‘ಕೃಷ್ಣ ಲೀಲಾ’ ನಂತರ ಅಜೇಯ್ ಅಭಿನಯದ ಯಾವೊಂದು ಚಿತ್ರ ಸಹ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅವರಿಗೆ ಒಂದು ತುರ್ತಾದ ಯಶಸ್ಸು ಸಿಗಬೇಕು ಎನ್ನುವುದರ ಜೊತೆಗೆ, ಅವರು ಒಂದು ದೊಡ್ಡ ರಿಸ್ಕ್ನಲ್ಲಿದ್ದಾರಂತೆ. ಇಷ್ಟಕ್ಕೂ ಆ ರಿಸ್ಕ್ ಏನು? ಎಂಬುದನ್ನು ಅಜೇಯ್ ರಾವ್ ಇತ್ತೀಚೆಗೆ ಒಂದು ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ನಾನು ಸಾಕಷ್ಟು ಸೋಲು ಕಂಡಿದ್ದೇನೆ. ಅಜೇಯ್ ಚೆನ್ನಾಗಿ ನಟಿಸಿಲ್ಲ ಎಂದು ಚಿತ್ರ ಸೋತಿದ್ದರೆ ಬೇಸರವಾಗುತ್ತಿರಲಿಲ್ಲ. ಆದರೆ, ನಾನು ಚೆನ್ನಾಗಿ ನಟನೆ ಮಾಡಿದ್ದರೂ, ಮೊದಲ ದಿನದಿಂದ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದರೂ ಸೋಲುವುದು ಬೇಸರದ ವಿಷಯ. ನಾನ್ಯಾವತ್ತೂ ಕ್ಯಾರಾವಾನ್ ಕೊಡಿ ಎಂದು ಕೇಳಿಲ್ಲ. ನೀವು ಯಾವ ನಿರ್ಮಾಪಕರನ್ನು ಬೇಕಾದರೂ ಕೇಳಿ ನೋಡಿ. ಒಂದೇ ಒಂದು ದಿನ ನಾನು ನನ್ನ ಲಕ್ಸುರಿಗಾಗಿ ಯಾರನ್ನು, ಏನನ್ನೂ ಕೇಳಿಲ್ಲ. ಚಿತ್ರಾನ್ನ ಕೊಟ್ಟರೂ ತಿಂದಿದ್ದೀನಿ. ಏನು ಕೊಡದಿದ್ದರೂ ಬ್ರೆಡ್ ಜಾಮ್ ತರಿಸಿಕೊಂಡು ತಿಂದಿದ್ದೀನಿ. ನನ್ನ ಪ್ರೊಡಕ್ಷನ್ನಲ್ಲೂ ಕ್ಯಾರಾವಾನ್ ಬೇರೆಯವರಿಗೆ ಕೊಟ್ಟು, ನಾನು ಹೊರಗೆ ಕೂತು ಮೇಕಪ್ ಹಾಕಿಕೊಂಡಿದ್ದಿದೆ. ನಾನು ಅದರ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ತಲೆ ಕೆಡಿಸಿಕೊಂಡಿದ್ದರೆ ಅದು ಸಿನಿಮಾ ಚೆನ್ನಾಗಿ ಬರಬೇಕು ಎಂಬ ವಿಷಯದ ಬಗ್ಗೆ ಮಾತ್ರ’ ಎನ್ನುತ್ತಾರೆ ಅಜೇಯ್.
ಅಜೇಯ್ಗೆ ತಮಗೆ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಬೇಸರವಿದೆಯಂತೆ. ‘ನನ್ನ ಕ್ಯಾಲಿಬರ್ಗೆ ದೊಡ್ಡ ವೇದಿಕೆ ಸಿಕ್ಕಿಲ್ಲ. ಹಾಗಂತ ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಅಂತ ಹೇಳುತ್ತಿಲ್ಲ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದರು. ಆದರೆ, ನನಗೆ ಅಲ್ಲಿ ತಪ್ಪುಗಳು ಕಾಣಿಸುತ್ತಿತ್ತು. ಅದನ್ನು ಹೇಳುವ ಪ್ರಯತ್ನ ಮಾಡಿದೆ. ಕೆಲವರು ಅರ್ಥ ಮಾಡಿಕೊಂಡರು. ಕೆಲವರು ತಪ್ಪರ್ಥ ಮಾಡಿಕೊಂಡಿದ್ದೂ ಇದೆ. ನಿಜ ಹೇಳಬೇಕೆಂದರೆ, ಈಗ ನಾನು ಡೆಡ್ಲೈನ್ನಲ್ಲಿದ್ದೀನಿ. ನನಗೀಗ 43 ವರ್ಷ. ಎಷ್ಟೋ ಯುವಕರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಸಿನಿಮಾ ಬದಲಾಗುತ್ತಿದೆ. ತುಂಬಾ ದೊಡ್ಡ ರಿಸ್ಕ್ ಇದೆ. ನಾನು ಹೀರೋ ಆಗಿ ಎಂಟ್ರಿ ಕೊಟ್ಟಾಗ, ನನಗೆ ಕನೆಕ್ಟ್ ಆದವರು ಇವತ್ತು ಅಂಕಲ್-ಆಂಟಿಗಳಾಗಿದ್ದಾರೆ. ಅವರ ಮಕ್ಕಳು ಈಗ ಕಾಲೇಜ್ಗೆ ಹೋಗುತ್ತಿದ್ದಾರೆ. ಅವರು ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡುವುದಿಲ್ಲ. ಅವರಿಗೆ ಬೇರೆ ಹೀರೋಗಳಿದ್ದಾರೆ. ಇನ್ನು, ಅವರಪ್ಪಮ್ಮ ಚಿತ್ರಮಂದಿರಕ್ಕೆ ಬರುವುದಿಲ್ಲ. ನಾನು ಅವರಿಗೂ ಸಲ್ಲಬೇಕು, ಇವರಿಗೂ ಸಲ್ಲಬೇಕು. ಅಂತಹ ರಿಸ್ಕಿ ಪರಿಸ್ಥಿತಿಯಲ್ಲಿ ನಾನಿದ್ದೇನೆ’ ಎಂದು ವಿವರಿಸುತ್ತಾರೆ ಅವರು.
Read More: ಈ ‘ಹತ್ಯ’ಗೆ ದೇಶದ ಹಲವೆಡೆ ನಡೆದ ಕ್ರೈಮ್ಗಳೇ ಸ್ಪೂರ್ತಿ …
ಅದೇ ಕಾರಣಕ್ಕೆ ಅವರು ಬಹಳ ಚ್ಯೂಸಿಯಾಗಿದ್ದಾರಂತೆ. ‘ನಾನು ಸಿಕ್ಕಸಿಕ್ಕ ಸಿನಿಮಾಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಚ್ಯೂಸಿಯಾಗುವುದು ಅನಿವಾರ್ಯ. ಅಜೇಯ್ ರಾವ್ ಸಿನಿಮಾಗಳಿಗೆ ಮುಂಚಿನ ತರಹ ಓಪನಿಂಗ್ ಇರುವುದಿಲ್ಲ. ನನಗೆ ಆ ಸತ್ಯ ಗೊತ್ತಿದೆ. ನನ್ನ ಚಿತ್ರಕ್ಕೆ ಇಷ್ಟು ಓಪನಿಂಗ್ ಸಿಗುತ್ತದೆ, ಇಷ್ಟು ಕೋಟಿ ಕಲೆಕ್ಷನ್ ಆಗುತ್ತದೆ ಎಂಬ ಭ್ರಮೆಯಲ್ಲಿ ನಾನಿಲ್ಲ. ನಾನು ಸ್ಟಾರ್ ಅಲ್ಲ. ನಾನೊಬ್ಬ ನಟ ಮತ್ತು ಸೆಲೆಬ್ರಿಟಿ ಮಾತ್ರ. ನಾನು ಒಳ್ಳೆಯ ಸಿನಿಮಾ ಕೊಡಬೇಕು ಅಷ್ಟೇ. ಚ್ಯೂಸಿಯಾಗುವುದು ಅನಿವಾರ್ಯ. ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಿದರೆ, ಇನ್ನೊಂದಿಷ್ಟು ಸಮಯ ಸಿಗಬಹುದು’ ಎನ್ನುತ್ತಾರೆ ಅಜೇಯ್.
ಹಾಗಾಗಿ, ಅಜೇಯ್ಗೆ ಚಿತ್ರರಂಗದಲ್ಲಿ ಉಳಿಯುವುದೇ ತಮ್ಮ ಮೊದಲ ಆದ್ಯತೆಯಾಗಿದೆಯಂತೆ. ‘ನನ್ನ ಮೊದಲ ಆದ್ಯತೆ ಸರ್ವೈವ್ ಆಗಬೇಕು. ಅದಕ್ಕೆ ಯಶಸ್ಸು ಸಿಗಬೇಕು. ನನ್ನ ಮುಂದಿನ ಚಿತ್ರ ‘ಯುದ್ಧಕಾಂಡ’ಕ್ಕೆ ನಾನು ಹಾಕಿದ ಐದಾರು ಕೋಟಿ ಬಂಡವಾಳಕ್ಕಿಂತ ಒಂಚೂರು ಲಾಭ ಬಂದರೆ, ಇನ್ನೊಬ್ಬ ನಿರ್ಮಾಪಕರು ನನ್ನ ಜೊತೆಗೆ ಚಿತ್ರ ಮಾಡುವುದಕ್ಕೆ ಮುಂದೆ ಬರುತ್ತಾರೆ. ಮುಂದೆ ಬರುವವರು ಸಹ ಇದೇ ಬಜೆಟ್ನಲ್ಲಿ ಚಿತ್ರ ಮಾಡಬಹುದು ಎಂಬ ನಿರೀಕ್ಷೆ ಇಲ್ಲ. ನನ್ನ ಹಿಂದಿನ ಸಿನಿಮಾ ಬಜೆಟ್ ಇದುವರೆಗೂ ನಾಲ್ಕು ಕೋಟಿ ದಾಟಿಲ್ಲ. ಅಜೇಯ್ ರಾವ್ ಮೇಲೆ ಇಷ್ಟು ಹಾಕಿದರೆ ಇಷ್ಟು ಬರುತ್ತದೆ ಎಂಬ ನಂಬಿಕೆ ಚಿತ್ರರಂಗಕ್ಕೆ ಬಂದಿಲ್ಲ. ನನ್ನ ಹಿಂದಿನ ಕೆಲವು ಚಿತ್ರಗಳು ಗೆದ್ದಿದ್ದರೂ, ಅಲ್ಲೊಂದು ಪರ್ಯಾಯ ಶಕ್ತಿ ಇತ್ತು. ಕೆಲವು ಚಿತ್ರಗಳಲ್ಲಿ ಶಶಾಂಕ್ ಇದ್ದರು. ಆರ್. ಚಂದ್ರು ಇದ್ದರು. ಪ್ರೇಮ್ ಇದ್ದರು. ಅಜೇಯ್ ಒಬ್ಬನ ಮೇಲೆ ಇಷ್ಟು ಹಾಕಿ ಇಷ್ಟು ತೆಗೆದಿದ್ದೇವೆ ಎಂಬ ಪ್ರೂಫ್ ಎಲ್ಲಿದೆ? ಅದನ್ನು ನಾನು ಈಗ ಪ್ರೂವ್ ಮಾಡಬೇಕು’ ಎನ್ನುತ್ತಾರೆ ಅಜೇಯ್ ರಾವ್.


