ದಸರಾಗೆ ಕನ್ನಡ ಚಿತ್ರವೇ ಇಲ್ಲ; ಕರ್ನಾಟಕದಲ್ಲಿ ‘ಜೈಲರ್’ vs ‘ರಣಬಾಲಿ’

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಇತ್ತೀಚಿನ ವರ್ಷಗಳಲ್ಲಿ ಇದು ಮಾಮೂಲಿ ಆಗಿಬಿಟ್ಟಿದೆ. ಹಿಂದೊಮ್ಮೆ ಹಬ್ಬದ ಸೀಸನ್‍ ಬಂದರೆ, ನಿರೀಕ್ಷಿತ ಚಿತ್ರಗಳು ಬಿಡುಗಡೆ ಆಗುತ್ತಿದ್ದವು. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ನಿರೀಕ್ಷಿತ ಕನ್ನಡ ಚಿತ್ರಗಳ ನಡುವೆ ಪೈಪೋಟಿ ನಡೆದಿದ್ದೂ ಇದೆ. ಆದರೆ, ಈಗ ಹಬ್ಬದ ಸೀಸನ್‍ ಎಂದರೆ ಪರಭಾಷಾ ಚಿತ್ರಗಳೇ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿವೆ. ಅದು ಈ ಬಾರಿಯೂ ಮುಂದುವರೆದಿದೆ.

ಈ ಬಾರಿ ದಸರಾ ಹಬ್ಬದ ಸಂದರ್ಭದಲ್ಲಿ ಯಾವುದೇ ಕನ್ನಡ ಚಿತ್ರ ಬಿಡುಗಡೆ ಆಗುತ್ತಿಲ್ಲ ಎಂಬುದು ಗಮನಾರ್ಹ. ಈ ಬಾರಿ ತಮಿಳಿನ ‘ಜೈಲರ್‍ 2’ ಮತ್ತು ತೆಲುಗಿನ ‘ರಣಬಾಲಿ’ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿವೆ. ಇವೆರಡೂ ಚಿತ್ರಗಳ ಜೊತೆಗೆ ಕನ್ನಡದ ‘ಪ್ರೇಮದ ಊರಲಿ’ ಚಿತ್ರವು ಪ್ರದರ್ಶನ ಮುಂದುವರೆಸಲಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ದಸರಾ ಹಬ್ಬಕ್ಕೆ ಗಣೇಶ್‍ ಅಭಿನಯದ ‘ಬೃಂದಾವಿಹಾರಿ’ ಚಿತ್ರವು ಬಿಡುಗಡೆ ಆಗಬೇಕಿತ್ತು. ಹಬ್ಬದ ಸೀಸನ್‍ ಆಗಿದ್ದರೂ, ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆ ಆಗಬಹುದು ಎಂಬ ಸೂಚನೆ ಇದ್ದರೂ, ಅಕ್ಟೋಬರ್ 16ಕ್ಕೆ ಚಿತ್ರದ ಬಿಡುಗಡೆಯನ್ನು ಘೋಷಿಸಲಾಗಿತ್ತು.

‘ಬೃಂದಾ ವಿಹಾರಿ’ ಚಿತ್ರದ ಬಿಡುಗಡೆಯನ್ನು ಅಕ್ಟೋಬರ್‍ 16ರಂದು ಘೋಷಿಸಿದ ಸಂದರ್ಭದಲ್ಲಿ ಹಲವರು, ನಿರ್ಮಾಪಕ ಸಮೃದ್ಧಿ ಮಂಜುನಥ್‍ ಅವರಿಗೆ ಕರೆ ಮಾಡಿ ‘ಜೈಲರ್ 2’ ಬರುತ್ತಿದೆ ಎಂದು ಹೆದರಿಸಿದರಂತೆ. ‘ಇದು ನನ್ನ ಕನ್ನಡ ಸಿನಿಮಾ.‌ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಇದೆ. ಆ ನಂಬಿಕೆ ಮೇಲೆ ಜಗತ್ತಿನಾದ್ಯಂತ 1300 ಪರದೆಯಲ್ಲಿ ಚಿತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಮಂಜುನಾಥ್‍ ಹೇಳಿಕೊಂಡಿದ್ದರು. ಆದರೆ, ಚಿತ್ರದ ಬಿಡುಗಡೆಗೆ ಒಂದು ವಾರವಿದೆ ಎನ್ನುವಾಗ ಬಿಡುಗಡೆಯನ್ನು ಮುಂದೂಡಲಾಗಿದೆ. ‘ಸದ್ಯ ‘ಪ್ರೇಮದ ಊರಲಿ’ ಎಲ್ಲಾ ಕಡೆ ಚೆನ್ನಾಗಿ ಹೋಗುತ್ತಿದೆ. ಹಾಗಾಗಿ, ನಮ್ಮ ಚಿತ್ರದ ಬಿಡುಗಡೆಯನ್ನು ಅ.16ರಿಂದ ನ.20ಕ್ಕೆ ಮುಂದಕ್ಕೆ ಹಾಕಿದ್ದೇವೆ’ ಎಂದು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

‘ಬೃಂದಾವಿಹಾರಿ’ ಚಿತ್ರವು ಕೆಲವು ತಿಂಗಳುಗಳ ಹಿಂದೆಯೇ ತಯಾರಾಗಿತ್ತು. ಆದರೆ, ಹಬ್ಬದ ಸೀಸನ್‍ನಲ್ಲೇ ಬಿಡುಗಡೆ ಮಾಡಬೇಕೆಂದು ಚಿತ್ರತಂಡದವರು ಇಲ್ಲಿಯವರೆಗೂ ಕಾದರು. ಕಳೆದ ಕೆಲವು ತಿಂಗಳಲ್ಲಿ ಕನ್ನಡದಿಂದ ಯಾವುದೇ ನಿರೀಕ್ಷಿತ ಚಿತ್ರವಿರಲಿಲ್ಲ. ಆಗಾದರೂ, ‘ಬೃಂದಾವಿಹಾರಿ’ಯನ್ನು ಬಿಡುಗಡೆ ಮಾಡಬಹುದಿತ್ತು. ಆಗಲೂ ಬಿಡುಗಡೆ ಮಾಡಲಿಲ್ಲ. ಈಗ ಚಿತ್ರ ಒಂದು ತಿಂಗಳು ಮುಂದಕ್ಕೆ ಹೋಗಿದೆ. ನವೆಂಬರ್ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂದು ಪ್ಲಾನ್‍ ಮಾಡಿದ್ದವರು ಈಗ ಮುಂದಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಚಿತ್ರರಂಗದವರು ಮಾತಾಡಿಕೊಳ್ಳುತ್ತಿದ್ದಾರೆ. ಈಗ ‘ಬೃಂದಾವಿಹಾರಿ’ಯ ಅನುಪಸ್ಥಿತಿಯಲ್ಲಿ ‘ಜೈಲರ್ 2’ ಮತ್ತು ‘ರಣಬಾಲಿ’ ಚಿತ್ರಗಳು ಬಿಡುಗಡೆ ಆಗುತ್ತಿವೆ.

ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ನಿರ್ಮಿಸುತ್ತಿದ್ದು, ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ. ಇದೊಂದು ಪ್ಯಾನ್-ಇಂಡಿಯಾ ಚಿತ್ರವಾಗಿದ್ದು, ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಈ ಚಿತ್ರವು ಶುಕ್ರವಾರ (ಅಕ್ಟೋಬರ್‍ 16) ಬಿಡುಗಡೆ ಆಗಲಿದೆ.

‘ಜೈಲರ್ 2’ ಚಿತ್ರದಲ್ಲಿ ರಜನಿಕಾಂತ್‍, ರಮ್ಯಾ ಕೃಷ್ಣನ್‍, ಎಸ್‍.ಜೆ. ಸೂರ್ಯ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದು, ಅತಿಥಿ ಪಾತ್ರಗಳಲ್ಲಿ ಮಿಥುನ್‍ ಚಕ್ರವರ್ತಿ, ಮೋಹನ್‍ ಲಾಲ್‍, ಶಿವರಾಜಕುಮಾರ್, ವಿದ್ಯಾ ಬಾಲನನ್‍, ಹೃತಿಕ್‍ ರೋಶನ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ನೆಲ್ಸನ್‍ ದಿಲೀಪ್‍ ಕುಮಾರ್ ನಿರ್ದೇಶನ ಮಾಡಿದ್ದು, ಸನ್‍ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್‍ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್‍ ಸಂಗೀತ ಚಿತ್ರಕ್ಕಿದೆ.

‘ಬೃಂದಾವಿಹಾರಿ’ ಮುಂದೆ ಹೋಗಲು ‘ಪ್ರೇಮದ ಊರಲಿ’ ಕಾರಣವಾ?

Discover more from KannadaScreens

Subscribe now to keep reading and get access to the full archive.

Continue reading