ಬಿಡುಗಡೆಗೆ ಎರಡು ದಿನ ಇದೆ ಎನ್ನುವಾಗ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದವರ ವಿರುದ್ಧ ತನ್ನ ಅನುಮತಿ ಇಲ್ಲದೆ ಸಿನಿಮಾಗಳಲ್ಲಿ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾಗೆ ಹಿನ್ನಡೆಯಾಗಿದೆ. ಈ ಪ್ರಕರಣದಲ್ಲಿ ಚಿತ್ರತಂಡಕ್ಕೆ ಗೆಲುವು ಸಿಕ್ಕಿದ್ದು, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಾಳೆ ಶುಕ್ರವಾರ (ಜುಲೈ 21) ರಿಲೀಸ್ ಮಾಡಲು ನ್ಯಾಯಾಲಯವು ಅವಕಾಶ ಮಾಡಿಕೊಟ್ಟಿದೆ. ತೀರ್ಪು ತಮ್ಮ ಪರವಾಗಿ ಬಂದಿದ್ದಕ್ಕೆ ಚಿತ್ರತಂಡ ನರ್ತಕಿ ಚಿತ್ರಮಂದಿರದ ಎದುರು ಪಟಾಕಿ ಸಿಡಿಸಿ ಹಾಡು ಹೇಳಿ ಸಂಭ್ರಮಿಸಿದೆ.
ಈ ಪ್ರಕರಣದ ಕುರಿತು ಮಾತನಾಡಿರುವ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ, ‘ನಾಳೆ ನಮ್ಮ ಸಿನಿಮಾ ಬಿಡುಗಡೆಗೆ ರಮ್ಯಾ ಮೇಡಂ ಸ್ಟೇ ತಂದಿದ್ದರು. ಆದರೆ, ಇವತ್ತು ಕೇಸ್ ತೆರವುಗೊಳಿಸಲಾಗಿದೆ. ಚಿತ್ರ ಬಿಡುಗಡೆಗೆ ಯಾವುದೇ ತೊಂದರೆ ಇಲ್ಲ. ಮೂರ್ನಾಲ್ಕು ದಿನಗಳಿಂದ ಇದೇ ವಿಷಯವಾಗಿ ಓಡಾಡುತ್ತಿದ್ದರಿಂದ ಬುಕ್ಕಿಂಗ್ ಓಪನ್ ಆಗಿರಲಿಲ್ಲ. ಈಗ ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ. ರಮ್ಯಾ ಅವರು ಖುಷಿಯಿಂದಲೇ ನಟಿಸಿದ್ದರು. ಅವರ ಬಗ್ಗೆ ನಮಗೆ ತುಂಬಾ ಗೌರವ ಇದೆ. ಅವರು ‘ಲೇಡಿ ಸೂಪರ್ ಸ್ಟಾರ್’. ನಮ್ಮ ಸಿನಿಮಾಗೆ ಸ್ಟೇ ತಂದಿದ್ದು ಸ್ವಲ್ಪ ಬೇಜಾರ್ ಆಗಿದೆ’ ಎಂದರು.
ಆದರೆ, ನಿರ್ಮಾಪಕ ವರುಣ್ ಗೌಡ ಮಾತ್ರ ರಮ್ಯಾ ಬಗ್ಗೆ ಯಾವುದೇ ಬೇಸರ ಇಲ್ಲ, ಇದೊಂದು ಸಣ್ಣ ಮನಸ್ಥಾಪವಷ್ಟೇ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಯಾವುದೋ ಒಂದು ಮಿಸ್ ಅಂಡರ್ಸ್ಟ್ಯಾಂಡಿಗ್ ನಿಂದ ಈ ರೀತಿ ಆಗಿದೆ. ನಮಗೆ ರಮ್ಯಾ ಮೇಡಂ ಬಗ್ಗೆ ಬೇಜಾರ್ ಇಲ್ಲ. ಮನೆಯಲ್ಲಿ ಅಣ್ಣ, ತಮ್ಮ ಗಲಾಟೆ ಮಾಡಿಕೊಂಡಾಗ ಮನಸ್ತಾಪ ಉಂಟಾಗುತ್ತದೆ. ಆ ರೀತಿ ಒಂದು ಮನಸ್ತಾಪ ಅಷ್ಟೇ’ ಎಂದಿದ್ದಾರೆ.
ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ ಮತ್ತು ಸುರೇಶ್ ಸಂಕಲನವಿದೆ.


