ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರವು ಏಪ್ರಿಲ್ 28ರಂದು ಬಿಡುಗಡೆಯಾಗಿತ್ತು. ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡ ಈ ಚಿತ್ರವು ಇದುವರೆಗೂ ಟಿವಿಯಲ್ಲಿ ಮಾತ್ರ ಬಂದಿರಲಿಲ್ಲ. ಈಗ ಅದಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಇಂದು (ಜುಲೈ 23) ಸಂಜೆ 6.30ಕ್ಕೆ ಸ್ಟಾರ್ ಸುವರ್ಣದಲ್ಲಿ ಈ ಚಿತ್ರ ಪ್ರಸಾರವಾಗಲಿದೆ.
‘ರಾಘವೇಂದ್ರ ಸ್ಟೋರ್ಸ್’ ಹೆಸರಿಗೆ ತಕ್ಕಂತೆ ವಿವಿಧ ರೀತಿಯ ಪದಾರ್ಥಗಳನ್ನು ಹೊಂದಿದೆ. ಹಾಸ್ಯ, ತುಂಟತನ, ಶೃಂಗಾರ, ವೇದನೆ ಸೇರಿ ನವರಸಗಳ ಮಿಶ್ರಣವಿಲ್ಲಿದೆ.
ತಂದೆ ಗುಂಡ ಭಟ್ಟರ ‘ರಾಘವೇಂದ್ರ ಸ್ಟೋರ್ಸ್’ ಹೋಟೆಲ್ನಲ್ಲಿ ಅಡುಗೆ ಭಟ್ಟ ಕಂ ಸಪ್ಲೆಯರ್ ಆಗಿರುವ ಬ್ರಹ್ಮಚಾರಿ ಹಯವದನನ ಮದುವೆಯ ಕಥೆಯಿದು. ಅಡುಗೆಯನ್ನು ಉದ್ಯೋಗವಾಗಿಸಿಕೊಂಡಿರುವವರಿಗೆ ಕಾಡುವ ಮದುವೆಯ ಸಮಸ್ಯೆಯ ಎಳೆಯನ್ನೊಳಗೊಂಡ ಈ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಸಂದೇಶವೂ ಇದೆ.
ಹೊಂಬಾಳೆ ಫಿಲಂಸ್ ನಿರ್ಮಿಸಿರುವ ‘ರಾಘವೇಂದ್ರ ಸ್ಟೋರ್ಸ್’ ಚಿತ್ರದಲ್ಲಿ ಜಗ್ಗೇಶ್, ಶ್ವೇತಾ ಶ್ರೀವಾತ್ಸವ್, ದತ್ತಣ್ಣ, ಅಚ್ಯುತ್ ಕುಮಾರ್, ಮಿತ್ರ ಮುಂತಾದವರಿದ್ದು ಸಂತೋಷ್ ಆನಂದರಾಮ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಶ್ರೀಷ ಕೂದುವಳ್ಳಿ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ.


