‘GoUK’ ಬರೀ ಗ್ಯಾಂಗ್‍ಸ್ಟರ್‍ಗಳ ಕಥೆಯಲ್ಲ; ಹೆಣ್ಣಿನ ರಕ್ತಕಣ್ಣೀರಿನ ಕಥೆ: ರವಿ ಶ್ರೀವತ್ಸ

ಚಂದನವನ, ಸಿನಿ ಸುದ್ದಿ

ರವಿ ಶ್ರೀವತ್ಸ ನಿರ್ದೇಶನದ ‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಟ್ರೇಲರ್ ನೋಡಿ ಜನ ಬೆಚ್ಚಿಬಿದ್ದಿದ್ದರು. ಚಿತ್ರದಲ್ಲಿ ಕ್ರೌರ್ಯ, ರಕ್ತಪಾತ ಮತ್ತು ಹಿಂಸೆ ನೋಡಿ ಸಾಕಷ್ಟು ಟೀಕಿಸಿದ್ದರು. ಇದು ಇನ್ನೊಂದು ಗ್ಯಾಂಗ್‍ಸ್ಟರ್‍ಗಳ ಕಥೆ ಎಂಬ ಅಭಿಪ್ರಾಯಕ್ಕೆ ಬರುವಾಗಲೇ, ಇದು ಬರೀ ಗ್ಯಾಂಗ್‍ಸ್ಟರ್‍ಗಳ ಕಥೆಯಲ್ಲ, ಹೆಣ್ಣಿನ ರಕ್ತಕಣ್ಣೀರಿನ ಕಥೆ ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರವು ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ಚಂದನ್‍ ಸುರೇಶ್‍ ರಾಜ್ಯಾದ್ಯಂತ ತಮ್ಮ ಚಂದನ್‍ ಫಿಲಂಸ್‍ ಸಂಸ್ಥೆಯ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಶನಿವಾರ ಸಂಜೆ ಮಲ್ಲೇಶ್ವರದ ಎಸ್‍.ಆರ್‍.ವಿ ಪ್ರಿವ್ಯೂ ಥಿಯೇಟರ್‍ನಲ್ಲಿ ಚಿತ್ರದ ಟೀಸರ್‍ ಬಿಡುಗಡೆಯಾಗಿದೆ. ಹಿರಿಯ ವಿತರಕ ಸಂಜೀವ ಮೂರ್ತಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಚಂದನ್‍ ಸುರೇಶ್‍, ನಿರ್ಮಾಪಕರಾದ ‘ಸೂರಪ್ಪ’ ಬಾಬು, ಕೆ. ಮಂಜು ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ರವಿ ಶ್ರೀವತ್ಸ ಈ ಚಿತ್ರ ಕೈಗೆತ್ತಿಕೊಂಡ ಕಾರಣವನ್ನು ವಿವರಿಸಿದರು. ‘ಕಥೆಯಲ್ಲಿ ಇರುವ ಪಾತ್ರಧಾರಿಗಳು ಇವತ್ತಿಗೂ ಜೀವಂತವಾಗಿದ್ದಾರೆ ಮತ್ತು ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸಮಾಜ, ವ್ಯವಸ್ಥೆ ಮತ್ತು ಆರಕ್ಷಕರು ಇವರ್ಯಾರ ಸಹಾಯವಿಲ್ಲದೆ ರಕ್ತಕಣ್ಣೀರು ಹಾಕಿಕೊಂಡು ಸುಮ್ಮನಿದ್ದಾರೆ. ನಮ್ಮನ್ನು ಹೊರಕ್ಕೆ ತರಬೇಡಿ, ನೀವೇನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹೇಗೆ ಇದರಲ್ಲಿ ಸಿಕ್ಕಿಕೊಂಡೆ ಎಂದು ಪ್ರಶ್ನಿಸಿದರೆ, ಆ ತಾಯಿ ತನ್ನ ಮಕ್ಕಳನ್ನು ತೋರಿಸಿ ಸುಮ್ಮನಾಗುತ್ತಾಳೆ. ಆ ಮಕ್ಕಳಿಗಾಗಿ ಬದುಕುತ್ತಿದ್ದೇನೆ ಎನ್ನುತ್ತಾಳೆ. ಅವಳಿಗಿಂತ ಇನ್ನೊಬ್ಬ ಹಿರಿಯ ಹೆಣ್ಣು ಇದ್ದಾಳೆ ಮತ್ತು ಅವಳು ತನ್ನ ಕಥೆಯನ್ನು ಈ ಕಥೆಯ ಮೂಲಕ ಹೇಳುತ್ತಾಳೆ. ಇದು ತಾಯಿಯ ಕಣ್ಣೀರನ ಕಥೆಯಾದರೆ, ಇನ್ನೊಂದರ್ಥದಲ್ಲಿ ಹೆಣ್ಣಿನ ರಕ್ತಕಣ್ಣೀರಿನ ಕಥೆ’ ಎಂದರು.

‘ಗ್ಯಾಂಗ್ಸ್ ಆಫ್‍ ಯುಕೆ’ ಎಂದರೆ ಹೊಡೆದಾಟ, ಬಡಿದಾಟ, ಗ್ಯಾಂಗ್‍ಸ್ಟರ್‍ಗಳು ಇಷ್ಟೇ ಅಲ್ಲ ಎನ್ನುವ ರವಿ ಶ್ರೀವತ್ಸ, ‘ಇದಕ್ಕೂ ಭೀಮಾತೀರದ ಹಂತಕರ ಕಥೆಗೂ ಸಂಬಂಧವಿಲ್ಲ. ನಮ್ಮಲ್ಲಿ ಕಾಳ, ಅವನ ಮುಗ್ಧ ತಂಗಿ ಕಾಳಿ, ಶಿವಯ್ಯ ಸಾಹುಕಾರ, ಅವನ ಮಾವ ವಿರೂಪಾಕ್ಷ ಸಾಹುಕಾರ, ರುದ್ರೇಶ ಇಂಥ ಪಾತ್ರಗಳಿವೆ. ಒಂದು ಸಣ್ಣ ಗಲಾಟೆಯಿಂದ ಶುರುವಾಗಿ, ಜನ ಹೇಗೆ ಹೋರಾಡುತ್ತಾರೆ ಮತ್ತು ರಕ್ತ ಹೇಗೆ ನಿರಂತರವಾಗಿ ಹರಿಯುತ್ತಾ ಹೋಗುತ್ತದೆ ಎಂದು ತೋರಿಸಿದ್ದೇವೆ. ಇದಕ್ಕೆ ಒಂದಿಷ್ಟು ಜನ ಬಂದು ಸೇರಿಕೊಳ್ಳುತ್ತಾ ಹೋಗುತ್ತಾರೆ. ಏಕೆಂದರೆ, ರಕ್ತ ಬಿಸಿಯಾಗಿರುತ್ತದೆ ಮತ್ತು ರಕ್ತ ತನ್ನದವರದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಸಿಕ್ಕ ಆ ಮಣ‍್ಣಿನ ಗಟ್ಟಿತನದ ಕಥೆ ಇದು’ ಎಂದರು.

‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರವನ್ನು ರವಿ ಶ್ರೀವತ್ಸ, ಡೆಡ್ಲಿ ಆರ್ಟ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ‘ಒರಟ’ ಪ್ರಶಾಂತ್‍, ಮುನಿ, ಪದ್ಮಾವಾಸಂತಿ, ಸೋನು ಉಪಾಧ್ಯ, ಪ್ರವೀಣ್, ‘ಉಗ್ರಂ’ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಅಮೋಘ್‍ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆರ್‍. ಗಿರಿ ಛಾಯಾಗ್ರಹಣವಿದೆ.

ಜೂನ್ 26ಕ್ಕೆ ‘ಸಿಂಪಲ್‍’ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’

Latest Posts

Discover more from KannadaScreens

Subscribe now to keep reading and get access to the full archive.

Continue reading