‘ಅಂಬುಜ’ ಮೂಲಕ ರಜನಿ ಬಹಳ ವರ್ಷಗಳ ಕನಸು ನನಸಾಯಿತಂತೆ!

ಚಂದನವನ, ಸಂದರ್ಶನ, ಸಿನಿ ಸುದ್ದಿ

ಕಿರುತೆರೆಯಲ್ಲಿ ಜನಪ್ರಿಯರಾದವರು ಒಂದಲ್ಲ ಒಂದು ದಿನ ಹಿರಿತೆರೆಗೆ ಬರುವುದು ವಾಡಿಕೆ. ಆದರೆ, ‘ಅಮೃತವರ್ಷಿಣಿ’ ಧಾರಾವಾಹಿ ಸೂಪರ್​ ಹಿಟ್​ ಆದರೂ, ಆ ಧಾರಾವಾಹಿಯಲ್ಲಿ ನಟಿಸಿದ್ದ ರಜನಿ ಸಿನಿಮಾಗೆ ಬರಲಿಲ್ಲ. ಈಗ ಅವರು ಕೊನೆಗೂ ಅಂಬುಜ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಆ ಚಿತ್ರ ನಾಳೆ (ಜುಲೈ 21) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇಷ್ಟಕ್ಕೂ ರಜನಿ, ಹಿರಿತೆರೆಗೆ ಎಂಟ್ರಿ ಕೊಡುವುದಕ್ಕೆ ತಡವಾಗಿದ್ದೇಕೆ? ಎಂಬ ಪ್ರಶ್ನೆ ಸಹಜ. ಇದಕ್ಕೆ ಉತ್ತರಿಸುವ ಅವರು, ‘ಹಿಂದೆ ನಾನು ಧಾರಾವಾಹಿಗಳಲ್ಲಿ ಬಹಳ ಬ್ಯುಸಿಯಾಗಿದ್ದಾಗ, ಸಾಕಷ್ಟು ಅವಕಾಶಗಳು ಬಂದವು. ಆದರೆ, ಒಪ್ಪೋದಕ್ಕೆ ಆಗಲಿಲ್ಲ. ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಹಾಗೆಯೇ ಇತ್ತು. ಈ ಸಿನಿಮಾದಲ್ಲಿ ಅವಕಾಶ ಬಂದಾಗ ನಾನು ಹಿಂದುಮುಂದು ನೋಡದೆ ಒಪ್ಪಿಕೊಂಡೆ’ ಎನ್ನುತ್ತಾರೆ.

ಈ ಚಿತ್ರ ಒಪ್ಪುವುದಕ್ಕೆ ಕಾರಣ ಇದೊಂದು ಮಹಿಳಾ ಪ್ರಧಾನ ಸಿನಿಮಾ ಎನ್ನುವ ಅವರು, ‘ಇತ್ತೀಚಿನ ದಿನಗಳಲ್ಲಿ ಇಂಥಾ ಜಾನರ್​ನ ಸಿನಿಮಾಗಳು ನೋಡೋದಕ್ಕೆ ಸಿಗೋದೇ ಬಹಳ ಕಷ್ಟ. ಇದೊಂದು ಪಕ್ಕಾ ಮಹಿಳಾ ಪ್ರಧಾನ ಚಿತ್ರ. ಜೊತೆಗೆ ಇದರಲ್ಲಿ ನಾನು ಲಂಬಾಣಿ ಮಹಿಳೆಯ ಪಾತ್ರ ಮಾಡಿದ್ದೇನೆ. ಪಾತ್ರ ಮತ್ತು ಕಥೆ ಬಹಳ ವಿಭಿನ್ನವಾಗಿದ್ದರಿಂದ ನಾನು ಒಪ್ಪಿಕೊಂಡೆ. ಈ ಚಿತ್ರದಲ್ಲಿ ಎಲ್ಲ ಅಂಶಗಳಿವೆ. ಈ ಚಿತ್ರವನ್ನು ಪ್ರೇಕ್ಷಕರು ಒಪ್ಪಿದರೆ, ಮುಂದೆ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುವ ಹುಮ್ಮಸ್ಸು ಬರುತ್ತದೆ’ ಎನ್ನುತ್ತಾರೆ ರಜನಿ.

ಮೊದಲ ಚಿತ್ರದಲ್ಲೇ ಶುಭಾ ಪೂಂಜ ಜೊತೆಗೆ ನಟಿಸುವುದಕ್ಕೆ ರಜನಿ ಪುಣ್ಯ ಮಾಡಿದ್ದರಂತೆ. ‘ಇದು ನನ್ನ ಮೊದಲ ಚಿತ್ರ, ಶುಭಾ ಅವರ 50ನೇ ಚಿತ್ರ. ಅಷ್ಟೊಂದು ಸೀನಿಯರ್​ ಜೊತೆಗೆ ಮೊದಲ ಚಿತ್ರದಲ್ಲೇ ನಟಿಸುವುದಕ್ಕೆ ಪುಣ್ಯ ಮಾಡಿದ್ದೆ. ಜೊತೆಗೆ ಪದ್ಮಜಾ ರಾವ್​, ಗೋವಿಂದೇಗೌಡ, ದೀಪಕ್ ಮುಂತಾದ ಹಲವು ಪ್ರತಿಭಾವಂತ ಕಲಾವಿದರು​ ನಟಿಸಿದ್ದಾರೆ. ಸೆಟ್​ನಲ್ಲಿದ್ದಾಗ, ಮನೆಯಲ್ಲಿದ್ದೀವೇನೋ ಎಂಬ ಫೀಲಿಂಗ್​ ಬರುತ್ತಿತ್ತು. ಸಿನಿಮಾ ಎಂಬ ಭಾವನೆಯೇ ಬರಲಿಲ್ಲ. ಮೊದಲ ಚಿತ್ರದಲ್ಲೇ ಬಹಳ ಒಳ್ಳೆಯ ಅನುಭವವಾಯಿತು. ಇನ್ನು ಆ ಪಾತ್ರ ಸಹ ಬಹಳ ಎಮೋಷನಲ್​ ಆಗಿತ್ತು. ಇಡೀ ಚಿತ್ರದಲ್ಲಿ ನನ್ನ ಪಾತ್ರವಿದೆ. ಲಂಬಾಣಿ ಪಾತ್ರವಾದ್ದರಿಂದ ತೂಕ ಇರುವ ಕಾಸ್ಟ್ಯೂಮ್​ಗಳನ್ನು ಹಾಕಿಕೊಳ್ಳಬೇಕಿತ್ತು. 25 ಕೆಜಿ ತೂಕದ ಕಾಸ್ಟ್ಯೂಮ್​ ತೊಟ್ಟು ಡ್ಯಾನ್ಸ್​ ಮಾಡಿದ್ದೇನೆ’ ಎನ್ನುತ್ತಾರೆ ರಜನಿ.

Discover more from KannadaScreens

Subscribe now to keep reading and get access to the full archive.

Continue reading