‘ಪುಷ್ಪ ಓಕೆ, ರಾಕಿ ಓಕೆ, ಧನಂಜಯ ಮಚ್ಚು ಹಿಡಿದರೆ ಯಾಕೆ ಇಷ್ಟ ಆಗಲ್ಲ?’

ಚಂದನವನ, ಸಂದರ್ಶನ, ಸಿನಿ ಸುದ್ದಿ

ಧನಂಜಯ ಅಭಿನಯದ ‘ಅಣ್ಣ ಫ್ರಮ್‍ ಮೆಕ್ಸಿಕೋ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದರ ಹಿಂದೆಯೇ ಸಣ್ಣ ವಿವಾದವೊಂದು ಹುಟ್ಟುಕೊಂಡಿದೆ. ಟೀಸರ್‍ನಲ್ಲಿ ಧನಂಜಯ, ಮಚ್ಚನ್ನು ತಮ್ಮ ಆಪ್ತ ಗೆಳೆಯ ಎನ್ನುತ್ತಾರೆ. The World-Famous Karnataka Weapon – The Long ಎನ್ನುತ್ತಾರೆ. ‘ಅವನನ್ನ ನಾನು ಕೈಯಲ್ಲಿ ಹಿಡಿದ ಮೇಲೆ ಹುಡುಗ್ರು ನನ್ನ ಕೈ ಹಿಡಿದಿದ್ದು. Come on say hello to him Amigos …’ ಎಂಬ ಸಂಭಾಷಣೆಗಳು ಚರ್ಚೆಗೆ ಕಾರಣವಾಗಿದೆ.

ಈ ವಿಷಯಗಳು ನಂತರ ನಡೆದ ಪತ್ರಿಕಾಗೋಷ್ಠಿಯಲ್ಲೂ ಚರ್ಚೆಯಾಯಿತು. ಈ ಕುರಿತು ಧನಂಜಯ ಅವರನ್ನು ಕೇಳಿದಾಗ, ಪುಷ್ಪ ಹಿಡಿದರೆ ಓಕೆ, ರಾಕಿ ಹಿಡಿದರೆ ಓಕೆ, ಧನಂಜಯ ಮಚ್ಚು ಹಿಡಿದರೆ ಯಾಕೆ ಇಷ್ಟ ಆಗುವುದಿಲ್ಲ ಎಂದು ಪ್ರಶ್ನಿಸಿದರು.

ರೌಡಿಸಂ ಚಿತ್ರಗಳು ಮತ್ತು ಸಿನಿಮಾದಲ್ಲಿ ಹೆಚ್ಚುತ್ರಿರುವ ಕ್ರೌರ್ಯದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಧನಂಜಯ, ‘ಬರೀ ರೌಡಿಸಂ ಸಿನಿಮಾಗಳಷ್ಟೇ ಅಲ್ಲ, ನಾನು ಎಲ್ಲಾ ತರಹದ ಸಿನಿಮಾಗಳನ್ನು ಮಾಡಿದ್ದೇನೆ. ‘ರತ್ನನ್‍ ಪ್ರಪಂಚ’, ‘ಬಡವ ರಾಸ್ಕಲ್‍’ ತರಹದ ಚಿತ್ರಗಳನ್ನೂ ಮಾಡಿದ್ದೇನೆ. ಗ್ಯಾಂಗ್‍ಸ್ಟರ್‍ ಸಿನಿಮಾಗಳಂತ ತೆಗೆದುಕೊಂಡರೆ, ಕ್ಲಾಸಿಕ್‍ ಸಿನಿಮಾಗಳಲ್ಲಿ ಹಾಲಿವುಡ್‍ನಿಂದ ಇಲ್ಲಿಯವರೆಗೂ ಸಾಕಷ್ಟು ಸಿನಿಮಾಗಳು ಬಂದಿವೆ. ಬಹಳಷ್ಟು ಕಲಾವಿದರು ಗ್ಯಾಂಗ್‍ಸ್ಟರ್ ಪಾತ್ರಗಳಲ್ಲಿ ಮಿಂದಿದ್ದಾರೆ. ಅದೂ ಒಂದು ಜಗತ್ತಿದೆ. ಎಲ್ಲರೂ ಅದನ್ನೇ ಪ್ರತಿ ಸಲ ಮಾಡುತ್ತಿರುವುದಿಲ್ಲ. ಆ ಜಗತ್ತನ್ನೂ ಒಂದೊಂದು ಬಾರಿ ತೋರಿಸುವ ಪ್ರಯತ್ನ ಆಗುತ್ತಿರುತ್ತದೆ. ‘ಟಗರು’, ‘ಪಾಪ್‍ಕಾರ್ನ್‍ ಮಂಕಿ ಟೈಗರ್’, ‘ಹೆಡ್‍ ಬುಷ್‍’ ಚಿತ್ರಗಳು ಆ ತರಹದ ಪ್ರಯತ್ನಗಳೇ’ ಎಂದರು.

‘ಅಣ್ಣ ಫ್ರಮ್‍ ಮೆಕ್ಸಿಕೋ’ ಚಿತ್ರವು ರೌಡಿಸಂ ಚಿತ್ರವಲ್ಲ, ಅದು ಬೇರೆ ಜಾನರ್ ಚಿತ್ರ ಎನ್ನುವ ಧನಂಜಯ, ‘ಇದೊಂದು ಸಣ್ಣ ಟೀಸರ್‍ ಅಷ್ಟೇ. ಹಾಗೆ ನೋಡಿದರೆ, ಈಗ ಬರುತ್ತಿರುವ ಯಾವ ಸಿನಿಮಾನೂ ನೋಡುವ ಹಾಗೇ ಇಲ್ಲ. ದೊಡ್ಡದೊಡ್ಡ ಸಿನಿಮಾಗಳಲ್ಲಿ ಎಷ್ಟರ ಮಟ್ಟಿಗೆ ಕ್ರೌರ್ಯ ಮತ್ತು ರಕ್ತಪಾತ ತೋರಿಸಿದ್ದಾರೆ. ಇದು ಆ ತರಹದ ಸಿನಿಮಾ ಅಲ್ಲ. ಇದು ಬರೀ ಟೀಸರ್‍ ಅಷ್ಟೇ. ಲಾಂಗ್‍-ಮಚ್ಚು ಇಲ್ಲದೆ ನಾನು ಸಹ ಸಿನಿಮಾ ಮಾಡಿದ್ದೀನಿ. ಜನ ಸಹ ನೋಡಿದ್ದಾರೆ. ಎಲ್ಲಾ ತರಹದ ಸಿನಿಮಾಗಳಿಗೂ ಜಾಗ ಇದೆ. ಪ್ರೇಕ್ಷಕರು ಎಲ್ಲಾ ರೀತಿಯ ಸಿನಿಮಾಗಳನ್ನು ನೋಡುತ್ತಾರೆ. ಆ ಪ್ರೇಕ್ಷಕರನ್ನು ನಾವು ಕಳೆದುಕೊಳ್ಳಬಾರದು. ಮಾಸ್ ಎಂದರೆ ಬರೀ ಲಾಂಗು-ಮಚ್ಚು ಚಿತ್ರಗಳಷ್ಟೇ ಅಲ್ಲ. ರತ್ನನ್‍ ಪ್ರಪಂಚ ಮತ್ತು ಬಡವ ರಾಸ್ಕಲ್‍ ಸಹ ಮಾಸ್‍ ಚಿತ್ರಗಳಾಗಿದ್ದವು. ಕೋಟಿ ಎಂಬ ಬಹಳ ಡೀಸೆಂಟ್‍ ಪಿಕ್ಚರ್ ಮಾಡಿದ್ದೆ’ ಎಂದರು.

‘ಟೀಸರ್‍ನಲ್ಲಿ ನಾನು ಮಚ್ಚಿಗೆ ಬೆಸ್ಟ್ ಫ್ರೆಂಡ್‍ ಎಂದಿರುವುದಕ್ಕೆ ಕಾರಣವಿದೆ. ನಾನು ಡಾಲಿಯಾದ ಮೇಲೆ ಹಿಟ್‍ ಆಗಿದ್ದು. ಅದಕ್ಕಿಂತ ಮುನ್ನ ಅಲ್ಲಮ ಪ್ರಭು ಎಂಬ ಸಿನಿಮಾ ಮಾಡಿದ್ದೆ. ಆ ಚಿತ್ರ ಹಿಟ್‍ ಆಗಿದ್ದಿದ್ದರೆ, ನಾನು ಒಂದು ವಚನ ಹೇಳಿಯೇ ಸಿನಿಮಾ ಶುರು ಮಾಡಿರುತ್ತಿದ್ದೆ. ಡಾಲಿಯಾದ ಮೇಲೆ ನಾನು ಯಶಸ್ವಿಯಾಗಿದ್ದು. ರಕ್ತ ಮತ್ತು ಲಾಂಗ್‍ಗಳ ಹೊರತುಪಡಿಸಿ ಸಹ ಚಿತ್ರ ಮಾಡಬಹುದು. ಇಷ್ಟಕ್ಕೂ ಗನ್‍ ಹಿಡಿದುಕೊಂಡು ರಕ್ತಪಾತ ಮಾಡಿದರೆ ಓಕೆನಾ? ಮಚ್ಚು ಹಿಡಿದುಕೊಂಡರೆ ಮಾತ್ರ ಯಾಕೆ ಕ್ರೌರ್ಯ, ರಕ್ತಪಾತವಾಗುತ್ತದೆ? ಪುಷ್ಪ ಓಕೆ, ರಾಕಿ ಓಕೆ, ಧನಂಜಯ್‍ ಮಚ್ಚು ಹಿಡಿದರೆ ಯಾಕೆ ಇಷ್ಟ ಆಗಲ್ಲ?’ ಎಂದು ಪ್ರಶ್ನಿಸಿದರು.

‘ಅಣ್ಣ ಫ್ರಮ್‍ ಮೆಕ್ಸಿಕೋ’ ಚಿತ್ರದಲ್ಲಿ ಧನಂಜಯ, ಅಣ್ಣಪ್ಪ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಮಿಕ್ಕಂತೆ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಬಡವ ರಾಸ್ಕಲ್‍’ ಚಿತ್ರವನ್ನು ನಿರ್ದೇಶಿಸಿದ್ದ ಶಂಕರ್ ಗುರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತ್ಯ ರಾಯಲ, ಐರಾ ಫಿಲಂಸ್‍ ಮತ್ತು ದಿ ರಾಯಲ ಸ್ಟುಡಿಯೋಸ್‍ ಮೂಲಕ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕ್ಲೈಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮಾತ್ರ ಬಾಕಿ ಇದೆ. ಚಿತ್ರವು ವರಮಹಾಲಕ್ಷ್ಮೀ ಹಬ್ಬದ ಹೊತ್ತಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರದಿರುವುದೇ ಇಷ್ಟಕ್ಕೆಲ್ಲಾ ಕಾರಣ: ದಿಗಂತ್‍

Discover more from KannadaScreens

Subscribe now to keep reading and get access to the full archive.

Continue reading