ಸುದೀಪ್ ಮತ್ತು ತಮ್ಮ ನಡುವಿನ ಪ್ರಕರಣದ ಕುರಿತು ರವಿಚಂದ್ರನ್ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ, ತಾನು ಅದಕ್ಕೆ ಬದ್ಧ ಎಂದು ಹಿರಿಯ ನಿರ್ಮಾಪಕ ಎಂ.ಎನ್. ಕುಮಾರ್ ಸಹ ಹೇಳಿದ್ದಾರೆ.
ಮಂಗಳವಾರವಷ್ಟೇ, ಕೆಲವು ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ಈ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದರು. ಬುಧವಾರ, ರವಿಚಂದ್ರನ್ ಅವರ ಮನೆಗೆ ಕುಮಾರ್ ಭೇಟಿ ಕೊಟ್ಟು ಆಗಿದ್ದೆಲ್ಲವನ್ನೂ ವಿವರಿಸಿದ್ದಾರೆ. ಈ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವ ವಿಶ್ವಾಸವನ್ನು ರವಿಚಂದ್ರನ್ ಸಹ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕುಮಾರ್, ‘ರವಿಚಂದ್ರನ್ ಅವರು ಸಮಸ್ಯೆ ಬಗೆಹರಿಸಿಕೊಡುತ್ತೀನಿ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಅವರು ಕೇಳಿದ ಪ್ರಶ್ನೆ, ತಮ್ಮ ಮೇಲೆ ನಂಬಿಕೆ ಇದೆಯಾ, ತಾವು ಹೇಳಿದ್ದನ್ನು ಕೇಳುತ್ತೀರಾ? ಎಂದು. ನಿಮ್ಮ ಮೇಲೆ ಸಂಪೂರ್ಣವಾಗಿ ನಂಬಿಕೆ ಇದೆ. ನೀವೇನು ತೀರ್ಮಾನ ತೆಗೆದುಕೊಳ್ಳುತ್ತೀರೋ ಅದಕ್ಕೆ ಬದ್ಧರಾಗಿರುತ್ತೀವಿ ಅಂತ ಹೇಳಿದ್ದೇನೆ’ ಎನ್ನುತ್ತಾರೆ ಕುಮಾರ್.
ಸುದೀಪ್ ಹೆಸರು ಹಾಳು ಮಾಡುವುದು ತಮ್ಮ ಉದ್ದೇಶವಲ್ಲ ಎನ್ನುವ ಕುಮಾರ್. ‘ನನ್ನ ಹತ್ತಿರ ಇರುವ ದಾಖಲೆಗಳನ್ನು ಬಹಿರಂಗಪಡಿಸಿದರೆ ಬೇರೆಯವರಿಗೆ ನೋವಾಗಬಾರದು ಎಂದು ಯಾರಿಗೂ ಕೊಟ್ಟಿಲ್ಲ. ಅದನ್ನು ರವಿಚಂದ್ರನ್ ಅವರಿಗೆ ತೋರಿಸುತ್ತೇನೆ. ಯಾವ ಸ್ಟಾರ್ ಹೆಸರು ಹಾಳು ಮಾಡುವುದು ನನ್ನ ಉದ್ದೇಶವಲ್ಲ. ನನಗೆ ಅದೆಲ್ಲ ಇಷ್ಟವೂ ಇಲ್ಲ. ಸ್ಟಾರ್ ಗೆ ಕೆಟ್ಟ ಹೆಸರು ತರುವ ಮನೋಭಾವ ನನಗೆ ಇಲ್ಲ. ಇದುವರೆಗೂ ಹಲವು ನಾಯಕರನ್ನು ಪರಿಚಯ ಮಾಡಿದ್ದೇನೆ. ಹಲವರ ಜೊತೆಗೆ ಕೆಲಸ ಮಾಡಿದ್ದೇನೆ. ಯಾರ ಹೆಸರಿಗೂ ಮಸಿ ಬಳಿಯುವ ಕೆಲಸವನ್ನು ನಾನು ನನ್ನ ಜೀವನದಲ್ಲೇ ಮಾಡಿಲ್ಲ. ಒಂದು ಸಮಸ್ಯೆಗೆ ಸಿಲುಕಿದ್ದೇನೆ. ಅದಕ್ಕೆ ಸ್ಪಂದಿಸಿ, ಪರಿಹಾರ ಕೊಡಿ ಎನ್ನುವುದಷ್ಟೇ ನನ್ನ ಮನವಿ’ ಎನ್ನುತ್ತಾರೆ ಕುಮಾರ್.

