ನಾನು ಸಿನಿಮಾ ಮಾಡೋದು ದಾಖಲೆಗೆ, ಹೊಸತನಕ್ಕೆ: ರವಿಚಂದ್ರನ್‍

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ನಾನು ಬೇರೆ ಸಿನಿಮಾಗಳನ್ನ ಮಾಡೋದು ಜೀವನಕ್ಕೆ, ಪಾಕೆಟ್‍ ಮನಿಗೆ, ಸಮಸ್ಯೆಗಳಿಗೆ ಮತ್ತು ಬದುಕೋಕೆ. ಆ ಚಿತ್ರಗಳ ಒಳ್ಳೆಯದು, ಕೆಟ್ಟದ್ದು ಆ ಸಿನಿಮಾಗಳಿಗೆ ಸಂಬಂಧಪಟ್ಟವರಿಗೆ ನೋಡಬೇಕು. ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ. ಇನ್ನು, ನಾನು ಸಿನಿಮಾ ಮಾಡೋದು ದಾಖಲೆಗೆ, ಹೊಸತನಕ್ಕೆ …’

ಇತ್ತೀಚಿನ ದಿನಗಳಲ್ಲಿ ಬ್ಯಾಕ್‍ ಟು ಬ್ಯಾಕ್‍ ಸಿನಿಮಾಗಳನ್ನು ಮಾಡುತ್ತಿರುವ ನಟರ ಪೈಕಿ ರವಿಚಂದ್ರನ್‍ ಪ್ರಮುಖರು. ‘ದಿ ಜಡ್ಜ್ಮೆಂಟ್‍’, ‘ಕೆಡಿ – ದಿ ಡೆವಿಲ್‍’, ‘ಗೌರಿಶಂಕರ’ … ಹೀಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ರವಿಚಂದ್ರನ್‍, ಮುಂದಿನ ವರ್ಷ ಚಿತ್ರ ನಿರ್ದೇಶನ ಮಾಡುವುದಕ್ಕೆ ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ. ಅದು ಬರೀ ಚಿತ್ರವಷ್ಟೇ ಅಲ್ಲ, ‘ರುದ್ರತಾಂಡವ’ ಎನ್ನುತ್ತಾರೆ ಅವರು.

ಅದಕ್ಕೂ ಮುನ್ನ, ತಮ್ಮ ಹಾಗೂ ಈಶ್ವರನ ನಡುವಿನ ಸಂಬಂಧವನ್ನು ಬಿಚ್ಚಿಡುತ್ತಾರೆ. ‘ನಾನು ‘ಮಲ್ಲ’ ಸಿನಿಮಾ ಮಾಡುವುದಕ್ಕೂ, ನನ್ನ ಮನೆಗೆ ಈಶ್ವರನ ಪ್ರತಿಮೆ ಬರುವುದಕ್ಕೂ ಸರಿ ಹೋಯಿತು. ಶಿವ ನನ್ನ ಮನೆಗೆ, ಮನಸ್ಸಿಗೆ ಸೇರಿಕೊಂಡಿದ್ದೇ ಆಗ. ಅಲ್ಲಿಂದಲೇ ನಾನು ಜೀವನದಲ್ಲಿ ಬಹಳ ಎಮೋಷನಲಿ ಕನೆಕ್ಟ್ ಆದೆ. ಅಲ್ಲಿಯವರೆಗೂ ಇದ್ದಿದ್ದು ಒಂದು ಜೀವನ. ಆ ನಂತರ ನಾನು ಜೀವನವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು. ಶಿವ ಮನೆಗೆ ಬಂದಾಗಿನಿಂದ ವಾತಾವರಣವೇ ಬದಲಾಗಿ ಹೋಯಿತು. ಅದು ನಾನು ಕರೆದುಕೊಂಡು ಬಂದಿದ್ದಲ್ಲ, ಅವರೇ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟರು. ಶೂಟಿಂಗ್‍ ಸಮಯದಲ್ಲೂ ಅಷ್ಟೇ. ಎಲ್ಲ ಕಡೆ ಶಿವ ಸಿಗುತ್ತಿದ್ದರು. ನಾನು ಹುಡುಕಿಕೊಂಡು ಹೋಗಿದ್ದಲ್ಲ, ಶಿವ ನನ್ನ ಹುಡುಕಿ ಬಂದರು. ಹೊಸ ಮನೆಗೆ ಹೋದಾಗಲೂ, ಮೊದಲ ಗಿಫ್ಟ್ ಸಿಕ್ಕಿದ್ದೇ ಈಶ್ವರನ ವಿಗ್ರಹ. ನಾನು ಎಲ್ಲಿ ಹೋದರೂ ಅವರೇ ನನ್ನ ಹಿಂಬಾಲಿಸುತ್ತಿದ್ದಾರೆ. ಇನ್ನೇನು ರುದ್ರತಾಂಡವ ಆಡಿಸುವ ಸಮಯ ಬಂತು. 2024ರಲ್ಲಿ ರುದ್ರತಂಡಾವ ಶುರು. ಮುಂದಿನ ವರ್ಷದಿಂದ ನಾನು ಮಾಡುವ ಸಿನಿಮಾಗಳೆಲ್ಲ ಬೇರೆ ತರಹ ಇರುತ್ತದೆ’ ಎನ್ನುತ್ತಾರೆ ರವಿಚಂದ್ರನ್‍.

ಮುಂದಿನ ವರ್ಷ ರವಿಚಂದ್ರನ್‍ ಅವರು ಮಾಡಹೊರಟಿರುವ ಸಿನಿಮಾಗಳು ಯಾವುವು? ಹೆಸರೇನು? ವಿಶೇಷತೆಗಳೇನು? ಎಂಬುದನ್ನೆಲ್ಲ ಅವರು ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದಾರೆ. ಸಮಯ ಬಂದಾಗ ಒಂದೊಂದೇ ವಿಷಯವನ್ನು ತಿಳಿಸುವುದಾಗಿ ಅವರು ಹೇಳುತ್ತಾರೆ.

Discover more from KannadaScreens

Subscribe now to keep reading and get access to the full archive.

Continue reading