ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಾರಕ್ಕೆ ನಾಲ್ಕೈದು ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿರುವಾಗ, ಕಳೆದ ಶುಕ್ರವಾರ (ಮಾರ್ಚ್ 27) ಯಾವುದೇ ಕನ್ನಡ ಚಿತ್ರ ಬಿಡುಗಡೆಯಾದ ಹೆಚ್ಚು ಸದ್ದಾಗಲಿಲ್ಲ. ಶುಕ್ರವಾರ ಯಾವುದೇ ಚಿತ್ರ ಬಿಡುಗಡೆಯಾಗಲಿಲ್ಲ ಅಂದುಕೊಂಡವರ ನಂಬಿಕೆಯನ್ನು ಸುಳ್ಳು ಮಾಡುವುದಕ್ಕೆ ನಾಲ್ಕು ಹೊಸ ಚಿತ್ರಗಳು ಬಿಡುಗಡೆಯಾಗಿವೆ.
ಹೌದು, ಮಾರ್ಚ್ 27ರಂದು ನಾಲ್ಕು ಹೊಸ ಚಿತ್ರಗಳು ಬಿಡುಗಡೆಯಾಗಿವೆ. ಪಲ್ಲಕ್ಕಿ ರಾಧಾಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಚಾಮಯ್ಯ ಸನ್ ಆಫ್ ರಾಮಾಚಾರಿ’, ದೇವರಾಜಕುಮಾರ್ ನಿರ್ದೇಶನದ ಮತ್ತು ಅಭಿನಯದ ‘ಆಯುಧ’, ಹೊಸಬರ ‘ಯಾವ ಮೋಹನ ಮುರಳಿ ಕರೆಯಿತೋ’ ಮತ್ತು ‘ಜನ್ಮದಾತೆ’ ಎಂಬ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಮತ್ತು ‘ಜನ್ಮದಾತೆ’ ಚಿತ್ರಗಳು ಸಣ್ಣ ಪ್ರಚಾರವೂ ಇಲ್ಲದೆ, ಯಾರಿಗೂ ಗೊತ್ತಾಗದಂತೆ ಬಿಡುಗಡೆ ಆಗಿದೆ. ಹೀಗಾಗುತ್ತಿರುವುದು ಇದು ಮೊದಲೇನಲ್ಲ, ಈ ಹಿಂದಿನ ಕೆಲವು ವಾರಗಳಲ್ಲಿ ಅದೆಷ್ಟೋ ಚಿತ್ರಗಳು, ಯಾವುದೇ ಸುಳಿವಿಲ್ಲದೆ, ಯಾವುದೇ ಪ್ರಚಾರವಿಲ್ಲದೆ ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ.
‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರವು ‘ನಾಗರಹಾವು’ ಚಿತ್ರದ ಮುಂದುವರೆದ ಭಾಗವಂತೆ. ಮೂಲ ಸಿನಿಮಾದ ಕ್ಲೈಮಾಕ್ಸ್‌ದಲ್ಲಿ ರಾಮಾಚಾರಿ ಮತ್ತು ಮಾರ್ಗರೆಟ್ ಬೆಟ್ಟದ ಮೇಲಿಂದ ಬೀಳುತ್ತಾರೆ ಎಂದು ತೋರಿಸಲಾಗಿದೆ. ಅವರೇನಾದರೂ ಎಂದು ತೋರಿಸಿಲ್ಲ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ರಾಮಾಚಾರಿ ಬದುಕಿದ್ದು, ಅವನ ಜೀವನದಲ್ಲಿ ಮುಂದೇನೆಲ್ಲಾ ಆಗುತ್ತದೆ ಎಂಬುದರ ಕುರಿತು ಚಿತ್ರ ಸಾಗುತ್ತದಂತೆ. ಈ ಚಿತ್ರವನ್ನು ವಿಷ್ಣುವರ್ಧನ್ ಅವರು ಬದುಕಿದ್ದಾಗಲೇ ಮಾಡಬೇಕೆಂದು, ಅವರಿಗೆ ಕಥೆ ಹೇಳಿದ್ದರಂತೆ ಪಲ್ಲಕ್ಕಿ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಸುಮಾರು 20 ವರ್ಷಗಳ ಕನಸು ಕೊನೆಗೂ ಈಗ ನನಸಾಗಿದೆ. ಆದರೆ, ಇಂಥದ್ದೊಂದು ಚಿತ್ರ ಬಿಡುಗಡೆ ಆಗಿದೆ ಎಂದು ಯಾರಿಗೂ ಗೊತ್ತೇ ಇಲ್ಲ ಎಂಬುದು ದುರಂತ.
ಇನ್ನು, ಮೇಕಪ್ ಕಲಾವಿದ ದೇವರಾಜ್ ಕುಮಾರ್ ನಿರ್ದೇಶಿಸುವುದರ ಜೊತೆಗೆ ನಟಿಸಿದ ಚಿತ್ರ ‘ಆಯುಧ’. ಮೂರು ವರ್ಷಗಳ ಹಿಂದೆ ‘ತಾಜ್ ಮಹಲ್ ೨’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ದೇವರಾಜ್, ಆ ಚಿತ್ರದ ನಷ್ಟದಿಂದ ಡಿಪ್ರೆಶನ್‍ಗೆ ಹೋದರಂತೆ. ಇನ್ನು ಸಿನಿಮಾ ಮಾಡುವುದೇ ಬೇಡ ಅಂದುಕೊಂಡವರು, ‘ಆಯುಧ’ ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದಾರೆ. ಚಿತ್ರ ಬಂದಿದ್ದೇ ಗೊತ್ತಾಗದಂತ ಪರಿಸ್ಥಿತಿ ಇದೆ. ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ ಅದೆಷ್ಟು ಪ್ರದರ್ಶನಗಳು ನಡೆಯಿತೋ, ಎಷ್ಟು ರದ್ದಾಯಿತೋ ಎಂದು ಲೆಕ್ಕ ಇಟ್ಟವರಿಲ್ಲ.
ಅದೇ ರೀತಿ, ‘ಯಾವ ಮೋಹನ ಮುರಳಿ ಕರೆಯಿತೋ’ ಮತ್ತು ‘ಜನ್ಮದಾತೆ’ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಯಾವುದೇ ಪ್ರಚಾರವಿಲ್ಲದೆ ಚಿತ್ರತಂಡಗಳು ಚಿತ್ರಗಳನ್ನು ಬಿಡುಗಡೆ ಮಾಡಿವೆ. ಇಂಥ ಚಿತ್ರಗಳು ಬಿಡುಗಡೆಯಾಗಿರುವುದು ಮತ್ತು ಪ್ರದರ್ಶನವಾಗುತ್ತಿರುವ ವಿಷಯಗಳೇ ಪ್ರೇಕ್ಷಕರಿಗೆ ಗೊತ್ತಿಲ್ಲ. ಹಾಗಿರುವಾಗ, ಈ ಚಿತ್ರಗಳ ಗತಿಯೇನು? ಯಾವ ಸಂತೋಷಕ್ಕೆ ಈ ಚಿತ್ರಗಳನ್ನು ಮಾಡಲಾಯಿತು? ಈ ಚಿತ್ರಗಳಿಂದ ಆದ ನಷ್ಟವೆಷ್ಟು? ಚಿತ್ರ ಮಾಡುವಾಗ ಉತ್ಸಾಹದಿಂದ ಮಾಡುವ ಚಿತ್ರತಂಡದವರು, ಬಿಡುಗಡೆ ಆಗುವಾಗ ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ? ಕನಿಷ್ಠ ಪ್ರಚಾರವೂ ಇಲ್ಲದೆ ಯಾಕೆ ಬಿಡುಗಡೆ ಮಾಡುತ್ತಾರೆ? ಚಿತ್ರ ಬಿಡುಗಡೆ ಆಗಿದೆ ಎಂದು ಪ್ರೇಕ್ಷಕರಿಗೆ ಗೊತ್ತಾಗುವುದು ಹೇಗೆ? ಇದ್ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ.
‘GoUK’ ಬರೀ ಗ್ಯಾಂಗ್‍ಸ್ಟರ್‍ಗಳ ಕಥೆಯಲ್ಲ; ಹೆಣ್ಣಿನ ರಕ್ತಕಣ್ಣೀರಿನ ಕಥೆ: ರವಿ ಶ್ರೀವತ್ಸ


