ಅವಕಾಶ ಕೊಡದಿದ್ದರೂ ಪರವಾಗಿಲ್ಲ, ತುಳಿಯಬೇಡಿ: ಬೇಸರ ಹೊರಹಾಕಿದ ಜೆಕೆ

ಚಂದನವನ, ಸಂದರ್ಶನ, ಸಿನಿ ಸುದ್ದಿ

ಕಿರುತೆರೆಯ ಸೂಪರ್​ಸ್ಟಾರ್​ ಎಂದನಿಸಿಕೊಂಡಿದ್ದ ಜೆಕೆ ಕೆಲವು ದಿನಗಳ ಹಿಂದೆ ಇನ್​ಸ್ಟಾಂಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಬಹುಶಃ ಐರಾವನ್​ ಮತ್ತು ಕಾಡಾ ಚಿತ್ರಗಳ ತಮ್ಮ ಕೊನೆಯ ಚಿತ್ರಗಳು ಎಂದು ಹೇಳಿದ್ದರು. ಆ ಚಿತ್ರಗಳ ನಂತರ ಅವರು ಚಿತ್ರರಂಗದಿಂದ ದೂರವಾಗುವ ಕುರಿತು ಸೂಕ್ಷ್ಮವಾಗಿ ಹಿಂಟ್​ ಕೊಟ್ಟಿದ್ದರು. ಹಾಗಾದರೆ, ಜೆಕೆ ಚಿತ್ರರಂಗದಿಂದ ನಿಜಕ್ಕೂ ದೂರವಾಗುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.

ಕನ್ನಡದ ಪ್ರತಿಭಾವಂತ ಕಲಾವಿದರಲ್ಲಿ ಜೆಕೆ ಸಹ ಒಬ್ಬರು. ಆದರೆ, ಅವರಿಗೆ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಬೇಸರ ಅವರಿಗೂ ಸೇರಿದಂತೆ ಹಲವರಿಗೆ ಇದೆ. ವಿಲನ್​ ಮತ್ತು ಹೀರೋ ಪಾತ್ರಗಳಲ್ಲಿ ಮಿಂಚಿದರೂ, ಅದ್ಯಾಕೋ ಅವರು ನಿರೀಕ್ಷೆಯಂತೆ ಕನ್ನಡ ಚಿತ್ರರಂಗದಲ್ಲಿ ಬೆಳೆಯಲಿಲ್ಲ. ಈಗ ಜೆಕೆ ತಮ್ಮ ಮುಂದಿನ ದಾರಿಯನ್ನು ಕಂಡುಕೊಂಡಿದ್ದಾರೆ. ಬೇರೆ ಕೆಲಸ ಮಾಡುವುದಕ್ಕೆ ಯೋಚಿಸಿದ್ದಾರೆ. ಆ ತೀರ್ಮಾನಕ್ಕೆ ಯಾಕೆ ಬರಬೇಕಾಯಿತು ಎಂದು ‘ಐರಾವನ್’​ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಹಿಂದಿ ಧಾರಾವಾಹಿಗಳನ್ನು ಮುಗಿಸಿಕೊಂಡು ಬಂದೆ. ಅದಾದ ಮೇಲೆ ಯಾವುದೇ ಚಿತ್ರ ಮಾಡಲಿಲ್ಲ. ಆಗಲೇ ನಾನು ಬೇರೆ ಲೈನ್​ಗೆ ಶಿಫ್ಟ್​ ಆಗಬೇಕು ಎಂದು ಯೋಚಿಸಿದ್ದೆ. ಅಷ್ಟರಲ್ಲಿ ‘ಐರಾವನ್​’ ನಿರ್ಮಾಪಕ ಗಣೇಶ್ ಅವರು ಸಿಕ್ಕಿದರು. ಅಷ್ಟರಲ್ಲಿ ಅವರು ಸಹ ನನ್ನನ್ನು ರೀಚ್​ ಆಗುವುದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದರಂತೆ. ನನ್ನ ಆತ್ಮೀಯ ಸ್ನೇಹಿತರೆಲ್ಲ ಅವರನ್ನು ತಡೆಯೋಕೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೂ ಅವರು ನನ್ನನ್ನು ಸಂಪರ್ಕಿಸಿ, ಈ ಚಿತ್ರ ಮಾಡೋಣ ಎಂದರು. ಈ ಕಥೆ ಕೇಳಿದೆ, ಇಷ್ಟವಾಯಿತು ಒಪ್ಪಿಕೊಂಡೆ’ ಎನ್ನುತ್ತಾರೆ ಜೆಕೆ.

‘ಒಂದು ಚಿತ್ರಕ್ಕೆ ಸಾಕಷ್ಟು ಕಷ್ಟಪಡುತ್ತೇನೆ. ನನ್ನ ಪ್ರತಿಭೆ ಮೇಲೆ ಬೆಳೆಯುವುದಕ್ಕೆ ಪ್ರಯತ್ನ ಮಾಡುತ್ತೇನೆ. ಆದರೂ ಕೆಲವರು ಅವಕಾಶಗಳನ್ನು ಕಟ್​ ಮಾಡಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ. ಅದು ನನಗೆ ಗೊತ್ತಾಗುತ್ತದೆ. ನನ್ನನ್ನು ಮನೆಯವರು ಬೇರೆ ರೀತಿಯಲ್ಲಿ ಬೆಳೆಸಿದ್ದಾರೆ. ಒಬ್ಬರು ನನಗೆ ಕಷ್ಟಕೊಟ್ಟರೂ, ಅವರನ್ನು ಕೆಳಕ್ಕೆ ಎಳೆಯಬಾರದು ಎಂದು ಹೇಳಿಕೊಟ್ಟಿದ್ದಾರೆ. ನನ್ನ ಲೈಫ್​ನಲ್ಲಿ ಖುಷಿಯಾಗಿರಬೇಕು ಎಂಬುದು ನನ್ನ ಪಾಲಿಸಿ. ಕಾರ್ಪೋರೇಟ್​ ಲೈಫ್​ನಿಂದ ಬಂದಿರುವುದರಿಂದ ಸುಮ್ಮನೆ ಒದ್ದಾಡುವುದಕ್ಕೆ ಇಷ್ಟವಿಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಪ್ರತೀ ಪಾತ್ರಕ್ಕೂ ನನ್ನ 100 ಪರ್ಸೆಂಟ್​ ಕೊಡುತ್ತೇನೆ. ಪಾತ್ರಕ್ಕೆ ಏನು ಬೇಕಾದರೂ ಮಾಡಿದ್ದೇನೆ. ಕಾಡ ಚಿತ್ರಕ್ಕೂ ರೋಪ್​ ಇಲ್ಲದೆ ಕಷ್ಟಪಟ್ಟು ಸ್ಟಂಟ್​ ಮಾಡಿದ್ದೇನೆ. ಅಷ್ಟೊಂದು ಕಷ್ಟಪಟ್ಟವರಿಗೆ ಅವಕಾಶ ಕೊಡದಿದ್ದರೂ ಪರವಾಗಿಲ್ಲ, ಸುಮ್ಮನೆ ತುಳಿಯಬೇಡಿ ಎನ್ನುತ್ತಾರೆ’ ಅವರು.

Read More: Exclusive – ಮತ್ತೊಂದು ಕಥಾಸಂಗಮ; ಮತ್ತೆ ಚಿತ್ರ ನಿರ್ದೇಶನಕ್ಕೆ ಶಂಕರ್​

ಇದೆಲ್ಲದರಿಂದ ಬೇಸರಗೊಂಡು ಅವರು ಬೇರೆ ಉದ್ಯೋಗದತ್ತ ವಾಲಿದ್ದಾರಂತೆ. ಚಿತ್ರರಂಗದಿಂದ ದೂರ ಉಳಿಯುವುದಕ್ಕೆ ತೀರ್ಮಾನಿಸಿದ್ದಾರಂತೆ. ‘ಯಾಕೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಗೊತ್ತಿದ್ದರೆ ಕೇಳಬಹುದಿತ್ತು. ನನಗೆ ಬೇರೆ ಕಡೆ ಅಷ್ಟೊಂದು ಗೌರವ ಸಿಗುತ್ತದೆ. ಹಿಂದಿಯಲ್ಲಿ ‘ಸಿಯಾ ಕೆ ರಾಮ್’​ ಎಂಬ ಧಾರಾವಾಹಿ ಮಾಡಿದೆ. ಅದೆಷ್ಟು ಕಷ್ಟವಾಗಿತ್ತು ಎಂದು ನನಗೆ ಮಾತ್ರ ಗೊತ್ತು. ಅದು ಮುಗಿದ ಮೇಲೆ ಬೇರೆ ಮಾಡಬಹುದಾಗಿತ್ತು. ನನ್ನ ಭಾಷೆ, ನನ್ನ ಕನ್ನಡ ಸಿನಿಮಾ ಎಂದು ಇಲ್ಲಿಗೆ ಬಂದೆ. ಬೇರೆ ಧಾರಾವಾಹಿಗಳನ್ನು ಬಿಟ್ಟು ಬಂದೆ. ‘ಮಹಾಕಾಳಿ’ ಎಂಬ ಧಾರಾವಾಹಿಯಲ್ಲಿ ಶಿವನ ಪಾತ್ರ ಬಿಟ್ಟು ಬಂದೆ. ಇನ್ನೊಂದು ಹಿಂದಿ ಧಾರಾವಾಹಿಯಲ್ಲಿ ಲೀಡ್​ ರೋಲ್​ ಸಿಕ್ಕಿತ್ತು. ಬಿಟ್ಟು ಬಂದೆ. ನಮ್ಮ ಭಾಷೆ ಅಂತ ಇಲ್ಲಿಗೆ ಬಂದೆ. ಆದರೆ, ಇಲ್ಲಿ ಸೂಕ್ತ ಸಹಕಾರ ಸಿಗಲಿಲ್ಲ. ಎಲ್ಲಿ ನನಗೆ ಸಹಕಾರ ಸಿಗುವುದಿಲ್ಲವೋ, ಅಲ್ಲಿ ಇರುವುದಕ್ಕೆ ಇಷ್ಟಪಡುವುದಿಲ್ಲ ಎನ್ನುತ್ತಾರೆ.

ಇನ್ನೂ ಎಷ್ಟು ಅಂತ ಇದನ್ನೆಲ್ಲ ಸಹಿಸಲಿ ಎನ್ನುವ ಅವರು, ‘ಇವತ್ತು ಹಣ ಬಹಳ ಮುಖ್ಯ. ಮೊದಲೆಲ್ಲ ಹೆಸರು ಮುಖ್ಯವಾಗಿತ್ತು. ಈಗ ದುಡ್ಡಿಲ್ಲ ಎಂದರೆ ಬದುಕುವುದು ಕಷ್ಟ. ನಾನೊಬ್ಬ ಸ್ಟ್ರಕ್ಚರಲ್​ ಇಂಜಿನಿಯರ್​. ನನಗೆ ಅಲ್ಲಿ ಬದುಕಬಹುದು ಎಂಬ ನಂಬಿಕೆ ಇದೆ. ಹಾಗಾಗಿ, ಇನ್ನು ಮುಂದೆ ಆ ಕಡೆ ಹೋಗುವುದಕ್ಕೆ ಯೋಚಿಸಿದ್ದೇನೆ. ಮುಂದೆ ಒಳ್ಳೆಯ ನಿರ್ಮಾಪಕರು ಸಿಕ್ಕರೆ, ಒಳ್ಳೆಯ ಕಥೆಗಳು ಸಿಕ್ಕರೆ ಚಿತ್ರ ಮಾಡುತ್ತೇನೆ. ಐರಾವಾನ್​ ಮತ್ತು ಕಾಡ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಅದು ಬಿಡುಗಡೆಯಾದ ಮೇಲೆ ಮುಂದೆ ಗೊತ್ತಿಲ್ಲ’ ಎನ್ನುತ್ತಾರೆ.

ಹಾಗಾದರೆ, ಜೆಕೆ ಚಿತ್ರರಂಗದಿಂದ ನಿಜಕ್ಕೂ ದೂರವಾಗುತ್ತಾರಾ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

Discover more from KannadaScreens

Subscribe now to keep reading and get access to the full archive.

Continue reading