸು ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಸೋಮವಾರ ಮಧ್ಯಾಹ್ನ, ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಅವರು ತಮ್ಮ ವೃತ್ತಿಜೀವನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಇದುವರೆಗೂ 23 ಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ 10 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಆದರೆ, ಈಗಲೂ ಜನ ನನ್ನನ್ನು ಹೊಸ ಹೀರೋ ತರಹ ನೋಡುತ್ತಾರೆ. ಎಷ್ಟೋ ಜನರಿಗೆ ಹೆಸರೇ ಗೊತ್ತಿರುವುದಿಲ್ಲ. ನಾನು ಮಾಡಿರುವ ಚಿತ್ರಗಳು ಗೊತ್ತಿಲ್ಲ. ‘ಗರಡಿ’ ಚಿತ್ರದ ಬಗ್ಗೆ ಒಂದಿಷ್ಟು ಪಾಸಿಟಿವ್‍ ಆದಂತಹ ಪ್ರತಿಕ್ರಿಯೆ ಸಿಗುತ್ತಿದೆ. ಈ ಚಿತ್ರವಾದರೂ ಯಶಸ್ಸು ತಂದುಕೊಡುತ್ತದಾ ನೋಡಬೇಕು’ ಎನ್ನುತ್ತಾರೆ ಯಶಸ್‍.

ಇನ್ನು, ಯಶಸ್‍ ಸೂರ್ಯ, ಈ ಚಿತ್ರದಲ್ಲಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಈಗ ಅವರು ಬರೀ ಸೂರ್ಯ ಅಥವಾ ‘ಗರಡಿ’ ಸೂರ್ಯ. ಅಷ್ಟೇ ಅಲ್ಲ, ಅವರ ಸ್ನೇಹಿತ ಮತ್ತು ಗುರು ದರ್ಶನ್‍, ಸೂರ್ಯ ಎಂದು ನಾಮಕರಣವನ್ನೂ ಮಾಡಿದ್ದಾರಂತೆ.

ಈ ಕುರಿತು  ಮಾತನಾಡುವ ಅವರು, ‘ಕಟೀಲು ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ದರ್ಶನ್‍ ಅವರು ಕಿವಿಯಲ್ಲಿ ಮೂರು ಬಾರಿ ಸೂರ್ಯ ಎಂದು ಹೇಳುವ ಮೂಲಕ ನಾಮಕರಣ ಮಾಡಿದ್ದಾರೆ. ಅವರು ನನ್ನ ಪಾಲಿಗೆ ಅಣ್ಣ, ಗುರು, ಸ್ನೇಹಿತ ಎಲ್ಲವೂ ಆಗಿದ್ದಾರೆ. ಅವರು ನನ್ನ ಪಾಲಿನ ದೇವರು. ನಾನು ಯಾವತ್ತೂ ಅವರ ಬಳಿ ಕೆಲಸ ಕೇಳಿಲ್ಲ. ಈ ಚಿತ್ರದಲ್ಲಿ ಅವಕಾಶ ಕೊಡಿಸಿದವರೇ ಅವರು. ನಾನು ಹೀರೋ ಆದರೆ, ಚಿತ್ರದಲ್ಲಿ ಅತಿಥಿಯಾಗಿ ನಟಿಸುತ್ತೇನೆ ಎಂದರು. ಪಾಟೀಲ್‍ ಅವರ ಜೊತೆಗೆ ಇದ್ದಾಗ, ಒಂದು ಫೋಟೋ ಕಳಿಸು ಎಂದರು. ಯಾಕೆ ಗೊತ್ತಾಗಲಿಲ್ಲ. ಕೊನೆಗೆ ಅವರ ಮನೆಗೆ ಕರೆದರು. ಹೋದಾಗ, ಅಲ್ಲಿ ನಿಮಗೆ ಸಾಧ್ಯವಾದರೆ ಈ ಚಿತ್ರದಲ್ಲಿ ನಟಿಸಿ ಎಂದರು. ನಾನು ಒಪ್ಪಿದೆ. ಯೋಗರಾಜ್‍ ಭಟ್‍ ನಿರ್ದೇಶಕರು ಎಂದು ಗೊತ್ತಾದಾಗ ಿನ್ನೂ ಸಂತೋಷವಾಯಿತು. ಇದು ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ’ ಎನ್ನುತ್ತಾರೆ.

ಇಷ್ಟಕ್ಕೂ ದರ್ಶನ್‍ ಅವರಿಗೆ ಯಶಸ್‍ ಮೇಲೆ ಯಾಕೆ ಅಷ್ಟೊಂದು ಪ್ರೀತಿ? ‘ಗೊತ್ತಿಲ್ಲ. ಅವರು ಎಲ್ಲರನ್ನೂ ಪ್ರೀತಿಸುತ್ತಾರೆ. ನನ್ನನ್ನೂ ಪ್ರೀತಿಸುತ್ತಾರೆ’ ಎನ್ನುತ್ತಾರೆ ಯಶಸ್‍ ಸೂರ್ಯ.

‘ಗರಡಿ’ ಚಿತ್ರವನ್ನು ಬಿ.ಸಿ. ಪಾಟೀಲ್​ ತಮ್ಮ ಕೌರವ ಪ್ರೊಡಕ್ಷನ್ಸ್​ನಡಿ ನಿರ್ಮಿಸುತ್ತಿದ್ದು, ಯಶಸ್​ ಸೂರ್ಯ, ಸೋನಾಲ್​ ಮಾಂತೆರೋ, ರವಿಶಂಕರ್, ಧರ್ಮಣ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

https://indiascreens.in/priya-hassan-to-make-her-reentry-with-durga-llb/

Discover more from KannadaScreens

Subscribe now to keep reading and get access to the full archive.

Continue reading