‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ ವಿಷಯವನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ಕಳೆದ ವರ್ಷದ ಕೊನೆಯಲ್ಲಿ ಹೈದರಾಬಾದ್‍ನಲ್ಲಿ ಸುದೀಪ್ ಭಾಗದ ಚಿತ್ರೀಕರಣ ಸಹ ಯಶಸ್ವಿಯಾಗಿ ಮುಗಿದಿದೆ. ಆದರೆ, ಸುದೀಪ್ ಅವರ ಪಾತ್ರವೇನು, ಅವರ ಪಾತ್ರದ ಹೆಸರೇನು ಎಂದು ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ರಾಮನವಮಿಯ ಪ್ರಯುಕ್ತ ‘ಕೆಡಿ – ದಿ ಡೆವಿಲ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಸುದೀಪ್ ಈ ಚಿತ್ರದಲ್ಲಿ ಕಾಲಭೈರವ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಶಿಯಲ್ಲಿ ಉರಿಯುತ್ತಿರುವ ಚಿತೆಯ ಮುಂದೆ ಸುದೀಪ್ ನಿಂತಿದ್ದು, ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದಿದ್ದಾರೆ.
ಸುದೀಪ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಕೊನೆಯಲ್ಲಿ ಬರುತ್ತಾರೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಅಷ್ಟೇ ಅಲ್ಲ, ‘ಕೆಡಿ’ ಚಿತ್ರದ ಎರಡನೇ ಭಾಗಕ್ಕೆ ಕಾಲಭೈರವನ ಪಾತ್ರ ಲೀಡ್ ಕೊಡಲಿದೆಯಂತೆ.

‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸುವುದರ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮುಂತಾದವರು ನಟಿಸಿದ್ದಾರೆ. ಈಗ ಈ ತಾರಾಗಣಕ್ಕೆ ಸುದೀಪ್ ಸಹ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ, ‘ಕೆಡಿ – ದಿ ವಿಲನ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.
‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.


