ಸುದೀಪ್ ಮತ್ತು ನಿರ್ಮಾಪಕ ಎಂ ಎನ್ ಕುಮಾರ್ ನಡುವಿನ ವಿವಾದ ಈಗ ರವಿಚಂದ್ರನ್ ಅವರ ಅಂಗಳದಲ್ಲಿದೆ. ಮಂಗಳವಾರವಷ್ಟೇ, ಕೆಲವು ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ಈ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದರು. ಬುಧವಾರ, ರವಿಚಂದ್ರನ್ ಅವರ ಮನೆಗೆ ಕುಮಾರ್ ಭೇಟಿ ಕೊಟ್ಟು ಆಗಿದ್ದೆಲ್ಲ ಹೇಳಿದ್ದಾರೆ. ಈ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವ ವಿಶ್ವಾಸವನ್ನು ರವಿಚಂದ್ರನ್ ಸಹ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ರವಿಚಂದ್ರನ್, ‘ಕುಮಾರ್ ಅವರು ಇವತ್ತು ನನ್ನ ಭೇಟಿಯಾಗಿದ್ದರು. ಏನೇನಾಯ್ತು ಎಂದು ಅವರೆಲ್ಲವನ್ನೂ ಹೇಳಿದ್ದಾರೆ. ಅದಕ್ಕೆ ಪೂರಕವಾದ ಡಾಕ್ಯುಮೆಂಟ್ ಸಹ ತಂದುಕೊಡ್ತೀನಿ ಅಂತ ಅವರು ಹೇಳಿದ್ದಾರೆ. ಇದಾದ ಮೇಲೆ ನಾನು ಸುದೀಪ್ ಹತ್ತಿರ ಮಾತನಾಡಬೇಕು. ನನ್ನ ಕಾರ್ಯ ವೈಖರಿ ಹೇಗೆಂದರೆ, ನಾನು ಮೊದಲು ಕುಮಾರ್ ಮತ್ತು ಸುದೀಪ್ ಇಬ್ಬರ ಜೊತೆಗೂ ಮಾತನಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ. ನಾನು ಏನು ಪರಿಹಾರ ಕೊಡುತ್ತೀನೋ ಅದನ್ನು ಇಬ್ಬರೂ ಒಪ್ಪಿಕೊಳ್ಳಬೇಕು. ಅದಕ್ಕೆ ಇಬ್ಬರು ಓಕೆ ಅಂದರೆ ಮಾತ್ರ ನಾನು ಪರಿಹಾರ ಹುಡುಕುವುದಕ್ಕೆ ತಯಾರಿ ನಡೆಸುತ್ತೇನೆ. ಮೊದಲು ನಾನು ಹೇಳಿದ್ದನ್ನು ಒಪ್ಪಿಕೊಂಡು, ಆಮೇಲೆ ನನಗೆ ಇಷ್ಟ ಬಂದ ಹಾಗೆ ಮಾಡುತ್ತೀನಿ ಎಂದರೆ ನಾನು ಒಪ್ಪುವುದಿಲ್ಲ’ ಎಂದು ಖಡಕ್ ಆಗಿ ಹೇಳುತ್ತಾರೆ.
ನಿಜಕ್ಕೂ ಅವರಿಬ್ಬರ ಮಧ್ಯೆ ಏನಾಗಿದೆ ಅನ್ನೋದು ಎಲ್ಲರಿಗೂ ಕ್ಲಾರಿಟಿ ಬೇಕು ಎನ್ನುವ ರವಿಚಂದ್ರನ್, ‘ಅದೇ ಕಾರಣಕ್ಕೆ ಒಂದಲ್ಲ ಎರಡು ಬಾರಿ ಇಬ್ಬರ ಹತ್ತಿರ ಕೂತು ಸಮಾಧಾನದಿಂದ ಮಾತನಾಡಬೇಕಿದೆ. ಆಮೇಲೆ ಮುಂದಿನ ಹೆಜ್ಜೆ. ಇದು 20 ವರ್ಷದ ಕಥೆ. ಅವರಿಬ್ಬರ ಮಧ್ಯೆ ಅಷ್ಟು ಚೆನ್ನಾಗಿದ್ದ ಸ್ನೇಹ ಇಂದು ಬಿರುಕು ಬಿಟ್ಟು ಕೊಂಡಿದೆ. ಇಬ್ಬರ ಮನಸ್ಸಿಗೂ ನೋವಾಗಿದೆ. ಸುದೀಪ್ ಆದಷ್ಟು ಬೇಗ ಸಿಗುತ್ತಾರೆ. ನಾನೇ ಅವರನ್ನು ಹೋಗಿ ಭೇಟಿ ಮಾಡೋದಾ ಅಥವಾ ಅವರೇ ಬರ್ತಾರಾ ಅನ್ನೋದು ಸದ್ಯಕ್ಕೆ ಗೊತ್ತಿಲ್ಲ. ಆದರೆ, ಅವರ ಹತ್ತಿರ ಈ ವಿಚಾರವಾಗಿ ಖಂಡಿತಾ ಮಾತಾನಾಡುತ್ತೇನೆ’ ಎನ್ನುತ್ತಾರೆ.
‘ನನಗಿಂತ ಅವರಿಬ್ಬರೂ ಹೆಚ್ಚು ಸ್ನೇಹಿತರು. ನನಗೂ ಸುದೀಪ್ಗೂ ಮೊದಲಿಂದಲೂ ಸ್ನೇಹ ಇತ್ತು. ಆದರೆ, ಬಾಂಧವ್ಯ ಹೆಚ್ಚಾಗಿದ್ದು ‘ಮಾಣಿಕ್ಯ’ ಚಿತ್ರದ ನಂತರ. ಕುಮಾರ್ ನನಗೆ ಸುದೀಪ್ಗಿಂತ ಬಹಳ ಮುಂಚಿಂದ ಗೊತ್ತು. ಕೆಸಿಎನ್ ಆಫೀಸ್ನಲ್ಲಿ ಅವರು ಕಾಫಿ ಕೊಡುತ್ತಿದ್ದರು. ಆಗ ನನಗೆ ಕಾಫಿ ಕೊಡುತ್ತಿದ್ದ ಆಫೀಸ್ ಬಾಯ್, ಇವತ್ತು ಇಷ್ಟು ಬೆಳೆದಿದ್ದಾರೆ. ಅದು ಬಹಳ ಸಂತೋಷದ ವಿಷಯ. ನನ್ನನ್ನ ಇಟ್ಟುಕೊಂಡು ಒಬ್ಬ ಆಫೀಸ್ ಬಾಯ್ ಸಿನಿಮಾ ಮಾಡುತ್ತಾರೆಂದರೆ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ? ಆಗ ನಾನು ಅವರ ಬಳಿ ಹೇಗೆ ಮಾತನಾಡುತ್ತಿದ್ದೆನೋ, ಈಗಲೂ ಹಾಗೆಯೇ ಮಾತನಾಡುತ್ತೇನೆ. ಅವರು ಬೆಳೆದುಬಿಟ್ಟರು ಎಂದು ನಾನು ತಲೆ ಮೇಲೆ ಕೂರಿಸಿಕೊಂಡು ಮಾತನಾಡಿಲ್ಲ ಅಥವಾ ಆಫೀಸ್ ಬಾಯ್ ಎಂಬ ಕಾರಣಕ್ಕೆ ಕೀಳಾಗಿಯೂ ನೋಡಿಲ್ಲ. ಅದೇ ಸ್ನೇಹ ಇವತ್ತಿಗೂ ಮುಂದುವರೆದಿದೆ. ಅದೇ ಸ್ನೇಹವನ್ನು ನಂಬಿಕೊಂಡು ಅವರು ನನ್ನ ಹತ್ತಿರ ಬಂದಿದ್ದಾರೆ. ನಾನು ಅವರಿಗೆ ಹೇಳಿದ್ದು ಒಂದೇ ಮಾತು. ನಾಳೆ ನಾನೇನಾದರೂ ತೀರ್ಮಾನ ತೆಗೆದುಕೊಂಡರೆ ನೀವು, ಅದಕ್ಕೆ ಬದ್ಧರಾಗಿರುತ್ತೀರಾ ಎಂದು? ಅವರು ಬದ್ಧರಾಗಿರುವುದಾಗಿ ಹೇಳಿದ್ದಾರೆ’ ಎನ್ನುತ್ತಾರೆ.

ಈ ಪ್ರಕರಣ ಆದಷ್ಟು ಬೇಗ ಮುಗಿಯಬೇಕು ಎನ್ನುವ ರವಿಚಂದ್ರನ್, ‘ನನಗೆ ಇದನ್ನು ಮುಂದುವರಿಸೋಕೆ ಇಷ್ಟ ಇಲ್ಲ. ಆದಷ್ಟು ಬೇಗ ಮುಗಿದು ಹೋಗಬೇಕು. ಹೀಗೆ ಕಿತ್ತಾಡುತ್ತಾ ಕೂತರೆ ಚೆನ್ನಾಗಿರುವುದಿಲ್ಲ. ಕುಮಾರ್ ಗೆ ಎಲ್ಲವನ್ನು ಬರೆದು ಕೊಡಿ ಎಂದು ಹೇಳಿದ್ದೇನೆ. ಆನಂತರ ಸುದೀಪ್ ಅವರ ಜೊತೆ ಮಾತನಾಡುತ್ತೇನೆ. ಅವರ ಮನಸ್ಸಿನಲ್ಲಿರುವುದನ್ನು ಅವರು ಹೇಳುತ್ತಾರೆ. ನಾನು ಸುದೀಪ್ ಬಗ್ಗೆ ಎಲ್ಲೂ ಆರೋಪ ಮಾಡುತ್ತಿಲ್ಲ, ನನ್ನದು ಒಂದು ಮನವಿ ಇದೆ ಅಂತ ಕುಮಾರ್ ಹೇಳಿದ್ದಾರೆ. ಬಹಳ ತೊಂದರೆಯಲ್ಲಿರುವುದರಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಕುಮಾರ್ ಹೇಳಿದ್ದಾರೆ. ಇದೇ ಮಾತನ್ನು ನಾನು ಸುದೀಪ್ ಗೆ ಹೇಳಬೇಕು. ಅವರಿಬ್ಬರ ಮಧ್ಯೆ ಬೆಂಕಿ ಹತ್ತಿಕೊಂಡಿದೆ. ಅದನ್ನು ಆರಿಸುವ ಕೆಲಸವನ್ನು ನಾನು ಮಾಡಬೇಕಿದೆ. ಸದ್ಯದಲ್ಲೇ ಸುದೀಪ್ ಅವರನ್ನು ಈ ಕುರಿತು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ’ ಎನ್ನುತ್ತಾರೆ ರವಿಚಂದ್ರನ್.
ಈ ತರಹದ ಜಗಳಗಳು ಚಿತ್ರರಂಗದಲ್ಲಿ ಸಾಮಾನ್ಯ ಎನ್ನುವ ರವಿಚಂದ್ರನ್, ‘ಚಿತ್ರರಂಗ ಎಂದರೆ ನಾವೆಲ್ಲರೂ ಜೊತೆಗೆ ಇದ್ದೇವೆ. ಈ ಜಗಳ ಅನ್ನೋದು ಸಹಜ. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಜಗಳ ಮಾಡಿಕೊಂಡಿದ್ದಾರೆ ಮತ್ತೆ ಹೊಂದಾಣಿಕೆ ಮಾಡಿಕೊಂಡು ಮುಂದೆ ಬಂದಿದ್ದಾರೆ. ಸುಮ್ಮನೆ ಹಳೆಯದನ್ನೇ ಕೆದುಕುತ್ತಾ ಕೂತರೆ, ಅದಕ್ಕೆ ಅರ್ಥವಿರುವುದಿಲ್ಲ. ಅದಿನ್ನೂ ಜಾಸ್ತಿ ಹೋಗುತ್ತಾ ಹೋಗುತ್ತದೆ. ಹಾಗಾಗಿ ಅದನ್ನು ಬೆಳೆಯದಂತೆ ನೋಡಿಕೊಳ್ಳಬೇಕು’ ಎಂದು ಮಾತು ಮುಗಿಸುತ್ತಾರೆ.


