ಪುನೀತ್ ರಾಜಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ಸ್ನಡಿಯಿಂದ ನಿರ್ಮಾಣವಾಗಿರುವ ‘ಆಚಾರ್ ಅಂಡ್ ಕೋ’ ಚಿತ್ರವು ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸಿಂಧು ಶ್ರೀನಿವಾಸಮೂರ್ತಿ ಬರೆದು ನಿರ್ದೇಶಿಸಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನ ಇಂದು ಸಂಜೆ ಚಿತ್ರತಂಡದವರೆಲ್ಲರೂ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಆ ನಂತರ ಡಿಆರ್ಸಿ ಸಿನಿಮಾಸ್ನಲ್ಲಿ ಚಿತ್ರ ನೋಡಲಿದ್ದಾರೆ. ಅದಕ್ಕೂ ಮುನ್ನ ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ಆಚಾರ್ ಅಂಡ್ ಕೋ’ ಕುರಿತು ಮಾತನಾಡುವ ಅವರು, ‘ಈ ಚಿತ್ರದ ಕಂಟೆಂಟ್ ಬಹಳ ಚೆನ್ನಾಗಿದೆ. ಚಿತ್ರದಲ್ಲಿ ಒಳ್ಳೆಯ ಸಂಭಾಷಣೆಗಳಿವೆ. ಸಿಂಧು ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಇದೊಂದು ಬಹಳ ಸರಳವಾದ ಕಥೆ. ಎಲ್ಲರೂ ಎಂಜಾಯ್ ಮಾಡುವಂತ ಫ್ಯಾಮಿಲಿ ಡ್ರಾಮಾ ಇದು. ಮೂರು ವರ್ಷಗಳ ಹಿಂದೆಯೇ ಈ ಕಥೆ ಓಕೆ ಆಗಿತ್ತು. ಕೊನೆಗೆ ಎರಡು ವರ್ಷಗಳ ಹಿಂದೆ ಚಿತ್ರ ಮಾಡೋದು ಅಂತ ನಿರ್ಧಾರ ಆಯ್ತು. ಡಿಸೆಂಬರ್ 2021 ರಲ್ಲಿ ಚಿತ್ರ ಪ್ರಾರಂಭಿಸೋಣ ಎಂಬ ಯೋಚನೆ ಇತ್ತು. ಅಷ್ಟರಲ್ಲಿ ಅಪ್ಪು ಅವರ ನಿಧನ ಆಗಿದ್ದರಿಂದ ಚಿತ್ರ ಮುಂದಕ್ಕೆ ಹೋಯಿತು. ಅಂತಿಮವಾಗಿ 2022ರ ಏಪ್ರಿಲ್ ನಲ್ಲಿ ಚಿತ್ರೀಕರಣ ಪ್ರಾರಂಭವಾಯಿತು’ ಎಂದು ಮಾಹಿತಿ ಕೊಡುತ್ತಾರೆ.
ಈ ಚಿತ್ರದ ಕಥೆ ಬಹಳ ಇಷ್ಟವಾದ ಕಾರಣ ಇದನ್ನು ನಿರ್ಮಿಸುವುದಕ್ಕೆ ಮುಂದಾದೆವು ಎನ್ನುವ ಅಶ್ವಿನಿ ಪುನೀತ್ ರಾಜಕುಮಾರ್, ‘ಕಥೆ ಜೊತೆಗೆ ಸಿಂಧು ಆರು ನಿಮಿಷಗಳ ಒಂದು ಸಣ್ಣ ವಿಡಿಯೋ ಮಾಡಿ ಕೊಟ್ಟಿದ್ದರು. ಆ ವೀಡಿಯೋ ನೋಡಿ ಅಪ್ಪು ಖುಷಿಯಾಗಿದ್ದು. ಹಾಗಾಗಿ, ಅವರು ಈ ಸಿನಿಮಾ ಮಾಡೋಣ ಅಂತ ಹೇಳಿದ್ದರು. ಇದೊಂದು ಹ್ಯೂಮರ್ ಡ್ರಾಮಾ. ಈಗಿನ ತಲೆಮಾರಿನವರು ತಮ್ಮ ಅಜ್ಜಿ ತಾತನಿಂದ ಆಗ ಆಗಿನ ಕಾಲ ಹೇಗಿತ್ತು ಅಂತ ಕೇಳಿರುತ್ತಾರೆ. ಅದನ್ನು ಈ ಚಿತ್ರದ ಮೂಲಕ ನೋಡಬಹುದು. ಆಗ ಫ್ಯಾಮಿಲಿಯಲ್ಲಿ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಸಾಗೋರು. ಇಲ್ಲೂ ಏನೇ ಸಮಸ್ಯೆಗಳು ಎದುರಾದರೂ ಮನೆಯವರೆಲ್ಲ ಹೇಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಮುನ್ನಡೆಸುತ್ತಾರೆ ಅನ್ನೋದು ಈ ಚಿತ್ರದ ಕಥೆ’ ಎನ್ನುತ್ತಾರೆ.
ಇದು ಮಹಿಳಾ ಪ್ರಧಾನ ಚಿತ್ರವಲ್ಲ ಎನ್ನುವ ಅವರು, ‘ಇದೊಂದು ಫ್ಯಾಮಿಲಿ ಚಿತ್ರ. ಆದರೆ, ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಎಲ್ಲ ಮಹಿಳೆಯರೇ ಇರಬೇಕೆಂದೇನು ನಾವು ಚಿತ್ರ ಮಾಡಿಲ್ಲ. ಅದೆಲ್ಲ ಕೂಡಿ ಬಂತು ಅಷ್ಟೇ. ಈ ಚಿತ್ರದ ಕಥೆ ನಾನು ಓದಿದ್ದೆ. ನನಗೆ ಬಹಳ ಇಷ್ಟವಾಗಿತ್ತು. ಸಿಂಧು ಹೊಸಬರು, ಇನ್ವೆಸ್ಟ್ ಮಾಡುವಾಗ ಸ್ವಲ್ಪ ಯೋಚನೆ ಮಾಡಿ ಎಂದು ಅಪ್ಪುಗೆ ಹೇಳಿದ್ದೆ. ಆದರೆ, ಅವರಿಗೆ ಆ ಸಾಮರ್ಥ್ಯ ಇದೆ, ಮಾಡೋಣ ಅಂತ ಅಪ್ಪು ಹೇಳಿದ್ದರು. ನಾನು ಅವರ ಮೇಲೆ ವಿಶ್ವಾಸ ಇಟ್ಟು ಈ ಚಿತ್ರವನ್ನು ನಿರ್ಮಾಣ ಮಾಡೋದಿಕ್ಕೆ ಮುಂದೆ ಅದೆ. ಪುನೀತ್ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ‘ನಾನೊಬ್ಬ ನಿರ್ದೇಶಕರ ನಟ. ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ಅವರು ಹೇಳಿದ್ದನ್ನು ಕೇಳಬೇಕು, ಸುಮ್ಮನೆ ಇಂಟರ್ಫಿಯರ್ ಮಾಡಬಾರದು’ ಎನ್ನುತ್ತಿದ್ದರು. ಏಕೆಂದರೆ, ಪ್ರತಿ ಚಿತ್ರವೂ ನಿರ್ದೇಶಕರ ವಿಷನ್ ಎನ್ನುವುದು ಅವರ ಅಭಿಪ್ರಾಯ. ಅದನ್ನು ನಾನು ಸಹ ಫಾಲೋ ಮಾಡುತ್ತೀನಿ. ಒಂದೆರೆಡು ಸಣ್ಣಪುಟ್ಟ ಸಲಹೆಗಳನ್ನು ಹೇಳಿದ್ದನ್ನು ಬಿಟ್ಟರೆ, ಮಿಕ್ಕಂತೆ ದೊಡ್ಡ ಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅವರು ಹೇಗೆ ಕಥೆ ಮಾಡಿಕೊಂಡು ಬಂದಿದ್ದರೋ, ಅದೇ ರೀತಿ ಚಿತ್ರ ಸಹ ಮೂಡಿ ಬಂದಿದೆ’ ಎನ್ನುತ್ತಾರೆ ಅಶ್ವಿನಿ.
‘ಆಚಾರ್ & ಕೋ’ ಚಿತ್ರಕ್ಕೆ ಬಿಂದುಮಾಲಿನಿ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಆಶಿಕ್ ಕುಸುಗೊಳ್ಳಿ ಅವರ ಸಂಕಲನವಿದೆ. ಈ ಚಿತ್ರಕ್ಕೆ ಸಿಂಧು ಶ್ರೀನಿವಾಸಮೂರ್ತಿ ಹಾಗೂ ಕಣ್ಣನ್ ಗಿಲ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಿಂಧು ಶ್ರೀನಿವಾಸಮೂರ್ತಿ, ಅಶೋಕ್, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.


